ಚಿಕ್ಕಂದಿನಿಂದಲೇ ಕಾಡಿದ ಒಂಟಿತನದ ಹಲವಾರು ರೂಪಗಳು

Update: 2019-06-22 13:31 GMT

ನನ್ನ ಹೆಸರು ಕುಮಾರಿ. ಮೂವತ್ತೈದರ ಸಮೀಪದ ವಯಸ್ಸಿನ ನಾನು, ಎಲ್ಲರಂತೆ ಸಾಮಾನ್ಯ ಜೀವನ ನಡೆಸುತ್ತಿದ್ದೇನೆ. ಮದುವೆ, ಮಕ್ಕಳು, ಕೆಲಸ, ಎಲ್ಲವೂ ಇದೆ. ನಾನು ಬಾಲ್ಯದಲ್ಲಿ ಲೈಂಗಿಕ ದೌರ್ಜನ್ಯದ ಶಿಕಾರಿ. ಅದು ನನ್ನ ಬದುಕಿನ ಮೇಲೆ ಏನೇನು ಪರಿಣಾಮ ಬೀರಿತು ಎಂದು ನಿಧಾನವಾಗಿ ಗೊತ್ತಾಗುತ್ತಿದೆ. ದೌರ್ಜನ್ಯ ನಡೆದ ನಂತರ ಬದುಕನ್ನು ಸರಿಮಾಡಲು ಉಪಾಯಗಳನ್ನು ಎಲ್ಲರೂ ಹುಡುಕುತ್ತಾರೆ. ಆದರೆ ನನಗೆ, ನನ್ನ ಮೇಲೇ ಏಕೆ ದೌರ್ಜನ್ಯವಾಯಿತು ಎಂಬ ಪ್ರಶ್ನೆ ಕಾಡುತ್ತಲೇ ಇರುತ್ತದೆ. ಅದರಲ್ಲಿ ನನ್ನದು ಏನೂ ತಪ್ಪಿಲ್ಲ ಎಂದು ಗೊತ್ತು. ಆದರೆ, ನನ್ನ ಸುತ್ತ ನಡೆದ ಏನೆಲ್ಲ ಘಟನೆಗಳು, ಕಾರಣಗಳು, ನನ್ನನ್ನು ಸುಲಭದ ಶಿಕಾರಿ ಮಾಡಿದವು ಎಂದು ಅರಿಯಲು ಪ್ರಯತ್ನಿಸುತ್ತಿದ್ದೇನೆ. ನನ್ನ ಬಾಲ್ಯದ ಕೆಲ ಘಟನೆಗಳನ್ನು ಪೋಣಿಸಿದರೆ, ಏನೋ ಉತ್ತರ ಕಾಣಬಹುದು ಎಂದು ನಂಬಿಕೆ. ಈ ಬರಹ, ಆ ಪ್ರಶ್ನೆಗೆ ಉತ್ತರ ಹುಡುಕುವ ಪ್ರಯತ್ನ. ಅದರ ಜೊತೆಗೇ, ನನ್ನ ಉತ್ತರ, ನಾನು ಇದ್ದ ಪರಿಸ್ಥಿತಿಗಳು, ಇಂದಿನ ಒಂದು ಮಗುವನ್ನು ಬಚಾವು ಮಾಡಿದರೂ, ನನ್ನ ಪ್ರಯತ್ನ, ತೊಳಲಾಟ, ಗೊಂದಲ, ಸಾರ್ಥಕ. ಇದು ನನ್ನ ಕಥೆ. ನಾನು ದೌರ್ಜನ್ಯಕ್ಕೊಳಗಾಗಲು ಕಾರಣಗಳೇನಿರಬಹುದು ಮತ್ತು ಅದರ ಪರಿಣಾಮಗಳೇನು.

