ಉಗುರು ಕಚ್ಚುವ ಕೆಟ್ಟ ಹವ್ಯಾಸ ನಿಮಗಿದೆಯೇ?: ಹಾಗಿದ್ದರೆ ಈ ಅಪಾಯಗಳ ಬಗ್ಗೆ ತಿಳಿದುಕೊಳ್ಳಿ

Update: 2019-06-22 16:35 GMT

 ಹೆಚ್ಚಿನ ಜನರು ಗೊತ್ತಿದ್ದೋ ಗೊತ್ತಿಲ್ಲದೆಯೋ ತಮ್ಮ ಉಗುರುಗಳನ್ನು ಆಗಾಗ್ಗೆ ಕಚ್ಚುತ್ತಿರುತ್ತಾರೆ. ಈ ಚಟ ಉಗುರುಗಳ ಆರೋಗ್ಯಕ್ಕೆ ಹಾನಿಕಾರಕ ಮಾತ್ರವಲ್ಲ,ಇತರ ಆರೋಗ್ಯ ಸಮಸ್ಯೆಗಳಿಗೂ ಕಾರಣವಾಗುತ್ತದೆ.

ಉಗುರು ಕಚ್ಚುವ ಹವ್ಯಾಸವು ಸಾಮಾನ್ಯವಾಗಿ ಎಲ್ಲ ವಯೋಮಾನದ ಜನರಲ್ಲಿಯೂ ಕಂಡು ಬರುತ್ತದೆ. ಈ ಚಟವು ಇತರರಲ್ಲಿ ಅಸಹ್ಯ ಮೂಡಿಸುವ ಜೊತೆಗೆ ಹಲವು ಅನಾರೋಗ್ಯಗಳಿಗೆ ಬಾಗಿಲು ತೆರೆಯುತ್ತದೆ. ಈ ಚಟವನ್ನು ಬಿಡುವುದು ಅಷ್ಟೊಂದು ಸುಲಭವಲ್ಲ. ಒತ್ತಡ ಅಥವಾ ಉದ್ವೇಗಗಳೂ ಉಗುರು ಕಚ್ಚಲು ಕಾರಣವಾಗಬಹುದು. ಉಗುರು ಕಚ್ಚುವ ಹವ್ಯಾಸವನ್ನು ತೊರೆಯಬೇಕು ಎನ್ನುವುದಕ್ಕೆ ಹಲವಾರು ಕಾರಣಗಳಿವೆ.

* ಉಗುರುಗಳ ಆರೋಗ್ಯಕ್ಕೆ ಹಾನಿ

ಉಗುರುಗಳನ್ನು ನಿರಂತರವಾಗಿ ಕಚ್ಚುತ್ತಿರುವುದರಿಂದ ಅವು ಪೆಡಸಾಗುತ್ತವೆ ಮತ್ತು ನಿರ್ದಿಷ್ಟ ಉದ್ದದ ಬಳಿಕ ಅವುಗಳ ಬೆಳವಣಿಗೆಯನ್ನು ತಡೆಯುತ್ತದೆ. ಕೆಲವೊಮ್ಮೆ ಈ ಚಟವು ಉಗುರುಗಳು ತುಂಡಾಗಲು ಕಾರಣವಾಗುತ್ತದೆ ಮತ್ತು ಇದು ಉಗುರುಗಳಲ್ಲಿ ಅತಿಯಾದ ನೋವನ್ನುಂಟು ಮಾಡಬಹುದು. ಅಲ್ಲದೆ ಉಗುರುಗಳ ಸುತ್ತಲಿನ ಚರ್ಮವು ಸಮತಟ್ಟಾಗಿರುವುದಿಲ್ಲ,ಅವು ಒರಟಾಗುತ್ತವೆ ಮತ್ತು ಕೆಲವು ಪ್ರಕರಣಗಳಲ್ಲಿ ರಕ್ತಸ್ರಾವವೂ ಆಗಬಹುದು.

* ಇತರ ಅನಾರೋಗ್ಯಗಳಿಗೆ ಆಹ್ವಾನ ನೀಡುತ್ತದೆ

ನಾವು ಉಗುರುಗಳನ್ನು ಕಚ್ಚುತ್ತಿರುವಾಗ ಅವುಗಳಲ್ಲಿರುವ ಸೂಕ್ಷ್ಮಜೀವಿಗಳು ನಮ್ಮ ಬಾಯಿಯ ನೇರ ಸಂಪರ್ಕಕ್ಕೆ ಬರುತ್ತವೆ. ಇದು ಶರೀರದಲ್ಲಿ ಹಲವಾರು ವೈರಲ್ ಮತ್ತು ಬ್ಯಾಕ್ಟೀರಿಯಾ ಸೋಂಕುಗಳಿಗೆ ಕಾರಣವಾಗುತ್ತದೆ.

ಉಗುರು ಕಚ್ಚುವಿಕೆಗೆ ಕಾರಣಗಳು

ಉಗುರು ಕಚ್ಚುವಿಕೆಗೆ ನಿಖರ ಕಾರಣವನ್ನಿನ್ನೂ ಕಂಡುಕೊಳ್ಳಲಾಗಿಲ್ಲ. ಆದರೆ ಒಬ್ಸೆಸ್ಸಿವ್ ಕಂಪಲ್ಶನ್ ಡಿಸಾರ್ಡರ್ ಅಥವಾ ಗೀಳು ಬೇನೆ,ಒತ್ತಡ ಅಥವಾ ಉದ್ವೇಗ ಉಗುರುಗಳ ಕಚ್ಚುವಿಕೆಯನ್ನು ಪ್ರೇರೇಪಿಸುತ್ತವೆ. ಕೆಲವೊಮ್ಮೆ ಬೇಜಾರು ಕಳೆಯಲು,ಕೆಲಸ ಮಾಡುತ್ತಿರುವಾಗ ಅಥವಾ ಯೋಚನೆ ಮಾಡುತ್ತಿರುವಾಗ ಏಕಾಗ್ರತೆಯಲ್ಲಿದ್ದಾಗ ಉಗುರುಗಳನ್ನು ಕೆಲವರು ಕಚ್ಚುತ್ತಿರುತ್ತಾರೆ. ಸುಮ್ಮನೆ ಕುಳಿತಿದ್ದಾಗಲೂ ಉಗುರು ಕಚ್ಚುವವರೂ ಇದ್ದಾರೆ.

ಉಗುರು ಕಚ್ಚುವಿಕೆಯ ಅಡ್ಡ ಪರಿಣಾಮಗಳು

ಉಗುರುಗಳ ಸುತ್ತಲಿನ ಚರ್ಮ ಕೆಂಪಗಾಗುವಿಕೆ ಮತ್ತು ನೋವು,ಉಗುರುಗಳ ಕ್ರಮಬದ್ಧವಲ್ಲದ ಬೆಳವಣಿಗೆ, ಉಗುರುಗಳ ಪೆಡಸಾಗುವಿಕೆ ಮತ್ತು ನಿರ್ದಿಷ್ಟ ಉದ್ದದ ಬಳಿಕ ಬೆಳವಣಿಗೆ ಸ್ಥಗಿತ ಇತ್ಯಾದಿಗಳು ಈ ಚಟದ ಅಡ್ಡ ಪರಿಣಾಮಗಳಾಗಿವೆ.

ಉಗುರು ಕಚ್ಚುವಿಕೆ ಚಟವನ್ನು ನಿಲ್ಲಿಸಲು ಮಾರ್ಗಗಳು

 ಈ ಕೆಟ್ಟ ಚಟವನ್ನು ಏಕಾಏಕಿ ನಿಲ್ಲಿಸಲು ಸಾಧ್ಯವಿಲ್ಲ. ಅದಕ್ಕೆ ತುಂಬ ಸಮಯ ಬೇಕಾಗುತ್ತದೆ ಮತ್ತು ಉಗುರು ಕಚ್ಚುವುದನ್ನು ನಿಯಂತ್ರಿಸಲು ಕೆಲವು ಮುನ್ನೆಚ್ಚರಿಕೆಗಳು ಅಗತ್ಯವಾಗುತ್ತವೆ.

