ನೀರಾಯಣ

Update: 2019-06-22 12:57 GMT

ಇಂದ್ರಲೋಕ ಬಡಾವಣೆಯಲ್ಲಿ ಇತ್ತೀಚಿನ ದಿನಗಳಲ್ಲಿ ವಾರಕ್ಕೆರಡೇ ಬಾರಿ ನೀರು ಬರುತ್ತಿದ್ದ ಕಾರಣ ನೀರುಸ್ತುವಾರಿ ನೋಡಿಕೊಳ್ಳುವುದು ಮನೆಯ ಯಜಮಾನ ಪರಮೇಶಿಯದ್ದೇ. ನೀರು ಬರುತ್ತಿದ್ದಂತೆ ಪರಮೇಶಿಯ ಹೆಂಡತಿ ಕಮಲು ಪಾತ್ರೆ, ಬಟ್ಟೆ, ಸ್ನಾನ, ಅಡುಗೆ ಇತ್ಯಾದಿ ನೋಡಿಕೊಳ್ಳುತ್ತಿದ್ದರೆ ನೀರು ಸಂಗ್ರಹಿಸಿಡುವ ಜವಾಬ್ದಾರಿ ಪರಮೇಶಿ ನೋಡಿಕೊಳ್ಳುವುದೆಂದು ನೀರಿನ ಬರ ಶುರುವಾದ ಪ್ರಾರಂಭದಲ್ಲೇ ಅವರಿಬ್ಬರೊಳಗೆ ಒಪ್ಪಂದವಾಗಿತ್ತು. ಹೀಗೆ ಸಂಗ್ರಹಿಸಿಟ್ಟ ನೀರು ವಾರದ ಉಳಿದ ದಿನಗಳ ಖರ್ಚಿಗೆ. ವಾರದಲ್ಲಿ ಎರಡು ದಿನಗಳ ಹೊರತು ಯಾವತ್ತಾದರೂ ಮೂರನೆಯ ದಿನ ನೀರು ಬಂದರೆ ಹಬ್ಬವೋ ಹಬ್ಬ. ಸ್ನಾನದ ಮನೆಯಲ್ಲಿ ಎರಡು ದೊಡ್ಡ ಡ್ರಮ್, ನಾಲ್ಕು ಬಕೇಟು ನೀರು, ನೀರು ಬಾರದ ದಿನಗಳಲ್ಲಿ ಸ್ನಾನ ಮತ್ತು ಕಕ್ಕಸು ಬಟ್ಟೆ ಒಗೆತಕ್ಕೆ ಅಡುಗೆ ಮನೆಯಲ್ಲಿನ ದೊಡ್ಡ ಸ್ಟೀಲ್ ಡ್ರಮ್ ಹಾಗೂ ನಾಲ್ಕು ಬಕೀಟು ಅಡುಗೆ ಮಾಡಲು ಮತ್ತು ಪಾತ್ರೆ ತೊಳೆಯಲಾಗುತ್ತದೆ. ನೀರು ಮಿತವಾಗಿ ಬಳಸಿ ಎಂದು ಬಚ್ಚಲು ಮನೆಯಲ್ಲಿ ದೊಡ್ಡದಾಗಿ ಬೋರ್ಡನ್ನು ಹಾಕಿದ್ದಾನೆ. ಪರಮೇಶಿ ಮನೆಯಲ್ಲಿ ಮೂವರೇ ಇದ್ದರೂ ನೀರು ಬಳಸುವಾಗ ಸಂಯಮವಿರಲಿ ಎಂಬುದೇ ಪರಮೇಶಿಯ ಬಡಾವಣೆಯ ಆಶಯ.

