ಕಸವಿಲೇವಾರಿ ಗ್ರಾಮಗಳಲ್ಲಿ ಸಿಎಂ ವಾಸ್ತವ್ಯ ಹೂಡಲಿ: ಪದ್ಮನಾಭ ರೆಡ್ಡಿ ಸವಾಲು
ಬೆಂಗಳೂರು, ಜೂ.22: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರು ಅವೈಜ್ಞಾನಿಕವಾಗಿ ಕಸವಿಲೇವಾರಿ ಮಾಡುತ್ತಿರುವಂತ ಬೆಳ್ಳಹಳ್ಳಿ, ಮಿಟಗಾನಹಳ್ಳಿ ಗ್ರಾಮಗಳಿಗೆ ಬಂದು ಗ್ರಾಮವಾಸ್ತವ್ಯ ಮಾಡಲಿ ಎಂದು ಬಿಬಿಎಂಪಿ ವಿರೋಧ ಪಕ್ಷದ ನಾಯಕ ಪದ್ಮನಾಭ ರೆಡ್ಡಿ ಸವಾಲು ಹಾಕಿದ್ದಾರೆ.
ಬೆಳ್ಳಹಳ್ಳಿ ಹಾಗೂ ಮಿಟಗಾನಹಳ್ಳಿ ಗ್ರಾಮದಲ್ಲಿ ಕಸ ವಿಲೇವಾರಿ ಮಾಡುತ್ತಿರುವುದನ್ನು ವಿರೋಧಿಸಿ, ಬೆಳ್ಳಹಳ್ಳಿ ವೃತ್ತದ ಬಳಿ ಶಾಸಕ ಎಸ್.ಆರ್.ವಿಶ್ವನಾಥ್ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಸಿಎಂ ಉತ್ತರ ಕರ್ನಾಟಕದ ಗ್ರಾಮಗಳ ಸಮಸ್ಯೆ ಪರಿಶೀಲನೆಗೆ ಗ್ರಾಮ ವಾಸ್ತವ್ಯ ಮಾಡುತ್ತಿದ್ದಾರೆ. ಆದರೆ, ವಿಧಾನಸೌಧದ ಕೂಗಳತೆ ದೂರದಲ್ಲಿರುವ ಬೆಳ್ಳಹಳ್ಳಿಯಲ್ಲಿ ನಗರದ ಕಸವನ್ನು ತಂದು ಅವೈಜ್ಞಾನಿಕವಾಗಿ ಸುರಿಯುತ್ತಿದ್ದಾರೆ. ಅವರಿಗೆ ನಗರದ ಜನರ ಆರೋಗ್ಯದ ಕಾಳಜಿ ಇಲ್ಲ ಎಂದು ದೂರಿದರು.
ನಗರದ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ್ ಕಸವಿಲೇವಾರಿ ಕೇಂದ್ರಗಳಿದ್ದರೂ ಅವುಗಳ ಸಮರ್ಪಕ ನಿರ್ವಹಣೆ ಮಾಡದೇ ಹೊರವಲಯದ ಸ್ವಚ್ಛ ಗ್ರಾಮಗಳಲ್ಲಿ ಅವೈಜ್ಞಾನಿಕವಾಗಿ ಕಸ ಸುರಿದು ಜನರು ಮಾರಕ ರೋಗಗಳಿಗೆ ತುತ್ತಾಗುವಂತೆ ಮಾಡುತ್ತಿದ್ದಾರೆ. ವೈಜ್ಞಾನಿಕ ಕಸ ಸಂಸ್ಕರಣೆ ನೆಪದಲ್ಲಿ ನೂರಾರು ಕೋಟಿ ಅನುದಾನ ಬಿಡುಗಡೆಗೊಳಿಸಿ ದುರುಪಯೋಗ ಮಾಡುತ್ತಿದ್ದಾರೆ ಕಸದ ಮಾಫಿಯಾದ ಬಗ್ಗೆ ಸಮಗ್ರ ತನಿಖೆಯಾಗಬೇಕೆಂದು ಒತ್ತಾಯಿಸಿದರು.
ಅಲ್ಲದೆ, ಕಾನೂನಿನ ಪ್ರಕಾರ ಹೋರಾಟ ಮಾಡಿ, ವೈಜ್ಞಾನಿಕವಾಗಿ ಕಸ ವಿಲೇವಾರಿ ಮಾಡಬೇಕು. ಇಲ್ಲವಾದರೆ ಮುಂದಾಗುವ ಅನಾಹುತಕ್ಕೆ ಬಿಬಿಎಂಪಿ ಹೊಣೆ ಹೊರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದರು.