ಯಾವ ತಂಡಗಳು ಸೆಮಿ ಫೈನಲ್‌ಗೆ ತಲುಪಲಿವೆ?

Update: 2019-06-20 18:45 GMT

  ಲಂಡನ್, ಜೂ.20: ವಿಶ್ವಕಪ್ ಟೂರ್ನಿಯ ಗ್ರೂಪ್ ಹಂತದ ಪಂದ್ಯಗಳು ಅರ್ಧದಷ್ಟು ಕೊನೆಗೊಂಡಿದ್ದು, ಅಫ್ಘಾನಿಸ್ತಾನ ಹಾಗೂ ದಕ್ಷಿಣ ಆಫ್ರಿಕ ಮುಂದಿನ ಸುತ್ತಿಗೇರುವ ಸ್ಪರ್ಧೆಯಿಂದ ನಿರ್ಗಮಿಸಿವೆ. ಭಾರತ, ನ್ಯೂಝಿಲ್ಯಾಂಡ್, ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯ ಅಂಕಪಟ್ಟಿಯಲ್ಲಿ ಅಗ್ರ-4 ಸ್ಥಾನದಲ್ಲಿವೆ. ಈ ತಂಡಗಳ ಪೈಕಿ ಯಾವ ತಂಡ ಸೆಮಿ ಫೈನಲ್ ತಪ್ಪಿಸಿಕೊಳ್ಳಲಿದೆ ಎಂದು ಈಗಲೇ ಊಹಿಸುವುದು ಕಷ್ಟಕರ.

ಬಾಂಗ್ಲಾದೇಶ, ವೆಸ್ಟ್‌ಇಂಡೀಸ್, ಪಾಕಿಸ್ತಾನ ಹಾಗೂ ಶ್ರೀಲಂಕಾ ಸಂಭಾವ್ಯ ನಾಲ್ಕನೇ ಸ್ಥಾನ ಪಡೆಯುವತ್ತ ಚಿತ್ತವಿರಿಸಿವೆ.

ನೂ್ಯಝಿಲಾ್ಯಂಡ್

ಈ ತನಕ ಒಂದೂ ಸೋಲನ್ನೇ ಕಾಣದೇ ಅಜೇಯ ಓಟ ಮುಂದುವರಿಸಿರುವ ನ್ಯೂಝಿಲ್ಯಾಂಡ್ ಸೆಮಿ ಫೈನಲ್‌ಗೆ ತಲುಪುವುದು ನಿಶ್ಚಿತ. ಆದರೆ, ಅಗ್ರ-2ರಲ್ಲಿ ಸ್ಥಾನ ಪಡೆಯುವುದು ತುಸು ಕಷ್ಟಕರ.

ಇಂಗ್ಲೆಂಡ್

ಅಂಕಪಟ್ಟಿಯಲ್ಲಿ ಅಗ್ರ ಸ್ಥಾನದಲ್ಲಿರುವ ಭಾರತ, ನ್ಯೂಝಿಲ್ಯಾಂಡ್ ಹಾಗೂ ಆಸ್ಟ್ರೇಲಿಯ ತಂಡಗಳ ವಿರುದ್ಧ ಇನ್ನಷ್ಟೇ ಆಡಬೇಕಾಗಿರುವ ಇಂಗ್ಲೆಂಡ್ ತಂಡ ಪಾಕಿಸ್ತಾನ ವಿರುದ್ಧ ಸೋತಿತ್ತು. ಇದೀಗ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿರುವ ಆತಿಥೇಯರು ಹೆಚ್ಚು-ಕಡಿಮೆ ಸೆಮಿಫೈನಲ್‌ಗೆ ತನ್ನ ಸ್ಥಾನ ದೃಢಪಡಿಸಿಕೊಂಡಿದ್ದಾರೆ.

ಆಸ್ಟ್ರೇಲಿಯ

ಭಾರತ ವಿರುದ್ಧ ಪಂದ್ಯವನ್ನು ಸೋತಿರುವುದನ್ನು ಹೊರತುಪಡಿಸಿ ಆಸ್ಟ್ರೇಲಿಯ ತನ್ನ ಹಳೆಯ ಶೈಲಿಯಲ್ಲೇ ಟೂರ್ನಿಯಲ್ಲಿ ಆಡುತ್ತಿದೆ. ಇಂಗ್ಲೆಂಡ್ ಹಾಗೂ ನ್ಯೂಝಿಲ್ಯಾಂಡ್ ವಿರುದ್ಧ ಇನ್ನಷ್ಟೇ ಆಡಬೇಕಾಗಿದೆ. ಅದಾಗ್ಯೂ, ಮುಂದಿನ ಸುತ್ತಿಗೆ ಅರ್ಹತೆ ಪಡೆಯುವುದು ಖಚಿತ.

ಭಾರತ

 ನ್ಯೂಝಿಲ್ಯಾಂಡ್ ವಿರುದ್ಧ ಪಂದ್ಯ ಒಂದೂ ಎಸೆತ ಕಾಣದೇ ಮಳೆಗಾಹುತಿಯಾಗಿರುವುದು ಬಿಟ್ಟರೆ ಉಳಿದ 3 ಪಂದ್ಯಗಳಲ್ಲಿ ಭಾರತ ಜಯ ದಾಖಲಿಸಿದೆ. ಇನ್ನುಳಿದ ಪಂದ್ಯಗಳಲ್ಲಿ ಜಯ ಸಾಧಿಸುವ ಸಾಧ್ಯತೆ ಅಧಿಕವಿದೆ. ಇಂಗ್ಲೆಂಡನ್ನು ಮಣಿಸಿ ಗ್ರೂಪ್ ಹಂತದಲ್ಲಿ ಅಗ್ರ ಸ್ಥಾನಕ್ಕೇರುವುದು ಕೊಹ್ಲಿ ಪಡೆಗಿರುವ ಕಠಿಣ ಸವಾಲಾಗಿದೆ.

