×
Ad

ವೈದ್ಯಕೀಯ ಪ್ರವೇಶಾತಿ ಶುಲ್ಕ ಹೆಚ್ಚಳ ಖಂಡಿಸಿ ಎಐಡಿಎಸ್‌ಒ ಪ್ರತಿಭಟನೆ

Update: 2019-06-22 19:11 IST

ಬೆಂಗಳೂರು, ಜೂ.22: ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರಿ ಕೋಟಾದ ಶುಲ್ಕವನ್ನು ಶೇ.15ರಷ್ಟು ಏರಿಸಿರುವ ನಿರ್ಧಾರವನ್ನು ಈ ಕೂಡಲೆ ಹಿಂಪಡೆಯಬೇಕೆಂದು ಆಗ್ರಹಿಸಿ ಎಐಡಿಎಸ್‌ಒ ಸಂಘಟನೆಯ ವಿದ್ಯಾರ್ಥಿಗಳು ನಗರದ ಮೈಸೂರು ಬ್ಯಾಂಕ್ ವೃತ್ತದಲ್ಲಿ ಪ್ರತಿಭಟನೆ ನಡೆಸಿದರು.

ಸರಿಕಾರಿ ಕೋಟಾದಲ್ಲಿ ಪ್ರವೇಶಾತಿ ಪಡೆಯಲು ಇಚ್ಛಿಸುವ ವಿದ್ಯಾರ್ಥಿಗಳು ಸಾಮಾನ್ಯವಾಗಿ ಮಧ್ಯಮ ವರ್ಗಕ್ಕೆ ಸೇರಿರುತ್ತಾರೆ. ಇವರಿಗೆ ಸುಮಾರು 15 ಸಾವಿರ ರೂ.ನಷ್ಟು ಶುಲ್ಕ ಹೆಚ್ಚಳ ಮಾಡಿದರೆ ಇವರ ಕುಟುಂಬಕ್ಕೆ ಆರ್ಥಿಕ ಹೊರೆ ಆಗಲಿದೆ. ಇದರಿಂದ ವಿದ್ಯಾರ್ಥಿಗಳು ಕಲಿಕೆಯಿಂದ ವಿಮುಖವಾಗುವ ಸಾಧ್ಯತೆಗಳು ಇರುತ್ತವೆ. ಇವೆಲ್ಲವನ್ನು ಸರಕಾರ ಗಂಭೀರವಾಗಿ ಪರಿಗಣಿಸಬೇಕು ಎಂದು ಎಐಡಿಎಸ್‌ಒ ಜಿಲ್ಲಾ ಉಪಾಧ್ಯಕ್ಷ ರಾಜೇಶ್ ಭಟ್ ಒತ್ತಾಯಿಸಿದರು.

ಕೆಳ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಸರಕಾರಿ ಕಾಲೇಜುಗಳಲ್ಲಿ ಪ್ರವೇಶಾತಿ ದೊರೆಯದಿದ್ದರೆ ವೈದ್ಯಕೀಯ ಶಿಕ್ಷಣವೆಂಬುದು ಕೈಗೆಟುಕದಂತಾಗಿದೆ. ಅಂತಹದರಲ್ಲಿ ಸರಕಾರಿ ಕೋಟಾದ ಸೀಟುಗಳ ಶುಲ್ಕ ಏರುತ್ತಾ ಹೋದರೆ ಮುಂದೆ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೂ ವೈದ್ಯಕೀಯ ಶಿಕ್ಷಣ ಮರೀಚಿಕೆಯಾಗುತ್ತದೆ. ಹೀಗಾಗಿ ವಿದ್ಯಾರ್ಥಿಗಳಿಗೆ ಆರ್ಥಿಕ ಹೊರೆಯಾಗುವಂತಹ ಯಾವುದೆ ತೀರ್ಮಾನ ಕೈಗೊಳ್ಳಬಾರದು ಎಂದು ಅವರು ಹೇಳಿದರು.

ಎಐಡಿಎಸ್‌ಒ ಜಿಲ್ಲಾಧ್ಯಕ್ಷೆ ಎಚ್.ಎಂ.ಸಿತಾರ ಮಾತನಾಡಿ, ಖಾಸಗಿ ಕಾಲೇಜುಗಳ ಆಡಳಿತ ವರ್ಗದ ಹಿತಾಸಕ್ತಿಯನ್ನು ಗಣನೆಗೆ ತೆಗೆದುಕೊಂಡು ಶುಲ್ಕ ಹೆಚ್ಚಳ ಮಾಡಲಾಗಿದೆ. ಆದರೆ, ಸರಕಾರದ ಮೊದಲ ಆದ್ಯತೆ ವಿದ್ಯಾರ್ಥಿಗಳ ಕುರಿತಾಗಿರಬೇಕೆಂಬುದನ್ನು ಜನಪ್ರತಿನಿಧಿಗಳು ಅರ್ಥ ಮಾಡಿಕೊಳ್ಳಬೇಕು. ಈ ಕೂಡಲೆ ಖಾಸಗಿ ವೈದ್ಯಕೀಯ ಕಾಲೇಜುಗಳಲ್ಲಿ ಸರಕಾರಿ ಕೋಟಾದ ಶುಲ್ಕವನ್ನು ಹೆಚ್ಚಳ ಮಾಡಿರುವುದನ್ನು ಹಿಂಪಡೆಯಬೇಕೆಂದು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News