ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಈದ್ಗಾ ಭೂಮಿ ಭೋಗ್ಯಕ್ಕೆ: ಝಮೀರ್ ಅಹ್ಮದ್ ಖಾನ್
ಬೆಂಗಳೂರು, ಜೂ.22: ಮೆಟ್ರೋ ಕಾಮಗಾರಿಯ ಹಿನ್ನೆಲೆಯಲ್ಲಿ ಈದ್ಗಾ ಭೂಮಿಯನ್ನು ಕೇವಲ ಎರಡರಿಂದ ಎರಡೂವರೆ ವರ್ಷಗಳವರೆಗೆ ಮಾತ್ರ ಬೆಂಗಳೂರು ಮೆಟ್ರೋ ರೈಲು ನಿಗಮ(ಬಿಎಂಆರ್‌ಸಿಎಲ್)ವು ಭೋಗ್ಯಕ್ಕೆ ಪಡೆದುಕೊಳ್ಳಲಿದೆ. ಶಾಶ್ವತವಾಗಿ ಈದ್ಗಾ ಮೈದಾನವನ್ನು ಅವರು ಸ್ವಾಧೀನ ಪಡಿಸಿಕೊಳ್ಳುತ್ತಿಲ್ಲ ಎಂದು ಅಲ್ಪಸಂಖ್ಯಾತರ ಕಲ್ಯಾಣ ಸಚಿವ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಶನಿವಾರ ನಗರದ ಟ್ಯಾನರಿ ರಸ್ತೆಯಲ್ಲಿರುವ ಈದ್ಗಾ ಮೈದಾನವನ್ನು ಮೆಟ್ರೋ ಕಾಮಗಾರಿ ಹಿನ್ನೆಲೆಯಲ್ಲಿ ಡಂಪಿಂಗ್ ಯಾರ್ಡ್‌ಗಾಗಿ ಬಳಸಿಕೊಳ್ಳಲು ಮುಂದಾಗಿರುವ ಬಿಎಂಆರ್‌ಸಿಎಲ್ ಅಧಿಕಾರಿಗಳು, ಸ್ಥಳೀಯ ಶಾಸಕ, ಈದ್ಗಾ ಸಮಿತಿಯ ಪದಾಧಿಕಾರಿಗಳು, ಶಾಲಾ ಮುಖ್ಯಸ್ಥರೊಂದಿಗೆ ಸಮಾಲೋಚನಾ ಸಭೆ ನಡೆಸಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ಈದ್ಗಾ ಆವರಣದಲ್ಲಿರುವ ಶಾಲೆ ಹಾಗೂ 16 ಅಂಗಡಿಗಳನ್ನು ಮೆಟ್ರೋ ಕಾಮಗಾರಿಗಾಗಿ ತೆರವುಗೊಳಿಸಬೇಕಾಗಿದೆ. ಶಾಲಾ ಕಟ್ಟಡವನ್ನು ಬೇರೆ ಸ್ಥಳದಲ್ಲಿ ಬಿಎಂಆರ್‌ಸಿಎಲ್ ವತಿಯಿಂದಲೇ ನಿರ್ಮಿಸಿಕೊಡಲಾಗುತ್ತದೆ. ಮುಂದಿನ ಸಾಲಿನ ಫೆಬ್ರವರಿ ಅಥವಾ ಮಾರ್ಚ್ ವೇಳೆಗೆ ಕಾಮಗಾರಿ ಆರಂಭಗೊಳ್ಳುವ ಸಾಧ್ಯತೆಯಿದೆ ಎಂದು ಅವರು ಹೇಳಿದರು.
ಅಂಗಡಿಗಳಿಗೆ ಪರಿಹಾರವಾಗಿ ಒಂದು ಚದರ ಅಡಿಗೆ 550 ರೂ.ಗಳಂತೆ ಬಿಎಂಆರ್‌ಸಿಎಲ್ ನೀಡಲಿದೆ. ಯಾವ ಅಂಗಡಿ ಮಾಲಕರು ಸಮಪರ್ಕವಾಗಿ ಈದ್ಗಾ ಸಮಿತಿಗೆ ಬಾಡಿಗೆಯನ್ನು ಪಾವತಿಸಿಕೊಂಡು ಬಂದಿದ್ದಾರೋ ಅವರಿಗೆ ಮಾತ್ರ ಪರಿಹಾರ ಸಿಗುತ್ತದೆ. ಹಲವಾರು ಮಂದಿ ಸಮರ್ಪಕವಾಗಿ ಬಾಡಿಗೆ ನೀಡದೇ ಇರುವುದು ತಿಳಿದು ಬಂದಿದೆ. ಅವರು ಪರಿಹಾರ ಬೇಕಾದರೆ ಬಾಕಿ ಬಾಡಿಗೆ ಪಾವತಿಸಲೇ ಬೇಕು ಎಂದು ಝಮೀರ್ ಅಹ್ಮದ್ ಖಾನ್ ತಿಳಿಸಿದರು.
ಬಿಎಂಆರ್‌ಸಿಎಲ್‌ನವರು ಈದ್ಗಾ ಭೂಮಿಯನ್ನು ತಮ್ಮ ವಶಕ್ಕೆ ಪಡೆದುಕೊಂಡರೂ ಸಹ ಈದ್ ಸಂದರ್ಭದಲ್ಲಿ ನಮಾಝ್ ನಿರ್ವಹಿಸಲು ಅವಕಾಶ ಕಲ್ಪಿಸಿಕೊಡಲು ಒಪ್ಪಿಕೊಂಡಿದ್ದಾರೆ. ಮೆಟ್ರೋ ಕಾಮಗಾರಿ ಪೂರ್ಣಗೊಂಡ ಬಳಿಕ ಈಗಿರುವಂತೆಯೇ ಈದ್ಗಾ ಸಮುದಾಯದ ಬಳಕೆಗೆ ಲಭ್ಯವಾಗಲಿದೆ ಎಂದು ಝಮೀರ್ ಅಹ್ಮದ್ ಖಾನ್ ಹೇಳಿದರು.
ಸಮಾಲೋಚನಾ ಸಭೆಯಲ್ಲಿ ಬಿಎಂಆರ್‌ಸಿಎಲ್ ವ್ಯವಸ್ಥಾಪಕ ನಿರ್ದೇಶಕ ಅಜಯ್ ಸೇಠ್, ಅಲ್ಪಸಂಖ್ಯಾತರ ಕಲ್ಯಾಣ, ಹಜ್ ಮತ್ತು ವಕ್ಫ್ ಇಲಾಖೆಯ ಕಾರ್ಯದರ್ಶಿ ಇಬ್ರಾಹೀಂ ಅಡೂರ್, ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಬೆಂಗಳೂರು ಉತ್ತರ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಸಯ್ಯದ್ ಶುಜಾವುದ್ದೀನ್, ಈದ್ಗಾ ಸಮಿತಿ ಅಧ್ಯಕ್ಷ ಇಕ್ಬಾಲ್ ಅಹ್ಮದ್, ಕಾರ್ಯದರ್ಶಿ ರಿಝ್ವಾನ್ ಬದರ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.