ಆದರೆ ಇತ್ತೀಚಿನ ಎರಡು ಮೂರು ದಿನಗಳಿಂದ ನೀರಿನ ಬಗ್ಗೆ ಗಂಡ ಹೆಂಡಿರ ಮಧ್ಯೆ ವಾದವಿವಾದ. ಬಚ್ಚಲು ಮನೆಯಲ್ಲಿ ಸಂಗ್ರಹಿಸಿದ ನೀರು ನಾಲ್ಕು ಬಕೀಟು ಅಂತಾ ಪರಮೇಶಿ ಹೇಳಿದರೆ, ನಾಲ್ಕು ಬಕೀಟ್‌ಗಳಲ್ಲಿ ಒಂದನ್ನು ಖಾಲಿಯೆ ಇಟ್ಟಿರ್ತಿರಾ ಎಂದು ಕಮಲು ವಾದಿಸುತ್ತಾಳೆ. ಪರಮೇಶಿ ಆಫೀಸಿಗೆ ಹೋದ ಮೇಲೂ ನೀರಿನ ವಿಷಯದಲ್ಲಿ ಅವನಿಗೆ ಹೆಂಡತಿ ಕಮಲು ತನ್ನ ಕುರಿತು ಅಸಮಾಧಾನ ತೋರಿಸಿದ್ದು ನೆನಪಾಗಿ ಕೆಲಸದಲ್ಲಿ ಏಕಾಗ್ರತೆ ಕಾಪಾಡುವುದೇ ಕಷ್ಟವಾಯಿತು. ಇದನ್ನು ತನ್ನ ಆಪ್ತ ಗೆಳೆಯ ನಾಣಿಯಲ್ಲಿ ಹೇಳಿಕೊಂಡಾಗ ಗೆಳೆಯ ಈ ಸಮಸ್ಯೆಗೆ ಪರಿಹಾರ ಸೂಚಿಸಿದ್ದು ಪರಮೇಶಿಗೆ ಖುಷಿಯೋ ಖುಷಿ. ತನ್ನ ಸಂಶೋಧನೆಯ ಸಮಸ್ಯೆಗೆ ಉತ್ತರ ದೊರಕಿದ ಖುಷಿಯಲ್ಲಿ ಯುರೇಕಾ ಎನ್ನುತ್ತಾ ಆರ್ಕಿಮಾಡಿಸ್ ಇದ್ದ ಸ್ಥಿತಿಯಲ್ಲೇ ಹೊರಗೋಡಿ ಬಂದಂತೆ ತನ್ನ ಲಂಚ್ ಬಾಕ್ಸ್ ಅನ್ನು ಆಫೀಸಿನ ಮೇಜಿನ ಡ್ರಾದೊಳಗೆ ಇಟ್ಟಿದನ್ನು ಮರೆತು ಆಫೀಸು ಬಿಟ್ಟೊಡನೆ ಒಂದೇ ಸಮ ಸ್ಕೂಟರ್ ವೇಗ ಹೆಚ್ಚಿಸಿ ಮನೆಗೆ ಬಂದ ಪರಮೇಶಿ. ದಿನ ನಿತ್ಯಕ್ಕಿಂತ ಗಂಡ ಬೇಗ ಬಂದಿದ್ದನ್ನು ಗಮನಿಸಿದರೂ ಯಾಕೊ ಗಂಡನ ಮೇಲಿನ ಮುನಿಸು ಕಮಲುಗೆ ಇನ್ನೂ ಮರೆತು ಹೋಗಿರದ ಕಾರಣ ಅವಳು ಅವನೊಡನೆ ಮಾತು ಆಡಲೇ ಇಲ್ಲ. ಹೆಂಡತಿ ಮುನಿಸಿಕೊಂಡಿದ್ದರ ಸಲುವಾಗಿ ಪರಮೇಶಿಗೂ ಒಂದು ತರಹದ ಇರಿಸು ಮುರಿಸು. ನಾವಿಬ್ಬರು ಪರಸ್ಪರ ಕೋಪಿಸಿಕೊಂಡದ್ದೇ ಇಲ್ಲ. ಯಾವಾಗಲೂ ಇಲ್ಲದ್ದು ಈಗ ಏನಾಗಿದೆ ನಮ್ಮಿಳಗೆ ಎಂದು ಯೋಚಿಸುತ್ತಿದ್ದವನಿಗೆ ಏಕದಮ್ ಮನೆಯ ಪುರೋಹಿತ ದೀಕ್ಷಿತರ ನೆನಪು ಬಂದಿತ್ತು, ಏನೇ ಆಗಲಿ ದೀಕ್ಷಿತರನ್ನು ಕಂಡು ಇದಕ್ಕೊಂದು ಪರಿಹಾರ ತಿಳಿದುಕೊಳ್ಳಬೇಕು ಎಂದೆಣಿಸಿದ. ಆತ ಆಫೀಸಿನಿಂದ ಬಂದೊಡನೆ ಕಾಫಿ ಸಹ ಕುಡಿಯದೆ ದೀಕ್ಷಿತರ ಮನೆಗೆ ಹೊರಟ. ಪುಣ್ಯಕ್ಕೆ ದೀಕ್ಷಿತರು ಮನೆಯಲ್ಲೇ ಇದ್ದರು. ದೀಕ್ಷಿತರಿಗೆ ಅಡ್ಡ ಬಿದ್ದ ಪರಮೇಶಿ ತಾನು ಬಂದ ಕಾರಣ ವಿವರಿಸಿ ಇದಕ್ಕೊಂದು ಪರಿಹಾರ ಸೂಚಿಸಿ ದೀಕ್ಷಿತರೆ ಎಂದಾಗ ದೀಕ್ಷಿತರು ಅಲ್ಲೇ ಇದ್ದ ಮಣೆಯ ಮೇಲಿನ ಕವಡೆಗಳಲ್ಲಿ ಕೈಯಾಡಿಸಿ ಒಂದಿಷ್ಟು ಕವಡೆಗಳನ್ನು ಮಣೆಯ ತುದಿಯಲ್ಲಿಟ್ಟು ಏನನ್ನೋ ಧ್ಯಾನಿಸುತ್ತಾ ನಿಮ್ಮಲ್ಲಿ ಯಾವುದೋ ಕೆಟ್ಟ ಶಕ್ತಿ ಪ್ರವೇಶ ಆಗಿದೆ ಪರಮೇಶಿಯವರೇ. ಅದೇ ನಿಮಗೆ ತೊಂದರೆ ಕೊಡುತ್ತಿರುವುದು. ಏನೂ ಯೋಚನೆ ಮಾಡಬೇಡಿ. ಒಂದಿಷ್ಟು ವಿಭೂತಿ ಮಂತ್ರಿಸಿ ಕೊಡುತ್ತೇನೆ. ಅದನ್ನು ದೇವರ ಕೋಣೆಯಲ್ಲಿಡಿ ಎಲ್ಲ ಸರಿಹೋಗುತ್ತದೆ ಎಂದು ಹೇಳುತ್ತಲೇ ಪರಮೇಶಿ ಕೊಟ್ಟ ನೂರರ ಹೊಸ ನೋಟನ್ನು ಅಲ್ಲೇ ಪಕ್ಕದಲ್ಲಿಟ್ಟ ಡಬ್ಬದಲ್ಲಿ ಹಾಕಿದರು. ಈ ಘಟನೆಗೆ ಎರಡು ಮೂರು ದಿನಗಳು ಕಳೆದವು. ಪರಿಸ್ಥಿತಿ ಸುಧಾರಿಸಲೇ ಇಲ್ಲ. ಆಗ ಒಂದು ದಿನ ಹೇಳದೆ ಕೇಳದೆ ಪರಮೇಶಿಯ ಅಮೆರಿಕದ ತಂಗಿ ಮನೆಗೆ ಬಂದಾಗ ಗೊಂದಲವೇ ಆಗಿತ್ತು. ‘‘ಅತ್ತಿಗೆ ನಿಮ್ಮ ಮಜ್ಜಿಗೆ ಹುಳಿ, ಪುಳಿಯೋಗರೆ, ಸೇವಿಗೆ ಪಾಯಸ ಊಟ ಮಾಡಲೆಂದೇ ಗಂಡನ ಮನೆಗೆ ಮೊದಲು ಹೋಗದೆ ಇಲ್ಲೇ ಬಂದೆ ಅತ್ತಿಗೆ’’. ಅಮೆರಿಕದಲ್ಲಿ ಇದ್ದರೂ ನಿಮ್ಮ ಮಜ್ಜಿಗೆ ಹುಳಿ ನನ್ನ ನಾಲಿಗೆಯಲ್ಲಿ ಇನ್ನೂ ಇದೆ’’ ಎಂದಾಗ ಕಮಲು ನಗುತ್ತಲೇ ಅಡುಗೆ ಮನೆ ಸೇರಿದಳು. ಮನೆಯಲ್ಲಿ ನೀರಿಲ್ಲ ಎಂದು ಪರಮೇಶಿಗೆ ತಬ್ಬಿಬ್ಬು. ಕಮಲು ಆತನಿಗೆ ಕಣ್ಸನ್ನೆ ಮಾಡಿದವಳೇ ಅಡುಗೆ ಮನೆ ಸೇರಿಕೊಂಡಳು. ಅಷ್ಟರಲ್ಲಿ ತಂಗಿ ನಂದಿನಿಗೆ ಪಕ್ಕದ ಬೀದಿಯ ಪ್ರಾಣೇಶನ ಗುಡಿಗೆ ಹೋಗಿ ದೇವರ ದರುಶನ ಮಾಡಿಸಿ ಬರಲೆಂದು ಪರಮೇಶಿ ಆಕೆಯನ್ನು ಕರೆದುಕೊಂಡು ಗುಡಿಗೆ ಹೋದ. ದೇವರ ಪೂಜೆ ಆದ ನಂತರ ತೀರ್ಥ ಗಂಧ ಪ್ರಸಾದ ಸ್ವೀಕರಿಸಿ ಮನೆಗೆ ಬರುವಷ್ಟರಲ್ಲಿ ಘಮಘಮ ಅಡುಗೆ ಸಿದ್ಧವಾಗಿತ್ತು. ಮಜ್ಜಿಗೆ ಹುಳಿ, ತೊವ್ವೆ, ಕೋಸಂಬರಿ, ಹಪ್ಪಳ, ಸಂಡಿಗೆ, ಸಾರು, ಸೇವಿಗೆ ಪಾಯಸ ಊಟ ಭರ್ಜರಿಯಾಗಿತ್ತು. ಊಟ ಮುಗಿಸಿ ತಂಗಿ ಹೊರಟು ನಿಂತಳು. ಅವಳನ್ನು ಕಳಿಸಿ ಬಂದು ಕಮಲುವನ್ನು ಕೇಳಿದ ಪರಮೇಶಿ ಇದೇನೆ ನಿಂದು? ನೀರಿಲ್ಲದಿದ್ದರೂ ಭರ್ಜರಿ ಊಟದ ತಯಾರಿ ಮಾಡಿದೆಯಲ್ಲ. ನನಗೆ ಇದೆಲ್ಲ ಒಗಟಿನಂತಾಗಿತ್ತು.

