ಮೊದಲ ಭಾರತೀಯ ಮುಸ್ಲಿಂ ಶಿಕ್ಷಕಿ ಫಾತಿಮಾ ಶೇಖ್

Update: 2019-06-22 13:03 GMT
ಫಾತಿಮಾ ಶೇಖ್ ಮತ್ತು ಸಾವಿತ್ರಿಬಾಯಿ

ಮುಸ್ಲಿಂ ಸಮಾಜದ ವಿರೋಧದ ನಡುವೆಯೂ ಫಾತಿಮಾ, ಜ್ಯೋತಿಬಾ ಅವರ ಶಾಲೆಯ ಮೊದಲ ವಿದ್ಯಾರ್ಥಿಯಾಗಿ ಶಿಕ್ಷಕರ ತರಬೇತಿಯಲ್ಲಿ ತೇರ್ಗಡೆಯಾಗುತ್ತಾರೆ. ಮಾತ್ರವಲ್ಲ, ಜ್ಯೋತಿಬಾ ಅವರ ದಲಿತ ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗುತ್ತಾರೆ! ಈ ರೀತಿ ಫಾತಿಮಾ ಶೇಖ್ ಭಾರತದ ಮೊದಲ ಮುಸ್ಲಿಂ ಶಿಕ್ಷಕಿಯಾಗಿ; ಆಧುನಿಕ ಭಾರತದ ಚರಿತ್ರೆಯಲ್ಲಿ ದಾಖಲಾಗುತ್ತಾರೆ.

ಜ್ಯೋತಿಬಾ ಅವರ ತಂದೆ; ಜಾತಿ ಬಹಿಷ್ಕಾರ ಮತ್ತು ಧರ್ಮ ಬಹಿಷ್ಕಾರಕ್ಕೆ ಹೆದರಿ; ಅವರನ್ನು ತಮ್ಮ ಮನೆಯಿಂದ ಹೊರ ದಬ್ಬಿದಾಗ ಅವರಿಗೆ ಆಶ್ರಯ ನೀಡಿದವರು ಉಸ್ಮಾನ್ ವಾಡಾದ ಉಸ್ಮಾನ್ ಶೇಖ್ ಮತ್ತು ಅವರ ಸಹೋದರಿ ಫಾತಿಮಾ ಶೇಖ್. ಆಗ ಜ್ಯೋತಿಬಾ ಅವರು ಬರಿಗೈಯ ಅತಂತ್ರರು. ತನ್ನ ಕಷ್ಟದ ದಿನಗಳಲ್ಲಿ ಜ್ಯೋತಿಬಾ ಬಟ್ಟೆ ಹೊಲಿಯುವ ಕೆಲಸ ಪ್ರಾರಂಭಿಸಿದಾಗ; ಗೂಡಂಗಡಿ ತೆರೆದಾಗ ಸಾವಿತ್ರಿಬಾಯಿ ಅವರಿಗೆ ನೆರವಾದರು.

ಮುಂದೆ ಜ್ಯೋತಿಬಾ ಗಾರೆಯ ಕೆಲಸಕ್ಕೆ ತೊಡಗಿ ಸ್ವತಂತ್ರವಾದ ‘ಕಂಟ್ರಾಕ್ಟರ್’ ವೃತ್ತಿ ಹಿಡಿದಾಗಲೂ ತನ್ನ ಚಳವಳಿಯ ಗುರಿಯನ್ನು ಮರೆಯಲಿಲ್ಲ. ತನ್ನ ಬದುಕಿಗಾಗಿ ಯಾವತ್ತೂ ಅವರು ಸರಕಾರದ ಬಾಗಿಲು ಅಲೆದಾಡಲಿಲ್ಲ. ಅದಲ್ಲದೆ ಅವರು ಸ್ತ್ರೀ ಶಿಕ್ಷಣ, ಶೂದ್ರಾತಿಶೂದ್ರರ ಶೈಕ್ಷಣಿಕ ಗುರಿಯ ಜೊತೆ ದುಡಿದುಣ್ಣುವ ಮತೀಯ ಅಲ್ಪ ಸಂಖ್ಯಾತರನ್ನೂ ಮಾತ್ರವಲ್ಲ, ಪ್ರಗತಿಪರ ಮನಸ್ಸಿನ ಮೇಲ್ವರ್ಗವನ್ನೂ ತನ್ನ ಚಳವಳಿಯಲ್ಲಿ ತೊಡಗಿಸಿಕೊಂಡದ್ದು ಜ್ಯೋತಿಬಾ ಅವರ ವ್ಯಕ್ತಿ ವಿಶಿಷ್ಟತೆಯೇ ಆಗಿತ್ತು.