ಈ ಚಟವನ್ನು ಹೊಂದಿರುವವರು ಮೊದಲಿಗೆ ತಮ್ಮ ಉಗುರುಗಳು ಸಣ್ಣದಾಗಿರುವಂತೆ ನೋಡಿಕೊಳ್ಳಬೇಕು ಮತ್ತು ಪ್ರತಿಬಾರಿಯೂ ಅವುಗಳನ್ನು ಕತ್ತರಿಸುವಾಗ ಪೂರ್ಣವಾಗಿ ಕತ್ತರಿಸಬೇಕು. ಉಗುರುಗಳು ಈಗಾಗಲೇ ಚಿಕ್ಕದಾಗಿದ್ದರೆ ಅವುಗಳನ್ನು ಕಡಿಯುವ ಅಗತ್ಯ ಮತ್ತು ತುಡಿತ ಉಂಟಾಗುವುದಿಲ್ಲ ಎನ್ನುವುದು ಇದರ ಹಿಂದಿನ ಸರಳ ತರ್ಕವಾಗಿದೆ.

ಉಗುರುಗಳು ಘಾಟು ವಾಸನೆ ಬೀರುವಂತೆ ಮಾಡುವ ಉಪಾಯ ವಿಲಕ್ಷಣವೆನ್ನಿಸಬಹುದು. ಆದರೆ ಇದು ಮಕ್ಕಳಲ್ಲಿ ತುಂಬ ಚೆನ್ನಾಗಿ ಕೆಲಸ ಮಾಡುತ್ತದೆ. ಉಗುರು ಕಚ್ಚುವ ಚಟವಿರುವ ಮಕ್ಕಳನ್ನು ವಿಶೇಷ ಕಾಳಜಿಯಿಂದ ನೋಡಬೇಕಾಗುತ್ತದೆ. ಮೆಣಸು ಇತ್ಯಾದಿ ಘಾಟು ವಾಸನೆಯನ್ನು ಉಗುರು ಬೀರುವ ಹಾಗೆ ಮಾಡಿದರೆ ಮಕ್ಕಳು ಈ ಚಟದಿಂದ ದೂರವಾಗುತ್ತಾರೆ. ಉಗುರುಗಳನ್ನು ನಿಯಮಿತವಾಗಿ ಮ್ಯಾನಿಕ್ಯೂರ್ ಮಾಡಿಕೊಳ್ಳುವುದು ಈ ಚಟದಿಂದ ದೂರವಾಗಿಸುತ್ತದೆ. ಏಕೆಂದರೆ ಮ್ಯಾನಿಕ್ಯೂರ್ ಮಾಡಿಸಿಕೊಳ್ಳಲು ಹಣ ನೀಡಬೇಕಾಗುತ್ತದೆ,ಹೀಗಾಗಿ ಉಗುರುಗಳ ಅಂದವನ್ನು ಕಾಪಾಡಿಕೊಳ್ಳುವ ಕಾಳಜಿಯೂ ಇರುತ್ತದೆ. ಇದು ಉಗುರುಗಳನ್ನು ಕಚ್ಚುವ ಕೆಲಸಕ್ಕೆ ಸ್ಫೂರ್ತಿ ನೀಡುವುದಿಲ್ಲ.

  ಈ ಚಟಕ್ಕೆ ಅಂತ್ಯ ಹಾಡಲು ನಿಮಗೆ ಉಗುರು ಕಡಿಯುವ ತುಡಿತ ಯಾವಾಗ ಮತ್ತು ಏಕೆ ಉಂಟಾಗುತ್ತದೆ ಎನ್ನುವುದನ್ನು ಗಮನಿಸುತ್ತಿರಿ. ಕಾರಣ ಗೊತ್ತಾದರೆ ಇಂತಹ ಚಟಗಳನ್ನು ನಿಯಂತ್ರಿಸುವುದು ಸುಲಭವಾಗುತ್ತದೆ. ನೀವು ಕೆಟ್ಟ ಮೂಡ್‌ನಲ್ಲಿದ್ದಾಗ ನಿಮ್ಮ ಕೈಗಳು ನಿಮ್ಮ ಮುಖ ಮತ್ತು ಬಾಯಿಯಿಂದ ದೂರವಿರುವಂತೆ ನೋಡಿಕೊಳ್ಳಿ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News