×
Ad

ಬಿಬಿಎಂಪಿ ಬಜೆಟ್ ಅನುದಾನ ಕಡಿತ: ಪರಿಷ್ಕೃತ ಬಜೆಟ್‌ಗೆ ಸಿದ್ಧತೆ

Update: 2019-06-22 23:28 IST

ಬೆಂಗಳೂರು, ಜೂ.22: ಬಿಬಿಎಂಪಿ ಮಂಡಿಸಿದ್ದ 12,958 ಕೊಟಿ ರೂ. ಬಜೆಟ್‌ನಲ್ಲಿ ನಗರಾಭಿವೃದ್ಧಿ ಇಲಾಖೆ 11,648.90 ಕೋಟಿ ಮೊತ್ತಕ್ಕೆ ಅನುಮೊದನೆ ನೀಡಿದ ಹಿನ್ನೆಲೆಯಲ್ಲಿ ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರವಾರು ನೀಡಲಾಗಿದ್ದ ಅನುದಾನದಲ್ಲಿ ಹೆಚ್ಚಿಗೆ ಕಡಿತಗೊಳಿಸಿ ಪರಿಷ್ಕೃತ ಬಜೆಟ್ ಸಿದ್ಧಪಡಿಸಲು ಪಾಲಿಕೆ ಮುಂದಾಗಿದೆ.

ಮುಂದಿನ ವರ್ಷ ಬರಲಿರುವ ಬಿಬಿಎಂಪಿ ಚುನಾವಣೆ ದೃಷ್ಟಿಯಲ್ಲಿ ಇಟ್ಟುಕೊಂಡು ಬಿಬಿಎಂಪಿ 2019-20ನೇ ಸಾಲಿಗೆ 12,958 ಕೋಟಿ ರೂ. ಮೊತ್ತದ ಭಾರಿ ಗಾತ್ರದ ಬಜೆಟ್ ಮಂಡಿಸಿತ್ತು. ಅದರಲ್ಲಿ 1,308.89 ಕೋಟಿ ರೂ. ಕಡಿತಗೊಳಿಸಿ, 11,648.90 ಕೋಟಿ ರೂ.ಗೆ ಅನುಮೋದನೆ ನೀಡಲಾಗಿತ್ತು. ಅದರಂತೆ, ಇದೀಗ ಬಿಬಿಎಂಪಿ ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಹಿಂದೆ ಮಂಡಿಸಿದ್ದ ಬಜೆಟ್‌ನಲ್ಲಿ ಕೆಲ ಅನುದಾನದಲ್ಲಿ ಕಡಿತಗೊಳಿಸಿ ಪರಿಷ್ಕೃತ ಬಜೆಟ್ ಸಿದ್ಧಪಡಿಸಿ, ಬಳಿಕ ಕೌನ್ಸಿಲ್‌ನಲ್ಲಿ ಅನುಮತಿ ಪಡೆಯಲಿದೆ.

ಒಂಟಿ ಮನೆಗೂ ತಡೆ: ವಾರ್ಡ್ ಮತ್ತು ವಿಧಾನಸಭಾ ಕ್ಷೇತ್ರವಾರು ಅನುದಾನ ಕಡಿತದ ಜತೆಗೆ ಒಂಟಿಮನೆ ಯೋಜನೆಗೆ ಮೀಸಲಿರಿಸಿದ್ದ ಅನುದಾನದಲ್ಲಿ ಹೆಚ್ಚು ಕಡಿತ ಮಾಡಲಾಗಿದೆ. ಎಸ್ಸಿ-ಎಸ್ಟಿ ವೈಯಕ್ತಿಕ ಮನೆ ನಿರ್ಮಾಣ, ಪ್ರದೇಶಗಳ ಅಭಿವೃದ್ಧಿ, ಹಿಂದುಳಿದ ವರ್ಗ, ಅಲ್ಪಸಂಖ್ಯಾತರಿಗೆ ಮೀಸಲಿಟ್ಟ ಅನುದಾನಗಳ ಪೈಕಿ -227 ಕೋಟಿ ರೂ.ಗಳಷ್ಟು ಕಡಿತಗೊಳಿಸಲಾಗಿದೆ.

ಅನುದಾನ ಕಡಿತ: ಸ್ಥಾಯಿ ಸಮಿತಿ ಸಿದ್ಧಪಡಿಸಿರುವ ಪರಿಷ್ಕೃತ ಬಜೆಟ್‌ನಲ್ಲಿ ವಿವಿಧ ವಾರ್ಡ್, ವಿಧಾನಸಭಾ ಕ್ಷೇತ್ರವಾರು ಹಂಚಿಕೆ ಮಾಡಲಾಗಿದ್ದ ಅನುದಾನದಲ್ಲಿ 681 ಕೋಟಿ ರೂ.ಅನುದಾನ ಕಡಿತಗೊಳಿಸಲಾಗಿದೆ. ಕಾಂಗ್ರೆಸ್ ಸದಸ್ಯರಿರುವ ವಾರ್ಡ್‌ಗಳಿಗೆ ಹಂಚಿಕೆ ಮಾಡಲಾಗಿರುವ ಅನುದಾನ ತಡೆಹಿಡಿಯಲಾಗಿದೆ. ಬಿಜೆಪಿಯ 14, ಜೆಡಿಎಸ್‌ನ 4 ಮತ್ತು ಇಬ್ಬರು ಪಕ್ಷೇತರ ಸದಸ್ಯರು ಪ್ರತಿನಿಧಿಸುವ ವಾರ್ಡ್‌ನಲ್ಲಿ ಅಭಿವೃದ್ಧಿ ಕಾಮಗಾರಿಗೆ ಮೀಸಲಿಟ್ಟ ಅನುದಾನವನ್ನು ಕಡಿತಗೊಳಿಸಲಾಗಿದೆ.

ಕಡಿತ ಮಾಡಿರುವ ಅನುದಾನ ಹಾಗೂ ಯೋಜನೆಗಳನ್ನು ಪೂರಕ ಬಜೆಟ್‌ನಲ್ಲಿ ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ ಎಂದು ತೆರಿಗೆ ಮತ್ತು ಆರ್ಥಿಕ ಸ್ಥಾಯಿ ಸಮಿತಿ ಬಜೆಟ್ ಪುಸ್ತಕದಲ್ಲಿದೆ. ಅದಕ್ಕೆ ತಕ್ಕಂತೆ ರಾಜ್ಯ ಸರಕಾರವೂ ಬಜೆಟ್ ಕಡಿತಗೊಳಿಸಿರುವ ಮೊತ್ತದ ಯೋಜನೆಗಳಿಗೆ ಪೂರಕ ಬಜೆಟ್ ಸಿದ್ಧಪಡಿಸಿ ಸಲ್ಲಿಸುವಂತೆ ತಿಳಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News