ತಂದೆಯಿಂದಲೇ ಬೀದಿಗೆ ದಬ್ಬಲ್ಪಟ್ಟ ಜ್ಯೋತಿಬಾ ಉಸ್ಮಾನ್‌ವಾಡಾ ಸೇರಿದಾಗ ಅವರು ಕೇವಲ ಒಂದು ‘ಕನ್ಯಾ ಶಾಲೆ ’ ಮತ್ತು ಇನ್ನೊಂದು ‘ದಲಿತ ಮಕ್ಕಳ ಶಾಲೆ ’ ತೆರೆದಿದ್ದರೆ; ಈಗ ಅಂದರೆ 1849ರಲ್ಲಿ ಶಾಲೆಗಳ ಸಂಖ್ಯೆ ಹತ್ತಕ್ಕೆ ಏರಿತ್ತು. ಒಂದೆಡೆ ಶಾಲೆಗಳ ಸಂಚಾಲನಾ ವೆಚ್ಚ; ಇನ್ನೊಂದೆಡೆ ಏರುತ್ತಿರುವ ವಿದ್ಯಾರ್ಥಿಗಳ ಸಂಖ್ಯೆಗಳ ನಡುವೆ ಅವರಿಗೆ ಶಿಕ್ಷಕರ ಕೊರತೆ ತೀವ್ರವಾಗಿ ಬಾಧಿಸತೊಡಗಿತು.

ಅದಾಗಲೇ ಬ್ರಿಟಿಷ್ ಪಾರ್ಲಿಮೆಂಟಿನಲ್ಲಿ ಭಾರತವನ್ನು ಗುಲಾಮತನದಿಂದ ಮುಕ್ತವಾಗಿಸುವ ಕಾನೂನು ಜಾರಿಯಲ್ಲಿತ್ತು. ಇದು ಜಾರಿಯಾದದ್ದು 26 ಜುಲೈ 1833. ಹಾಗಿದ್ದೂ ‘‘ದಲಿತ ಜಾತಿಯ ಮಕ್ಕಳೊಂದಿಗೆ ತರಗತಿಯನ್ನು ಹಂಚಿಕೊಳ್ಳಲು ಮೇಲ್ವರ್ಗದ ಮಕ್ಕಳ ಪೋಷಕರು ನಿರಾಕರಿಸಿದರು. ಶಿಕ್ಷಕರಾಗಿದ್ದ ಬ್ರಾಹ್ಮಣರಂತೂ ದಲಿತ ಮಕ್ಕಳನ್ನು ನೂರು ಅಡಿ ದೂರದಲ್ಲಿ ಕೂಡಿಸುತ್ತಿದ್ದರು.

ಒತ್ತಾಯದಿಂದ ದಲಿತ ಸಹಭಾಗಿತ್ವದಲ್ಲಿ ಶಾಲೆಗಳನ್ನು ತೆರೆಯುವ ಬದಲು ದಲಿತರಿಗಾಗಿ ಪ್ರತ್ಯೇಕ ಶಾಲೆಗಳನ್ನು ತೆರೆದಾದರೂ ಸರಿಯಾದ ಶಿಕ್ಷಕರಿಲ್ಲದೆ ಶಾಲೆಗಳನ್ನು ಮುಚ್ಚಬೇಕಾಗುತ್ತಿತ್ತು. ಸಾರ್ವಜನಿಕ ಶಾಲೆಗಳು ಸರಕಾರದಿಂದ ವೇತನಕ್ಕಾಗಿ, ಶಾಲಾ ಕಟ್ಟಡಕ್ಕಾಗಿ ಅನುದಾನ ಪಡೆದವು. ಆದರೆ,ಭಾರತೀಯ ಪ್ರಜೆಗಳಾದ ದಲಿತರಿಗೆ ಶಿಕ್ಷಣ ನಿರಾಕರಿಸಲಾಗಿತ್ತು’’ ಎನ್ನುವ ಅಂದಿನ ಸರಕಾರಿ ವರದಿಗಳ ಚಿತ್ರಣವೇ ನಮ್ಮ ವರ್ಗವಾದಕ್ಕೂ ಮತ್ತು ಜಾತಿವಾದಕ್ಕೂ ಹಿಡಿದ ಕೈಗನ್ನಡಿಯಾಗಿದೆ.

ಸಾರ್ವತ್ರಿಕ ಶಿಕ್ಷಣ ಕಾನೂನಾಗಿ ಒಂದೂವರೆ ದಶಕಗಳ ಆನಂತರವೂ ಅದರ ಫಲ ಈ ನೆಲದ ದುಡಿಯುವ ವರ್ಗಕ್ಕೆ ಗಗನಕುಸುಮ ಯಾಕಾಗಿದೆ? ಇದು ಜ್ಯೋತಿಬಾ ಅವರ ಮುಂದಿದ್ದ ಸವಾಲು?