‘‘ಅವಳು ನಸುನಗುತ್ತಲೇ ಹೇಳಿದಳು. ಎಮರ್ಜೆನ್ಸಿಗಿರಲಿ ಎಂದು ಮೂರು ಬಕೀಟು ನೀರನ್ನು ಬೀರುವಿನಲ್ಲಿ ಇಟ್ಟಿದ್ದೆ ಕಣ್ರಿ. ಈಗ ಉಪಯೋಗಕ್ಕೆ ಬಂತು ನೋಡಿ.’’

 ಮತ್ತೆ ಬೀರುವಿನಲ್ಲಿಟ್ಟ ಬಟ್ಟೆಯ ಗತಿ? ಅಚ್ಚರಿಯಿಂದ ಕೇಳಿದ ಪರಮೇಶಿ. ಅದನ್ನೆಲ್ಲ ಗಂಟು ಮೂಟೆ ಕಟ್ಟಿ ನಿಮ್ಮಿಂದಲೇ ಅಟ್ಟದ ಮೇಲೆ ಸೇರಿಸಿದ್ದು ಮರೆತು ಹೋಯಿತೇ? ತಮಾಷೆ ಮಾಡಿದಳು.

‘‘ಪರವಾಗಿಲ್ಲ ಕಣೆ ನೀನು. ನಿನ್ನ ಬುದ್ಧಿಗೆ ಬೆಲೆ ಕಟ್ಟಲು ಬರುವುದೇ ಇಲ್ಲ. ಇನ್ನು ಮುಂದೆ ಬ್ಯಾಂಕಿನ ಸೇಫ್ ಡಿಪಾಸಿಟ್ ಲಾಕರ್ಗಳಲ್ಲಿ ಜನರು ನೀರು ಸಂಗ್ರಹಿಸಿ ಇಟ್ಟರೂ ಇಡಬಹುದು. ಪರಮೇಶಿ ಚುಡಾಯಿಸಿದ. ಆಕೆ ಮುಂದುವರಿದಳು. ನೀರು ಸಂಗ್ರಹಿಸಿಟ್ಟ ಬಗ್ಗೆ ನನ್ನಿಂದ ಪ್ರಮಾಣ ಪತ್ರ ಪಡೆಯಲು ನನ್ನ ಹಸ್ತಾಕ್ಷರ ಪಡೆಯಬೇಕು ಅಂದ್ರಲ್ಲ. ಅದೆಲ್ಲ ಬೇಡ. ನಿಮ್ಮ ಕುಮಾರ ಕಂಠೀರವ ನಿತ್ಯ ಸಂಜೆ ಬೂಟು ತೊಳೆಯಲು ಒಂದು ಬಕೀಟು ಪೂರ್ತಿ ನೀರು ಖಾಲಿ ಮಾಡ್ತಾನೆ. ಕ್ರಿಕೆಟ್ ಟೀಮಿಗೆ ಅವನ್ನು ಸೇರಿಸಿಕೊಳ್ಳಲು ಬೂಟು ಕ್ಲೀನಾಗಿರಬೇಕೆಂದು ಅವನ ಕ್ಲಾಸ್ ಟೀಚರ್ ಹೇಳಿದ್ರಂತೆ. ಅದಕ್ಕೆ ಇವಂದು ದಿನ ನಿತ್ಯ ಬೂಟ್ ಕ್ಲೀನಿಂಗ್. ಹಿಂದೊಮ್ಮೆ ಯಾರೋ ಇಂಡಿಯನ್ ಟೀಮ್ ಕ್ರಿಕೆಟ್ ಪ್ಲೇಯರ್‌ಗೆ ಬೂಟು ಚೆನ್ನಾಗಿಲ್ಲ ಅಂತಾ ಆಟಕ್ಕೆ ಸೇರಿಸಿಕೊಳ್ಳಲಿಲ್ಲಾಂತ ಸುದ್ದಿ ಇತ್ತಲ್ವ. ಅದಕ್ಕೆ ಬೂಟ್ ಕ್ಲೀನಾಗಿ ಇಟ್ಕೊಳ್ಳಿಕ್ಕೆ ಈಗಿಂದ್ಲೆ ತಯಾರಿ ನಿಮ್ಮಗಂದು. ಕಮಲು ಮುಸಿ ಮುಸಿ....

Writer - ಕೆ. ಶಾರದಾ ಭಟ್ ಉಡುಪಿ

contributor

Editor - ಕೆ. ಶಾರದಾ ಭಟ್ ಉಡುಪಿ

contributor

Similar News