ಜೈನ ಸಮುದಾಯದ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿದೆ: ಸಚಿವ ಡಿ.ಕೆ.ಶಿವಕುಮಾರ್

Update: 2019-06-23 12:44 GMT

ಬೆಂಗಳೂರು, ಜೂ.23: ಅಹಿಂಸಾ ಮಾರ್ಗವನ್ನು ಪರಿಪಾಲಿಸುತ್ತಿರುವ ಜೈನ ಸಮಾಜದ ಸಮಸ್ಯೆಗಳಿಗೆ ಸರಕಾರ ಸ್ಪಂದಿಸಲಿದೆ ಎಂದು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ಡಿ.ಕೆ.ಶಿವಕುಮಾರ್ ತಿಳಿಸಿದರು.

ರವಿವಾರ ನಗರದ ಆರಮನೆ ಮೈದಾನದಲ್ಲಿ ಆಚಾರ್ಯ ಮಹಾಶ್ರವಣ್ಣೀ ಸ್ವಾಮೀಜಿಗೆ ಆಯೋಜಿಸಿದ್ದ ಅಭಿನಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಮನುಕುಲಕ್ಕೆ ಒಳಿತು ಬಯಸುವ ತೇರಾಪಂತ್‌ನ ಧರ್ಮಗುರು ಮಹಾಶ್ರವಣ್ಣೀ ಹಾಕಿಕೊಟ್ಟ ಮಾರ್ಗದಲ್ಲಿ ನಾವೆಲ್ಲರೂ ನಡೆದರೆ ವಿಶ್ವಕ್ಕೆ ಶಾಂತಿ ದೊರೆಯುತ್ತದೆ ಎಂದರು.

ಅಹಿಂಸಾ ಮಾರ್ಗದಿಂದ ಎಲ್ಲರವನ್ನು ಗೆಲ್ಲಬಹುದು. ಆದರೆ, ಇದನ್ನು ಮರೆತಾಗ ಇಡೀ ದೇಶದಲ್ಲಿ ಹಿಂಸಾ ವಾತಾವರಣ ಉಂಟಾಗಿ ಅರಾಜಕತೆ ಸೃಷ್ಟಿಯಾಗಲಿದೆ. ಹೀಗಾಗಿ ನಮ್ಮ ಸಾಧು, ಸಂತರು, ಮುನಿಗಳು ನಡೆದುಕೊಂಡುಬಂದ ಮಾರ್ಗಗಳು ನಮಗೆಲ್ಲರಿಗೂ ಮಾರ್ಗದರ್ಶನವಾಗಲಿ ಎಂದು ಅವರು ಹೇಳಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಮಾತನಾಡಿ, ಅಹಿಂಸಾ ಯಾತ್ರೆಯ ಪ್ರವರ್ತಕರಾಗಿರುವ ಶರ್ಮಾಂಜಿ 2014ರ ನವೆಂಬರ್ 9ರಂದು ದೆಹಲಿಯ ಕೆಂಪುಕೋಟೆಯಲ್ಲಿ ತಮ್ಮ ಯಾತ್ರೆ ಆರಂಭಿಸಿ ನೂರಾರು ಶಿಷ್ಯರೊಂದಿಗೆ ಕಾಲ್ನಡಿಗೆಯಲ್ಲಿ ಕರ್ನಾಟಕಕ್ಕೆ ಆಗಮಿಸಿರುವುದು ಸಂತಸ ತಂದಿದೆ ಎಂದರು.

ತಮ್ಮ ಆಹಿಂಸಾ ಯಾತ್ರೆಯಲ್ಲಿ ಸಾರ್ವತ್ರಿಕ ಸದ್ಭಾವನೆ, ಸಮರಸತೆ, ನೈತಿಕತೆ, ವ್ಯಸನಮುಕ್ತಿ ಅಂಶಗಳನ್ನು ಪ್ರಚಾರ ಮಾಡುತ್ತಾ, 48ಸಾವಿರ ಮೈಲಿಗಳಷ್ಟು ಕಾಲ್ನಡಿಗೆಯಲ್ಲಿ ಕ್ರಮಿಸಿ ರಾಜ್ಯಕ್ಕೆ ಪಾದಾರ್ಪಣೆ ಮಾಡಿರುವುದು ಶುಭದ ಸಂಕೇತವೆಂದು ಅವರು ಹೇಳಿದರು.

ಆದಿಚುಂಚನಗಿರಿ ಮಠದ ನಿರ್ಮಲಾನಂದ ಸ್ವಾಮೀಜಿ ಮಾತನಾಡಿ, ಆದಿಚುಂಚನಗಿರಿ ಮತ್ತು ತೇರಾಪಂತನ ಧರ್ಮಗುರುಗಳ ನಡುವೆ ಅವಿನಾಭಾವ ಬಾಂಧವ್ಯವಿದೆ. ಪ್ರತಿ ಚಾತುರ್ಮಾಸ ಸಂದರ್ಭದಲ್ಲೂ ಆಚಾರ್ಯರನ್ನು ಭೇಟಿ ಮಾಡಿ ಗೌರವ ಸಲ್ಲಿಸುವ ಪರಿಪಾಠವನ್ನು ಅನುಸರಿಸಿಕೊಂಡು ಬಂದಿದೆ. ಈದೀಗ ಮಹಾಶರ್ಮಾಂಜಿ ನಗರಕ್ಕೆ ಆಗಮಿಸಿರುವುದು ಅತ್ಯಂತ ಸಂತಸದ ಕ್ಷಣವಾಗಿದೆ ಎಂದರು.

ಈ ವೇಳೆ ಮೇಯರ್ ಗಂಗಾಂಬಿಕೆ, ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್, ವಸತಿ ಸಚಿವ ಎಂ.ಟಿ.ಬಿ.ನಾಗರಾಜ್, ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಬಾಯಿ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News