ಸತ್ಯ-ಅಹಿಂಸೆ ಪಾಲನೆಯೇ ಯೋಗಾಸನದ ಅಂತಿಮ ಧ್ಯೇಯ: ರಾಜ್ಯಪಾಲ ವಜುಭಾಯಿ ವಾಲಾ

Update: 2019-06-21 14:48 GMT

ಬೆಂಗಳೂರು, ಜೂ.21: ಕೇವಲ ಆಸನಗಳನ್ನು ಮಾಡುವುದರಿಂದ ಯೋಗಾಸನವನ್ನು ಮಾಡಿದಂತಾಗುವುದಿಲ್ಲ. ಯೋಗದ ಪ್ರಮುಖ ಭಾಗಗಳಾದ ಸತ್ಯ, ಅಹಿಂಸೆ, ಬ್ರಹ್ಮಚರ್ಯಗಳನ್ನು ಪಾಲಿಸುವುದರಿಂದ ಯೋಗವನ್ನು ಪರಿಪೂರ್ಣವಾಗಿ ಮಾಡಿದಂತಾಗುತ್ತದೆ ಎಂದು ರಾಜ್ಯಪಾಲ ವಜುಭಾಯಿ ವಾಲಾ ತಿಳಿಸಿದರು.

ಶುಕ್ರವಾರ ಬೆಂಗಳೂರು ವಿಶ್ವವಿದ್ಯಾಲಯ ಆಯೋಜಿದ್ದ ಐದನೇ ಅಂತರ್‌ರಾಷ್ಟ್ರೀಯ ಯೋಗ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜೀವನದಲ್ಲಿ ಸದಾ ಸತ್ಯವನ್ನು ಪಾಲಿಸಬೇಕು. ಅಹಿಂಸೆಯನ್ನು ಅಳವಡಿಸಿಕೊಳ್ಳಬೇಕು, ಅಗತ್ಯವಿದ್ದಷ್ಟನ್ನು ಮಾತ್ರ ಇಟ್ಟುಕೊಂಡು ಉಳಿದದ್ದನ್ನು ದಾನ ಮಾಡಬೇಕು, ಬೇರೆಯವರ ವಸ್ತುಗಳನ್ನು ತಮ್ಮದಾಗಿಸಿಕೊಳ್ಳುವ ಆಲೋಚನೆ ಮಾಡಬಾರದು, ಕಾಯಾ ವಾಚಾ ಮನಸಾ ಬ್ರಹ್ಮರ್ಚರ್ಯ ಪಾಲನೆ ಹಾಗೂ ಉತ್ತಮ ಆಲೋಚನೆ ಇವು ಯೋಗದ ಪ್ರಮುಖ ಭಾಗಗಳಾಗಿವೆ ಎಂದು ವಿವರಿಸಿದರು.

ಯೋಗಾಭ್ಯಾಸದಿಂದ ನಮ್ಮ ದೇಹಕ್ಕೆ ಬಲ ಬರುತ್ತದೆ. ದೇಹಕ್ಕೆ ಬಲ ಬಂದರೆ ಹೃದಯ ಗಟ್ಟಿಯಾಗುತ್ತದೆ. ಯೋಗ ಮಾಡುವುದರಿಂದ ಶ್ವಾಸಕೋಶದಲ್ಲಿರುವ ಆಮ್ಲಜನಕ ಹೃದಯಕ್ಕೆ ತಲುಪಿ ಆಮ್ಲಜನಕಯುಕ್ತ ರಕ್ತ ನಮ್ಮ ಶರೀರಕ್ಕೆ ಹರಿದು ದೇಹದ ಎಲ್ಲಾ ಸಮಸ್ಯೆಗಳನ್ನು ದೂರ ಮಾಡುತ್ತದೆ ಎಂದು ಅವರು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೇಣುಗೋಪಾಲ್ ಸ್ವಾಗತಿಸಿದರು. ಕುಲಸಚಿವ ಪ್ರೊ.ಬಿ.ಕೆ.ರವಿ ವಂದಿಸಿದರು. ಕಾರ್ಯಕ್ರಮದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ (ಮೌಲ್ಯಮಾಪನ) ಸಿ. ಶಿವರಾಜ್‌ಕುಮಾರ್, ಬೋಧಕ, ಬೋಧಕೇತರ ಸಿಬ್ಬಂದಿ, ವಿದ್ಯಾರ್ಥಿಗಳು, ಸಂಯೋಜಿತ ಕಾಲೇಜುಗಳ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರು ಸೇರಿದಂತೆ ಸುಮಾರು ಎರಡು ಸಾವಿರ ಜನ ಕಾರ್ಯಕ್ರಮಲ್ಲಿ ಪಾಲ್ಗೊಂಡು ಯೋಗ ಮಾಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News