ಪುತ್ರನ ಜೊತೆಗಿದ್ದ ಪಾಕ್ ನಾಯಕ ಸರ್ಫರಾಝ್ ರನ್ನು ನಿಂದಿಸಿದವನಿಗೆ ಭಾರತೀಯರಿಂದ ಛೀಮಾರಿ

Update: 2019-06-22 10:03 GMT

ಲಂಡನ್, ಜೂ.22: ಐಸಿಸಿ ವಿಶ್ವಕಪ್ ಪಂದ್ಯಾವಳಿಯಲ್ಲಿ ಭಾರತದೆದುರು ಹೀನಾಯ ಸೋಲು ಕಂಡ ಪಾಕಿಸ್ತಾನ ಕ್ರಿಕೆಟ್ ತಂಡದ ಕಪ್ತಾನ ಸರ್ಫರಾಝ್ ಅಹ್ಮದ್ ಅವರನ್ನು ಅವಮಾನಿಸಿ ವೀಡಿಯೋ ಪೋಸ್ಟ್ ಮಾಡಿದವನನ್ನು ಟೀಕಿಸುವ ಮೂಲಕ ಭಾರತ ಮತ್ತು ಪಾಕಿಸ್ತಾನ ದೇಶಗಳೆರಡರ ಕ್ರಿಕೆಟ್ ಅಭಿಮಾನಿಗಳು ಪಾಕ್ ನಾಯಕನಿಗೆ ಬೆಂಬಲವಾಗಿ ನಿಂತಿದ್ದಾರೆ.

 ವೈರಲ್ ಆಗಿರುವ ಈ ವೀಡಿಯೋದಲ್ಲಿ ಸರ್ಫರಾಝ್ ಅಹ್ಮದ್ ಅವರು ಇಂಗ್ಲೆಂಡ್ ನ ಮಾಲ್ ಒಂದರಲ್ಲಿ ತಮ್ಮ ಪುತ್ರನ ಜತೆ ಕಾಣಿಸಿಕೊಳ್ಳುತ್ತಾರೆ. ಆಗ ಅವರನ್ನು ಅಭಿಮಾನಿಯೊಬ್ಬ ತಡೆದು ನಿಲ್ಲಿಸಿ ಫೋಟೋ ತೆಗೆಯುವ  ಬದಲು ವೀಡಿಯೋ ತೆಗೆದು “ನೀವೇಕೆ ಹಂದಿಯ ತರಹ ದಪ್ಪಗಿದ್ದೀರಾ ? ನೀವು ಪಾಕಿಸ್ತಾನಕ್ಕೆ ಹೆಮ್ಮೆ ತಂದಿದ್ದೀರಿ'' ಎಂದು ಹೇಳಿ ಅಣಕಿಸುತ್ತಾನೆ. ಆದರೆ ಇದರಿಂದ ವಿಚಲಿತರಾಗದೆ ಸರ್ಫರಾಝ್ ಹಾಗೆಯೇ ಮುಂದಕ್ಕೆ ನಡೆಯುತ್ತಾರೆ.

ಇಂತಹ ಒಂದು ಸಂದರ್ಭದಲ್ಲಿ ತಮ್ಮ ತಾಳ್ಮೆ ಕಳೆದುಕೊಳ್ಳದೆ ಮೌನವಾಗಿ ತೆರಳಿದ ಸರ್ಫರಾಝ್ ಅವರನ್ನು ಎಲ್ಲರೂ ಹೊಗಳಿದ್ದು, ಅವರನ್ನು ನಿಂದಿಸಿದ ವ್ಯಕ್ತಿಯನ್ನು ಟೀಕಿಸಿದ್ದಾರೆ.

ಭಾರತದ  ಕ್ರಿಕೆಟ್ ಅಭಿಮಾನಿಗಳು ಎಲ್ಲಾ ಭಿನ್ನಾಭಿಪ್ರಾಯಗಳನ್ನೂ ಬದಿಗೊತ್ತಿ ಸರ್ಫರಾಝ್ ಬೆಂಬಲಕ್ಕೆ ನಿಂತಿದ್ದು, ಮೆಚ್ಚುಗೆಗೆ ಪಾತ್ರವಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News