ಕಾಂಗ್ರೆಸ್ ಮಾಡಿದ ಅನ್ಯಾಯವನ್ನು ದೇಶದ ಜನ ಕ್ಷಮಿಸಲ್ಲ: ಬಿಎಸ್‌ವೈ

Update: 2019-06-23 12:25 GMT

ಬೆಂಗಳೂರು, ಜೂ.23: ದೇಶದ ಅಖಂಡತೆಗಾಗಿ ಶ್ರಮಿಸಿ, ಬಲಿದಾನ ಗೈದ ಜನಸಂಘದ ಸಂಸ್ಥಾಪಕ ಡಾ.ಶ್ಯಾಮಪ್ರಸಾದ್ ಮುಖರ್ಜಿ ಅವರಿಗೆ ಕಾಂಗ್ರೆಸ್ ಮಾಡಿರುವ ಅನ್ಯಾಯವನ್ನು ದೇಶದ ಜನರು ಎಂದಿಗೂ ಕ್ಷಮಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದರು.

ರವಿವಾರ ನಗರದ ಬಿಜೆಪಿ ಕಚೇರಿಯಲ್ಲಿ ಆಯೋಜಿಸಲಾಗಿದ್ದ ಡಾ.ಶ್ಯಾಮ ಪ್ರಸಾದ್ ಮುಖರ್ಜಿ ಬಲಿದಾನ ದಿನದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.

ಕಾಂಗ್ರೆಸ್ ಪಕ್ಷವು ಅಂಬೇಡ್ಕರ್ ಅವರಿಗೆ ಮೋಸ ಮಾಡಿದಂತೆ, ಮುಖರ್ಜಿ ಅವರಿಗೂ ಅನ್ಯಾಯ ಮಾಡಿತು. ಅವರು ನಿಗೂಢವಾಗಿ ಮೃತಪಟ್ಟರೂ, ಆ ಬಗ್ಗೆ ತನಿಖೆಯನ್ನು ನಡೆಸಲಿಲ್ಲ. ಡಾ.ಮುಖರ್ಜಿ ಅವರು ಬಲಿದಾನ ಮತ್ತು ಪರಿಶ್ರಮದ ಕಾರಣ, ಇಂದು ದೇಶದಲ್ಲಿ ಬಿಜೆಪಿ ಅತಿ ಹೆಚ್ಚು ಸ್ಥಾನಗಳನ್ನು ಪಡೆದು ಎರಡನೇ ಬಾರಿ ಅಧಿಕಾರಕ್ಕೆ ಬಂದಿದೆ. ನಾವು ಸ್ವಚ್ಛ, ದಕ್ಷ ಆಡಳಿತ ನೀಡುವುದೇ ಅವರಿಗೆ ಸಲ್ಲಿಸುವ ನಿಜವಾದ ಶ್ರದ್ಧಾಂಜಲಿ ಎಂದು ಯಡಿಯೂರಪ್ಪ ಹೇಳಿದರು.

ಪ್ರಧಾನಿ ನರೇಂದ್ರಮೋದಿ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಸಂವಿಧಾನದ 370ನೇ ವಿಧಿಯನ್ನು ರದ್ದು ಮಾಡಲು ಪ್ರಕ್ರಿಯೆ ಆರಂಭಿಸಿದ್ದು, ಸದ್ಯದಲ್ಲೇ ಇದು ಸಾಕಾರವಾಗಲಿದೆ ಎಂದು ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಮಾಜಿ ಸಚಿವ ಗೋವಿಂದ ಕಾರಜೋಳ ಮಾತನಾಡಿ, ದೇಶ ಸ್ವಾತಂತ್ರಕ್ಕಾಗಿ ಬಿಜೆಪಿಯ ಒಂದು ನಾಯಿಯೂ ಸತ್ತಿಲ್ಲ ಎಂದು ಟೀಕಿಸುವ ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದರು. ಈಗಿನ ಕಾಂಗ್ರೆಸ್ ಮುಖಂಡರ ಕುಟುಂಬದ ಎಷ್ಟು ಸದಸ್ಯರು ಹೋರಾಟ ನಡೆಸಿದ್ದಾರೆ ಎನ್ನುವ ಪಟ್ಟಿ ನೀಡಲಿ ಎಂದು ಸವಾಲು ಹಾಕಿದರು.

ಈ ದೇಶಕ್ಕಾಗಿ ಹೋರಾಡಿದ ಮುಖಂಡರಿಗೆ ಕಾಂಗ್ರೆಸ್ ಪಕ್ಷ ನೀಡಿದ ಕಷ್ಟವನ್ನು ಕ್ಷಮಿಸುವುದು ಸಾಧ್ಯವಿಲ್ಲ. ಆರೆಸೆಸ್ಸ್ ಮತ್ತು ಬಿಜೆಪಿಯು ಮಾನವ ಕುಲ ಒಂದು, ಅಸ್ಪೃಶ್ಯತೆ ಕಳಂಕ ಎನ್ನುವ ಮೂಲಕ ದೇಶದ ಹಿತ ರಕ್ಷಿಸುತ್ತಿದೆ. ಕಾಂಗ್ರೆಸ್ ಮುಖಂಡರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು.

ರಾಜ್ಯ ಬಿಜೆಪಿ ಕಾರ್ಯಾಲಯದ ಕಾರ್ಯದರ್ಶಿ ಗಣೇಶ್ ಯಾಜಿ ಪ್ರಾಸ್ತಾವಿಕ ಭಾಷಣ ಮಾಡಿ, ಭಾರತೀಯ ಜನಸಂಘ ಸ್ಥಾಪಿಸಿದ ಡಾ.ಶ್ಯಾಮಪ್ರಸಾದ್ ಮುಖರ್ಜಿಯವರ ತ್ಯಾಗ, ಬಲಿದಾನವನ್ನು ಸ್ಮರಿಸಿದರು. ಈ ಸಂದರ್ಭದಲ್ಲಿ ವಿಧಾನಪರಿಷತ್‌ ಸದಸ್ಯ ಮಹಾಂತೇಶ್ ಕವಟಗಿಮಠ, ರುದ್ರೇಗೌಡ, ಮಲ್ಲೇಶ್ವರಂ ಮಂಡಲ ಬಿಜೆಪಿ ಅಧ್ಯಕ್ಷ ಕೇಶವ ಐತಾಳ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News