ಬಾಂಗ್ಲಾದೇಶ

ತನ್ನ ಸಾಮರ್ಥ್ಯಕ್ಕಿಂತ ಉತ್ತಮ ಪ್ರದರ್ಶನ ನೀಡುತ್ತಿರುವ ಬಾಂಗ್ಲಾದೇಶ ಸೆಮಿ ಫೈನಲ್‌ಗೆ ಅರ್ಹತೆ ಪಡೆಯಬೇಕಾದರೆ ಭಾರತ, ಆಸ್ಟ್ರೇಲಿಯ ಹಾಗೂ ಪಾಕಿಸ್ತಾನದಂತಹ ಬಲಿಷ್ಠ ತಂಡಗಳನ್ನು ಮಣಿಸಬೇಕಾಗಿದೆ.ಹೀಗಾಗಿ ಬಾಂಗ್ಲಾಕ್ಕೆ ಅಲ್ಪ ಅವಕಾಶವಿದೆ.

ಶ್ರೀಲಂಕಾ

ಒಂದು ಕಾಲದಲ್ಲಿ ವಿಶ್ವದ ಅಗ್ರ ತಂಡಗಳಿಗೆ ಬೆವರಿಳಿಸಿದ್ದ ಶ್ರೀಲಂಕಾ ತಂಡ ಭಾರತ, ಇಂಗ್ಲೆಂಡ್ ವಿರುದ್ಧ ಇನ್ನಷ್ಟೇ ಆಡಬೇಕಾಗಿದೆ. ನೆಟ್‌ರನ್‌ರೇಟ್ ಕಡಿಮೆ ಇರುವ ಕಾರಣ ಗ್ರೂಪ್ ಹಂತದ ಇನ್ನುಳಿದ ಎಲ್ಲ ಪಂದ್ಯಗಳನ್ನು ಗೆಲ್ಲಲೇಬೇಕಾಗಿದೆ.

ವೆಸ್ಟ್‌ಇಂಡೀಸ್

ಸ್ಥಿರ ಪ್ರದರ್ಶನ ನೀಡಲು ವಿಫಲವಾಗಿರುವ ವೆಸ್ಟ್ ಇಂಡೀಸ್ ತಂಡ ಈಗಲೂ ಸಾಧಾರಣ ರನ್‌ರೇಟ್ ಕಾಯ್ದುಕೊಂಡಿದೆ. ಹೀಗಾಗಿ ಮುಂದಿನ ಸುತ್ತಿಗೇರುವ ಅಲ್ಪ ಅವಕಾಶವನ್ನು ಜೀವಂತವಾಗಿಸಿಕೊಂಡಿದೆ. ಆದರೆ, ಮುಂದಿನ ಪಂದ್ಯಗಳಲ್ಲಿ ಭಾರತ ಹಾಗೂ ನ್ಯೂಝಿಲ್ಯಾಂಡ್‌ನ್ನು ಸೋಲಿಸಬೇಕಾಗಿದೆ.

ದಕ್ಷಿಣ ಆಫ್ರಿಕ

ನಿರೀಕ್ಷೆಗಿಂತ ಕೆಳಮಟ್ಟದಲ್ಲಿ ಪ್ರದರ್ಶನ ನೀಡುತ್ತಿರುವ ದಕ್ಷಿಣ ಆಫ್ರಿಕ ತಂಡ ಇನ್ನುಳಿದ 3 ಗ್ರೂಪ್ ಪಂದ್ಯಗಳನ್ನು ಪ್ರತಿಷ್ಠೆಗೋಸ್ಕರ ಆಡಬೇಕಾಗಿದೆ.

ಪಾಕಿಸ್ತಾನ

ಇಂಗ್ಲೆಂಡ್ ವಿರುದ್ಧ ಗ್ರೂಪ್ ಪಂದ್ಯವನ್ನು ಜಯಿಸಿರುವುದು ಹೊರತುಪಡಿಸಿ ಪಾಕ್‌ನ ಪ್ರದರ್ಶನ ಉತ್ತಮವಾಗಿಲ್ಲ. ಕಳಪೆ ರನ್‌ರೇಟ್ ಇರುವ ಕಾರಣ ಉಳಿದ ಗ್ರೂಪ್ ಪಂದ್ಯಗಳಲ್ಲಿ ಜಯ ಸಾಧಿಸಿದರೂ ಮುಂದಿನ ಸುತ್ತಿಗೇರಲು ಇದು ಸಾಕಾಗದು.

ಅಫ್ಘಾನಿಸ್ತಾನ

ಅಂಕಪಟ್ಟಿಯಲ್ಲಿ ಕೆಳ ಸ್ಥಾನದಲ್ಲಿರುವ ಅಫ್ಘಾನಿಸ್ತಾನ ತಂಡ ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಹಾಗೂ ವಿಂಡೀಸ್ ತಂಡಗಳನ್ನು ಎದುರಿಸಲು ಬಾಕಿಯಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News