ಹಿನ್ನೆಲೆ

ನಾನು ಹಳ್ಳಿಯಲ್ಲಿ ಬೆಳೆದ ಹುಡುಗಿ. ನನ್ನ ತಾತ ನಮ್ಮ ಊರಿನ ಉದ್ಧಾರಕ್ಕೆ ಕೆಲಸ ಮಾಡಿದ್ದರು ಹಾಗಾಗಿ ಅವರಿಗೆ ಹೆಸರು ಗೌರವಗಳಿತ್ತು, ಮರ್ಯಾದೆಯಿತ್ತು. ನಮ್ಮ ಮನೆಯವರೆಲ್ಲರೂ ಕೆಲಸಕ್ಕೆ ಬಹಳ ಮಹತ್ವ ಕೊಟ್ಟವರು. ನ್ಯಾಯ, ನೀತಿಯ ಮಾರ್ಗದಲ್ಲಿ ನಡೆದವರು. ಒಬ್ಬರಿಗೆ ಮೋಸ, ವಂಚನೆ ಮಾಡಿದವರಲ್ಲ. ದಾನಿಗಳು. ಇನ್ನೊಬ್ಬರಿಗೆ ಕೈಲಾದಷ್ಟು ಸಹಾಯ ಮಾಡಿದವರು. ಜಾತಿ, ಧರ್ಮಗಳಲ್ಲಿ ನಂಬಿಕೆಯಿಟ್ಟವರು. ನಮ್ಮ ಕುಟುಂಬಕ್ಕೆ ಸೇರಿದ ಎಲ್ಲರ ಬಗ್ಗೆಯೂ ಇದೇ ಅಭಿಪ್ರಾಯ. ಒಳ್ಳೆಯ ಜನ. ಹೀಗೆ, ಒಳ್ಳೆಯ ಮನೆಯ ಹುಡುಗಿ, ಒಳ್ಳೆಯ ಮನೆಯದೇ ಒಂದು ವ್ಯಕ್ತಿಯಿಂದ ಲೈಂಗಿಕ ದೌರ್ಜನ್ಯಕ್ಕೊಳಗಾದುದು ಹೇಗೆ? ಒಳ್ಳೆಯತನವೆಲ್ಲಾ ಎಲ್ಲಿತ್ತು? ಇದು ನನ್ನ ಮನೆಯಲ್ಲಿ, ನನ್ನ ಮೇಲೆ ನಡೆಯಲು ಸಾಧ್ಯವಾದರೆ, ಇನ್ನು ಒಳ್ಳೆಯದಲ್ಲದ ಮನೆಯ ಮಕ್ಕಳ ಪಾಡೇನು? ಈ ಒಳ್ಳೆಯ ಮನೆಯಲ್ಲಿ ಇಂಥದೊಂದು ಕೃತ್ಯ ನಡೆಯಬಹುದು ಎಂದು ಯಾರಿಗೂ ಯಾಕೆ ಯೋಚನೆ ಬರಲಿಲ್ಲ? ಇದೆಲ್ಲಾ ನನ್ನ ಕಾಡುವ ಪ್ರಶ್ನೆಗಳು. ನಮ್ಮ ಮನೆಗಳಲ್ಲಿ ಹೀಗೆಲ್ಲಾ ಆಗಲ್ಲಪ್ಪಾ ಎಂದು ಸಾಧ್ಯತೆಗಳನ್ನೇ ತಳ್ಳಿಬಿಡುವ ಮುಂಚೆ ನನ್ನ ಕಥೆಯನ್ನೊಮ್ಮೆ ಓದಿ.

ಏಕೈಕ ಪುತ್ರಿ

ನಾನು ನನ್ನ ಪೋಷಕರ ಏಕೈಕ ಪುತ್ರಿ. ಬಯಕೆಯಿಂದಲ್ಲ, ಅನಿವಾರ್ಯತೆಯಿಂದ. ನನ್ನ ಅಮ್ಮ ನನ್ನ ಜನ್ಮಕ್ಕೆ ಮುಂಚೆ ಮೂರು ಬಾರಿ ಗಂಡು ಮಕ್ಕಳನ್ನು ಹೆತ್ತಿದ್ದರು. ಆದರೆ ಅವೆಲ್ಲವೂ ಹುಟ್ಟುತ್ತಲೇ ಸತ್ತುಹೋಗಿದ್ದವು. ನಾನಾದ ಮೇಲೆ ಇನ್ನೊಂದು ಗಂಡು ಹುಟ್ಟಿ ಸತ್ತಿತ್ತು. ಹಾಗಾಗಿ ನಾನು ಬಹು ಬಯಕೆಯ, ನಿರೀಕ್ಷೆಯ, ಅಮೂಲ್ಯ ವಾದ ಮಗು. ಮನೆಯಲ್ಲಿ ನಾನು, ಅಪ್ಪ, ಅಮ್ಮ, ಅಜ್ಜಿ, ತಾತ, ಇದ್ದೆವು. ನನ್ನನ್ನು ತುಂಬಾ ಜೋಪಾನ ಮಾಡುತ್ತಿದ್ದರು. ಮರ ಹತ್ತಬೇಡ, ಓಡಬೇಡ, ಒಬ್ಬಳೇ ಎಲ್ಲೂ ಓಡಾಡಬೇಡ, ಹೀಗೆ. ಕಣ್ಣಲ್ಲಿ ಕಣ್ಣಿಟ್ಟು, ಅಂಗೈಲಿಟ್ಟು, ಮುಂಗೈಲಿ ಮುಚ್ಚಿ ಸಾಕಿದ್ದರು. ನನ್ನ ಅಮ್ಮನ ಕಡೆಯಾಗಲೀ, ಅಪ್ಪನ ಕಡೆಯಾಗಲೀ, ಅಥವಾ ಅಜ್ಜಿಯ ಕಡೆಯ ದೊಡ್ಡ ಕುಟುಂಬದಲ್ಲಾಗಲೀ ಯಾರನ್ನೂ ಇಷ್ಟು ಮುಚ್ಚಟೆಯಾಗಿ ಸಾಕಿರಲಿಲ್ಲವೇನೋ. ಹಾಗಾಗಿ ನಾನು ಒಂಟಿಯಾದೆ. ಬ್ರಾಹ್ಮಣ ಜಾತಿಗೆ ಸೇರಿದ ನನಗೆ ನನ್ನದೇ ಕಟ್ಟುಪಾಡುಗಳಿದ್ದವು. ಊಟ, ತಿಂಡಿಯ ವಿಷಯದಲ್ಲಿ ರೀತಿ ರಿವಾಜುಗಳಿದ್ದವು. ನನ್ನ ಅಜ್ಜಿ, ತಾತ ಜಾತಿ ಪದ್ಧತಿಗಳನ್ನು ಪಾಲಿಸುತ್ತಿದ್ದರು. ನಮ್ಮ ಮನೆಯ ಒಳಗೆ ಯಾರು ಬರಬಹುದು ಯಾರು ಬರಬಾರದು ಎಂದು ಅಜ್ಜಿ ನಿರ್ದೇಶನ ನೀಡುತ್ತಿದ್ದರು. ನನ್ನ ಸ್ನೇಹಿತೆಯರು ಮನೆಗೆ ಬಂದರೆ ಅವರನ್ನು ಸಾಮಾನ್ಯವಾಗಿ ಒಳಗೆ ಕರೆಯುತ್ತಿರಲಿಲ್ಲ. ಅವರಿಗೆ ಏನಾದರೂ ತಿನ್ನಲು ಅಥವಾ ಕುಡಿಯಲು ಕೊಟ್ಟರೆ, ಅವರೇ ಅವರು ತಿಂದ ತಟ್ಟೆ, ಲೋಟ ತೊಳೆಯಬೇಕಿತ್ತು, ಇಲ್ಲಾ ನಾನು ತೊಳೆಯುತ್ತಿದ್ದೆ. ನಾವು ಭಾರೀ ಶ್ರೀಮಂತರು ಎಂದು ನನ್ನ ಅಜ್ಜಿ ನನ್ನನ್ನು ನಂಬಿಸಿದ್ದರು ಮತ್ತು ನನ್ನ ಬಳಿ ಇರುವ ಆಟ ಸಾಮಾನು ಯಾರ ಬಳಿಯೂ ಇಲ್ಲ ಎಂಬ ಸುಳ್ಳು ಒಂದಷ್ಟು ದಿನ ನನ್ನ ತಲೆಯಲ್ಲಿ ಸತ್ಯವಾಗಿತ್ತು. ಯಾರು ಬೇಕಾದರೂ ಕದಿಯಬಹುದು ಎಂಬ ಭಯ ಹುಟ್ಟಿಸಿದ್ದರು. ಹಾಗಾಗಿ, ನನ್ನ ಎಲ್ಲಾ ಆಟ ಸಾಮಾನು ಜೋಪಾನ ಮಾಡಬೇಕಿತ್ತು. ಹೊರಗಿನವರು ಯಾರನ್ನೂ ಸುಲಭವಾಗಿ ನಂಬಬೇಡ ಎಂದು ಹೇಳಿಕೊಟ್ಟಿದ್ದರು. ನನ್ನನ್ನು ಬೇರೆ ಯಾರ ಮನೆಗೂ ಹೋಗಿ ಆಟಆಡಲು ಬಿಡುತ್ತಿರಲಿಲ್ಲ. ನಮ್ಮ ಮನೆಗೆ ಆಡಲು ಬರುತ್ತಿದ್ದ ಎರೆಡು, ಮೂರು ಮಕ್ಕಳನ್ನು ನಂಬಲು ಬಿಡುತ್ತಿರಲಿಲ್ಲ. ಅವರೂ ಬಂದರೆ ಬಂದರು, ಇಲ್ಲವಾದರೆ ಇಲ್ಲ. ನನ್ನ ಅಜ್ಜಿ, ಅಜ್ಜನ ಸರ್ಪಗಾವಲಲ್ಲಿ ಆಡುವುದು ಅವರಿಗೆ ಇಷ್ಟವಾಗುತ್ತಿರಲಿಲ್ಲ. ಹಾಗಾಗಿ, ನನ್ನ ಮನೆಯಲ್ಲಿ, ನಾನು ಒಂಟಿ.

ತಾತನ ರಾಕ್ಷಸ ರೂಪ

ನಾನು ಒಂದು ಅಥವಾ ಎರೆಡನೇ ತರಗತಿಯಲ್ಲಿದ್ದಾಗ, ಒಬ್ಬ ಟೀಚರ್ ಯಾವುದೋ ಕಾರಣಕ್ಕೆ ನನಗೆ ಹೊಡೆದರು. ಗಲಾಟೆ ಮಾಡಿದ್ದಕ್ಕೆ, ಎಲ್ಲಾ ಮಕ್ಕಳಿಗೂ ಏಟು ಬಿದ್ದಿತ್ತು ಎಂದು ನೆನಪು. ನಮ್ಮ ಊರಿನಲ್ಲಿದ್ದುದು ಒಂದೇ ಸರಕಾರಿ ಶಾಲೆ. ಅಲ್ಲಿ ಬೆತ್ತದ ಕೋಲುಗಳಿದ್ದವು. ಅದರಲ್ಲಿ ಜೋರಾಗಿ ಏಟು ಬೀಳುತ್ತಿತ್ತು. ಮನೆಯಲ್ಲಿ ಒಂದೂ ಏಟೂ ತಿನ್ನದ ನನಗೆ ಇದು ದೊಡ್ದ ವಿಷಯ. ಏಟು ನೋವಾಗಿದ್ದು ನಿಜ (ಸಹಜವಲ್ಲವೇ?) ನಾನು ಶಾಲೆಯಿಂದ ಮನೆಯವರೆಗೂ ಅಳುತ್ತಲೇ ಬಂದೆ. ನಡೆದದ್ದನ್ನು ಮನೆಯಲ್ಲಿ ಹೇಳಿದೆ. ನನಗೆ ಮುದ್ದು ಮಾಡಿ ಸಮಾಧಾನ ಮಾಡಿದರು ಅಷ್ಟೇ. ಮಾರನೆಯ ಬೆಳಗ್ಗೆ, ನಾನು ಎಂದಿನಂತೆ ಶಾಲೆಗೆ ಹೋದೆ. ಬೆಲ್ ಹೊಡೆದು ಪ್ರಾರ್ಥನೆ ಮುಗಿದು ತರಗತಿಗಳು ಶುರುವಾಗುವ ವೇಳೆಗೆ ಶಾಲೆಯಲ್ಲಿ ಗುಲ್ಲು. ಕುಮಾರಿಯ ತಾತ ಆ ಟೀಚರ್‌ಗೆ ಚೆನ್ನಾಗಿ ಬೈದರಂತೆ. ಟೀಚರ್ ಅಳುತ್ತಿದ್ದರಂತೆ. ನನಗೆ ಗೊತ್ತಾಗಿದ್ದಿಷ್ಟು. ಪ್ರಾರ್ಥನೆ ಮುಗಿಯುವ ಹೊತ್ತಿಗೆ ಶಾಲೆಗೆ ಬಂದಿದ್ದ ತಾತ, ಸ್ಟಾಫ್ ರೂಮಿನ ಆಚೆ ನಿಂತು, ಆ ಟೀಚರ್‌ರನ್ನು ಬೇರೆ ಎಲ್ಲಾ ಟೀಚರ್‌ಗಳ ಮತ್ತು ಕೆಲವು ಮಕ್ಕಳ ಎದುರು ಬಾಯಿಗೆ ಬಂದಂತೆ ಬೈದಿದ್ದರು. ನಮ್ಮ ಹಳ್ಳಿಯಲ್ಲಿ ಹೆಸರು, ಗೌರವ ಹೊಂದಿದ್ದ ತಾತನಿಗೆ ಬೆಲೆಯಿತ್ತು. ನಮ್ಮ ಎಚ್.ಎಮ್. ತಾತನಿಗೆ ಸಮಾಧಾನ ಮಾಡಿ ಒಳಗೆ ಕರೆದು ಕೂರಿಸಿ, ವಿಷಯ ಏನೆಂದು ತಿಳಿದು, ಇನ್ನಷ್ಟು ಸಮಾಧಾನ ಮಾಡಿ ಮನೆಗೆ ಕಳುಹಿಸಿದ್ದರು. ನಮ್ಮ ಶಾಲೆಯಿಂದ ಕೆಲವೇ ದಿನಗಳ ಒಳಗೆ ಆ ಟೀಚರ್ ವರ್ಗಾವಣೆ ಮಾಡಿಸಿಕೊಂಡು ಎತ್ತಂಗಡಿ ಹೋದರು. ಕುಮಾರಿಯ ತಾತ ಬಲು ಜೋರು, ಅವಳ ತಂಟೆಗೆ ಹೋದರೆ ತೊಂದರೆ ಎಂದು ಶಾಲೆಯ ಎಲ್ಲಾ ಮಕ್ಕಳೂ ಕಲಿತುಬಿಟ್ಟರು. ನನ್ನ ಜೊತೆ ಬೆರೆಯಲು ಹಿಂದೇಟು ಹಾಕುವಷ್ಟು. ನನ್ನ ಬೆನ್ನ ಹಿಂದೆ ನನ್ನನ್ನು ಆಡಿಕೊಳ್ಳುತ್ತಿದ್ದರು ಕೂಡ ಅವಳು ತಾತನನ್ನು ಕರೆಸಿ ಬೈಸುತ್ತಾಳೆ ಎಂದು. ನಾನು ಕಲಿತ ಪಾಠ, ತಾತನ ಬಳಿ ಏನು ಹೇಳಿದರೂ ಅವರು ಅದನ್ನು ದೊಡ್ದದು ಮಾಡಿ, ರಾಮಾಯಣವನ್ನೇ ಸೃಷ್ಟಿಸುತ್ತಾರೆ. ಸಂಬಂಧಗಳನ್ನು ಸುಲಭವಾಗಿ ಹಾಳು ಮಾಡುತ್ತಾರೆ. ಹಾಗಾಗಿ ಹೇಳುವುದಕ್ಕಿಂತ ಮುಚ್ಚಿಡುವುದೇ ಒಳ್ಳೆಯದು. ಅವರೆಂದರೆ ಎಲ್ಲರಿಗೂ ಭಯ. ಇನ್ನು ನನ್ನ ಬಗ್ಗೆ ಕೂಡ ಭಯ ಬೆಳೆಯುತ್ತದೆ. ನನ್ನ ಜೊತೆ ಸರಸವಾಗಿರಲು ನನ್ನ ಅತ್ತೆಯ, ಚಿಕ್ಕಮ್ಮನ ಮಕ್ಕಳು ಕೂಡ ಹಿಂಜರಿಯುತ್ತಿದ್ದರು. ತಾತನ ಬೈಗಳು ನನಗೆ ರಕ್ಷೆಗಿಂತ ಹೆಚ್ಚಾಗಿ, ಮುಳ್ಳಿನ ಬೇಲಿಯಾಗಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News