ಜೂ.23: ನಕಲಿ ಕಂಪನಿಗಳ ವಿರುದ್ಧ ಧರಣಿ
ಬೆಂಗಳೂರು, ಜೂ.22: ಕರ್ನಾಟಕ ರಕ್ಷಣಾ ಸೇನೆ ವತಿಯಿಂದ ಸಾರ್ವಜನಿಕರಿಗೆ ಮೋಸ ಮಾಡುತ್ತಿರುವ ನಕಲಿ ಕಂಪನಿಗಳು ಹಾಗೂ ಇಂತಹ ಕಂಪನಿಗಳಿಗೆ ಕುಮ್ಮಕ್ಕು ನೀಡುತ್ತಿರುವ ರಾಜಕಾರಣಿಗಳ ವಿರುದ್ಧ ಇಂದು (ಜೂ.23) ಬೆಳಗ್ಗೆ 11 ಗಂಟೆಗೆ ಪುರಭವನದ ಮುಂಭಾಗ ಪ್ರತಿಭಟನಾ ಧರಣಿಯನ್ನು ಹಮ್ಮಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸೇನೆಯ ರಾಜ್ಯಾಧ್ಯಕ್ಷ ಟಿ.ರಮೇಶ್ ಗೌಡ, ಇತ್ತೀಚೆಗೆ ಸಾರ್ವಜನಿಕರಿಗೆ ಮೋಸ ಮಾಡುವಂತಹ ಕಂಪನಿಗಳು ಹೆಚ್ಚಾಗಿದ್ದು ಜನರು ಅವುಗಳಲ್ಲಿ ಹೂಡಿಕೆ ಮಾಡಿ ಮೋಸ ಹೋಗುತ್ತಿದ್ದಾರೆ. ವಿಪರ್ಯಾಸ ಸಂಗತಿ ಎಂದರೆ ಇಂತಹ ಕಂಪನಿಗಳಿಗೆ ರಾಜಕೀಯಕ ಪಕ್ಷಗಳ ಪ್ರಮುಖ ನಾಯಕರು ಕುಮ್ಮಕ್ಕು ನೀಡುತ್ತಿದ್ದಾರೆ ಎಂದು ವಿಷಾದ ವ್ಯಕ್ತಪಡಿಸಿದರು.
ಈ ಧರಣಿಯಲ್ಲಿ ಸುಮಾರು 2 ಸಾವಿರ ಜನ ಭಾಗವಹಿಸಲಿದ್ದು, ಐಎಂಎ ಕಂಪನಿ ಹಾಗೂ ಇತರೆ ಯಾವುದೇ ಕಂಪನಿಯಿಂದ ಮೋಸ ಹೋಗಿರುವ ಜನರಿಗೆ ಹಣ ವಾಪಾಸ್ಸು ನೀಡುವಂತೆ ಈ ಸಂದರ್ಭದಲ್ಲಿ ಆಗ್ರಹಿಸಲಾಗುತ್ತದೆ. ಅಲ್ಲದೆ ನಕಲಿ ಕಂಪನಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಸರಕಾರ ಮನವಿ ಪತ್ರವನ್ನು ನೀಡಲಾಗುತ್ತದೆ ಎಂದು ತಿಳಿಸಿದರು.