ಬೆಂಗಳೂರು: ಪಬ್ ಮಹಡಿಯಿಂದ ಬಿದ್ದು ಸಾಫ್ಟ್‌ವೇರ್ ಇಂಜಿನಿಯರ್ ಸೇರಿ ಇಬ್ಬರು ಮೃತ್ಯು
ಬೆಂಗಳೂರು, ಜೂ.22: ನಗರ ಪಬ್‌ವೊಂದರ ಮಹಡಿ ಮೇಲಿಂದ ಆಯತಪ್ಪಿ ಬಿದ್ದ ಪರಿಣಾಮ ಸಾಫ್ಟ್‌ವೇರ್ ಇಂಜಿನಿಯರ್ ಸೇರಿ ಇಬ್ಬರು ಮೃತಪಟ್ಟಿರುವ ಘಟನೆ ಇಲ್ಲಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ನಗರದ ಆರ್‌ಎಂವಿ 2ನೇ ಹಂತದ ನಿವಾಸಿ ಪವನ್(36) ಮತ್ತು ಆರ್‌ಟಿ ನಗರದ ನಿವಾಸಿ ವೇದಾ(28) ಮೃತಪಟ್ಟವರು ಎಂದು ಪೊಲೀಸರು ತಿಳಿಸಿದ್ದಾರೆ.
ಇಲ್ಲಿನ ಚರ್ಚ್‌ಸ್ಟ್ರೀಟ್‌ನ ಪಬ್‌ವೊಂದಕ್ಕೆ ಶುಕ್ರವಾರ ರಾತ್ರಿ 9 ಗಂಟೆಗೆ ಬಂದಿದ್ದ ವೇದಾ ಮತ್ತು ಪವನ್, ಮದ್ಯಪಾನ ಮಾಡಿದ್ದಾರೆ. ತಡರಾತ್ರಿ 11:30ರ ಸುಮಾರಿನಲ್ಲಿ ಇಬ್ಬರೂ ಪಬ್‌ನ 2ನೇ ಅಂತಸ್ತಿನಿಂದ ಮೆಟ್ಟಿಲು ಇಳಿದು ಬರುತ್ತಿದ್ದಾಗ ಆಯತಪ್ಪಿ ಕಿಟಕಿಯ ಗ್ರಿಲ್ಸ್ ಮೇಲೆ ಬಿದ್ದಾಗ, ಗ್ರಿಲ್ ಕಳಚಿ ಬಿದ್ದಿದೆ ಎನ್ನಲಾಗಿದೆ. ಆಗ ಇಬ್ಬರೂ ಸಹ ಕೆಳಗೆ ಬಿದ್ದು ತೀವ್ರವಾಗಿ ಗಾಯಗೊಂಡಿದ್ದಾರೆ. ತಕ್ಷಣ ಇವರಿಬ್ಬರನ್ನು ಶಿವಾಜಿನಗರದ ಬೌರಿಂಗ್ ಆಸ್ಪತ್ರೆಗೆ ಕರೆದೊಯುತ್ತಿದ್ದಾಗ ವೇದಾ ಮಾರ್ಗಮಧ್ಯೆ ಮೃತಪಟ್ಟರೆ ಪವನ್ ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಪವನ್ ಗೆ ಈಗಾಗಲೇ ಮದುವೆಯಾಗಿದ್ದು, ಕುಟುಂಬದಿಂದ ದೂರವಾಗಿದ್ದ. ವೇದಾ ಸಹ ವಿವಾಹವಾಗಿದ್ದು, ಕುಟುಂಬದಿಂದ ದೂರ ಇದ್ದರು. ಇತ್ತೀಚಿಗೆ ಇವರಿಬ್ಬರೂ ಸ್ನೇಹಿತರಾದ ನಂತರದಲ್ಲಿ ಒಟ್ಟಾಗಿ ಓಡಾಡುತ್ತಿದ್ದರು ಎನ್ನುವ ಮಾಹಿತಿ ಸಿಕ್ಕಿದೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮೊಕದ್ದಮೆ ದಾಖಲು: ಇಬ್ಬರು ಮೃತಪಟ್ಟ ಪ್ರಕರಣ ಸಂಬಂಧ ನಿರ್ಲಕ್ಷ್ಯ ಆರೋಪದಡಿ ಪಬ್ ವ್ಯವಸ್ಥಾಪಕ ಮತ್ತು ಕಟ್ಟಡ ಮಾಲಕ ವಿರುದ್ಧ ಇಲ್ಲಿನ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿ ತನಿಖೆ ಮುಂದುವರೆಸಲಾಗಿದೆ.