×
Ad

ಕಲ್ಯಾಣ ಇಲಾಖೆ ಆಯುಕ್ತರ ಕಚೇರಿ ಎತ್ತಂಗಡಿಗೆ ವಿರೋಧ: ಸ್ಥಳಾಂತರಿಸಿದರೆ ಪ್ರತಿಭಟನೆಯ ಎಚ್ಚರಿಕೆ

Update: 2019-06-22 22:27 IST

ಬೆಂಗಳೂರು, ಜೂ. 22: ಬಹುಮಹಡಿ ಕಟ್ಟಡದ ಐದನೆ ಮಹಡಿಯಲ್ಲಿರುವ ಸಮಾಜ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿಯನ್ನು ಯಾವುದೇ ಕಾರಣಕ್ಕೂ ಬೇರೆಡೆಗೆ ಸ್ಥಳಾಂತರಿಸಬಾರದು ಎಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಕರ್ನಾಟಕ ಸಮತಾ ಸೈನಿಕ ದಳ ಮನವಿ ಮಾಡಿದೆ.

ಶನಿವಾರ ಸರಕಾರದ ಮುಖ್ಯ ಕಾರ್ಯದರ್ಶಿ ವಿಜಯ್ ಭಾಸ್ಕರ್ ಅವರಿಗೆ ಮನವಿ ಸಲ್ಲಿಸಿದ ಕೆಎಸ್‌ಎಸ್‌ಡಿಯ ರಾಜ್ಯಾಧ್ಯಕ್ಷ ಚನ್ನಕೃಷ್ಣಪ್ಪ, ಏಕಾಏಕಿ ಕಲ್ಯಾಣ ಇಲಾಖೆ ಆಯುಕ್ತರ ಕಚೇರಿಯಲ್ಲಿ ಕೆಜಿ ರಸ್ತೆಯಲ್ಲಿನ ಬೆಂಗಳೂರು ಗ್ರಾಮಾಂತರ ಜಿಲ್ಲಾ ಪಂಚಾಯತ್ ಕಚೇರಿ ಕಟ್ಟಡಕ್ಕೆ ಸ್ಥಳಾಂತರಿಸಲು ಮುಂದಾಗಿರುವುದರ ಹಿಂದೆ ಅಸ್ಪೃಶ್ಯತೆ ವಾಸನೆ ಬರುತ್ತಿದೆ.

ಕಚೇರಿ ಸ್ಥಳಾಂತರದಿಂದ ರಾಜ್ಯದ ವಿವಿಧೆಡೆಗಳಿಂದ ಆಗಮಿಸುವ ಸಮುದಾಯದ ಫಲಾನುಭವಿಗಳಿಗೆ ತೊಂದರೆಯಾಗಲಿದೆ. ಬಹುಮಹಡಿ ಕಟ್ಟಡದಲ್ಲಿ ಕಚೇರಿ ಇದ್ದರೆ ಒಂದೇ ಕಡೆ ಜನಪ್ರತಿನಿಧಿಗಳು, ಸರಕಾರದ ಇತರೆ ಕಚೇರಿಗಳು ಇರುವುದರಿಂದ ಬಡ ಜನರಿಗೆ ಅನುಕೂಲವಾಗಲಿದೆ. ಹೀಗಾಗಿ ಕಚೇರಿ ಸ್ಥಳಾಂತರ ಮಾಡಬಾರದು ಎಂದು ಆಗ್ರಹಿಸಿದ್ದಾರೆ.

2018-19ನೆ ಸಾಲಿನ ಆಯವ್ಯಯದಲ್ಲಿ ಘೋಷಿಸಿದಂತೆ ಸಮಾಜ ಕಲ್ಯಾಣ ಇಲಾಖೆ ಎಲ್ಲ ಕಚೇರಿ ಒಂದೇ ಕಡೆ ಸ್ಥಾಪಿಸಲು ಸ್ಪೂರ್ತಿ ಭವನ ನಿರ್ಮಾಣ ಇನ್ನೂ ಘೋಷಣೆಯಾಗಿಯೇ ಉಳಿದಿದೆ. ಭವನ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಬೇಕು. ಸಮಾಜ ಕಲ್ಯಾಣ ಇಲಾಖೆ ಆಯುಕ್ತ ಕಚೇರಿಯ ಬೇರೆಡೆ ಸ್ಥಳಾಂತರ ಮಾಡಿದರೆ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಪ್ರಕಟನೆಯಲ್ಲಿ ಎಚ್ಚರಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News