ಇದರ ಬಗ್ಗೆ ಒಂದು ರಾತ್ರಿ ಉಸ್ಮಾನ್ ವಾಡಾದಲ್ಲಿ ಈ ಕುರಿತು ಚಿಂತನೆ ಆರಂಭವಾಗುತ್ತದೆ. ಅದಾಗಲೇ ಫಾತಿಮಾ ಶೇಖ್ ಜ್ಯೋತಿಬಾ ಅವರ ಶಾಲೆಯಲ್ಲಿ ಕಲಿತು ಶಿಕ್ಷಿತಳಾಗಿದ್ದಾಳೆ. ಆ ರಾತ್ರಿಯಲ್ಲಿ ಉಸ್ಮಾನ್ ಶೇಖ್ ಅವರ ಅಂಗಳದಲ್ಲಿ ಲಾಹೂಜಿ ಸಾಳ್ವೆ, ಸುಗುಣಾಬಾಯಿ, ಜ್ಯೋತಿಬಾ, ಸಾವಿತ್ರಿಬಾಯಿ, ಫಾತಿಮಾ ಹೀಗೆ ಕೆಲವು ಮಂದಿ ಶಿಕ್ಷಣ ಪ್ರೇಮಿಗಳು ಸೇರಿದ್ದಾರೆ.

ಆಗ ಜ್ಯೋತಿಬಾ ‘‘ಈಗ ಶಾಲೆಯಲ್ಲಿ ಮಕ್ಕಳ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ, ಅದಕ್ಕೆ ಬೇಕಾಗುವ ಶಿಕ್ಷಕರಿಲ್ಲ. ಇದು ಬ್ರಿಟಿಷ್ ಸರಕಾರದ ಗಮನಕ್ಕೂ ಬಂದಿದೆ. ಅದಕ್ಕಾಗಿ 6 ಜೂನ್ 1840ರಲ್ಲಿ ‘ಬೋರ್ಡ್ ಆಫ್ ಎಜ್ಯುಕೇಶನ್’ ತನ್ನ ಆಧುನಿಕ ಶಿಕ್ಷಣ ನೀತಿಯನ್ನು ಜಾರಿಗೊಳಿಸಿದೆ. ಇದರಲ್ಲಿ ‘ನ್ಯಾಷನಲ್ ಸ್ಕೂಲ್’ ನೀತಿಯೂ ಸೇರಿದೆ.

ಈ ನೀತಿಯಂತೆ ಸರಕಾರ ಶಿಕ್ಷಕರ ತರಬೇತಿಗಾಗಿ ಪ್ರೋತ್ಸಾಹ ನೀಡುವುದಾಗಿ ತಿಳಿಸಿದೆ. ಇದರ ಪ್ರಯೋಜನವನ್ನು ನಾವು ಪಡೆಯಬೇಕು. ಅದಕ್ಕಾಗಿ ನಾವ್ಯಾಕೆ ಒಂದು ‘ಶಿಕ್ಷಕರ ತರಬೇತಿ ಶಾಲೆ’ಯನ್ನು ಪ್ರಾರಂಭಿಸಬಾರದು?’’

ಜ್ಯೋತಿಬಾ ಅವರ ಈ ಸಲಹೆಗೆ ಎಲ್ಲರೂ ಒಪ್ಪುತ್ತಾರೆ. ಶಿಕ್ಷಕರ ತರಬೇತಿ ಶಾಲೆಗೆ ಸ್ಥಳಾವಕಾಶವನ್ನು ನೀಡುವ ಭರವಸೆಯನ್ನು ಉಸ್ಮಾನ್ ಶೇಖ್ ನೀಡುತ್ತಾರೆ. ‘‘ಶಾಲೆಗೆ ವಿದ್ಯಾರ್ಥಿಯಾಗಿ ನಾನು ಸೇರುತ್ತೇನೆ’’ ಎಂದು ಫಾತಿಮಾ ನುಡಿದಾಗ ಸುಗುಣಾಬಾಯಿ ಅವರ ತಲೆ ನೇವರಿಸುತ್ತಾಳೆ. ಮುಸ್ಲಿಂ ಸಮಾಜದ ವಿರೋಧದ ನಡುವೆಯೂ ಫಾತಿಮಾ ಆ ಶಾಲೆಯ ಮೊದಲ ವಿದ್ಯಾರ್ಥಿಯಾಗಿ ಶಿಕ್ಷಕರ ತರಬೇತಿಯಲ್ಲಿ ತೇರ್ಗಡೆಯಾಗುತ್ತಾರೆ. ಮಾತ್ರವಲ್ಲ, ಜ್ಯೋತಿಬಾ ಅವರ ದಲಿತ ಮಕ್ಕಳ ಶಾಲೆಯಲ್ಲಿ ಶಿಕ್ಷಕಿಯಾಗುತ್ತಾರೆ! ಈ ರೀತಿ ಫಾತಿಮಾ ಶೇಖ್ ಭಾರತದ ಮೊದಲ ಮುಸ್ಲಿಂ ಶಿಕ್ಷಕಿಯಾಗಿ; ಆಧುನಿಕ ಭಾರತದ ಚರಿತ್ರೆಯಲ್ಲಿ ದಾಖಲಾಗುತ್ತಾರೆ.

Writer - ರವಿ ರಾ. ಅಂಚನ್

contributor

Editor - ರವಿ ರಾ. ಅಂಚನ್

contributor

Similar News