ಐಎಂಎ ವಂಚನೆ ಪ್ರಕರಣ: ಸ್ಫೋಟಕ ವಿಡಿಯೋ ಬಿಡುಗಡೆಗೊಳಿಸಿದ ಮನ್ಸೂರ್ ಖಾನ್ ಹೇಳಿದ್ದೇನು?

Update: 2019-06-23 13:22 GMT

►ಸ್ಫೋಟಕ ಮಾಹಿತಿಗಳು ಬಹಿರಂಗ

►“ಅವರು ನನ್ನನ್ನು ಮುಗಿಸುತ್ತಾರೆ”

►“ಐಎಎಸ್ ಅಧಿಕಾರಿಯೊಬ್ಬರು 10 ಕೋಟಿ ರೂ...”

ಬೆಂಗಳೂರು, ಜೂ.23: ಐಎಂಎ ವಂಚನೆ ಪ್ರಕರಣ ರಾಜ್ಯದಲ್ಲಿ ಭಾರೀ ಕೋಲಾಹಲವೆಬ್ಬಿಸಿರುವ ನಡುವೆಯೇ ಐಎಂಎ ಮಾಲಕ ಮನ್ಸೂರ್ ಖಾನ್ ವಿಡಿಯೋವೊಂದನ್ನ ಬಿಡುಗಡೆ ಮಾಡಿದ್ದು, ಹಲವು ರಾಜಕಾರಣಿಗಳ ಹೆಸರನ್ನು ಉಲ್ಲೇಖಿಸಿದ್ದಾರೆ. ಮನ್ಸೂರ್ ಖಾನ್ ವಿಡಿಯೋದ ಸಂಪೂರ್ಣ ಸಾರಾಂಶ ಈ ಕೆಳಗಿದೆ.

“ಮೊದಲಿಗೆ ನಾನು ರಾಜ್ಯಸಭೆಯ ಮಾಜಿ ಸದಸ್ಯರಾದ ರೆಹಮಾನ್ ಖಾನ್, ಮುಹಮ್ಮದ್ ಉಬೈದುಲ್ಲಾ ಶರೀಫ್,  ಮುಹಮ್ಮದ್ ಖಾಲಿದ್ ಅಹ್ಮದ್, ಉಗ್ರ ಗುಂಪಿನೊಂದಿಗೆ ಸಂಬಂಧ ಹೊಂದಿರುವ  ಮುಕ್ತಾರ್ ಅಹ್ಮದ್ ಟಾಡಾ, ಫೈರೋಝ್ ಅಬ್ದುಲ್ಲಾ ಸೇಠ್, ಪ್ರೆಸ್ಟೀಜ್ ಗ್ರೂಪ್ ನ ಇರ್ಫಾನ್, ಎಂಎಲ್ ಸಿ ಶರವಣ, ಮುಫ್ತಿ ಇಫ್ತಿಕಾರ್ ಅಹ್ಮದ್ ಖಾಸಿಮಿ, ಶಂಸುದ್ದೀನ್ ಬಿಜ್ಲಿ ಮೌಲ್ವಿ, ಝೈನುಲ್ ಆಬಿದೀನ್ ಮತ್ತು ಸಾಮಾಜಿಕ ಜಾಲತಾಣ ಫೇಸ್ಬುಕ್, ವಾಟ್ಸ್ಯಾಪ್, ಟ್ವಿಟರ್ ಗಳಲ್ಲಿ ದ್ವೇಷ ಹರಡಿ ಐಎಂಎಯನ್ನು ಮುಗಿಸಲು ಯತ್ನಿಸಿದ ಎಲ್ಲರಿಗೂ ಶುಭಾಶಯಗಳು.

ನಾನು ವಾಪಸ್ ಬರುತ್ತೇನೆ. ಜೂನ್ 14ಕ್ಕೆ ನಾನು ವಾಪಸ್ ಬರಲಿದ್ದೆ, ಆದರೆ ಸಾಧ್ಯವಾಗಲಿಲ್ಲ. ಅಲೋಕ್ ಕುಮಾರ್ ಸರ್ ನನಗೆ ವಿವರಗಳನ್ನು ಕಳುಹಿಸಿ. ನಿಮ್ಮ ಮೇಲೆ ನನಗೆ ಭರವಸೆಯಿದೆ.  ನಾನು ಜನರಿಗಾಗಿ ವಾಪಸ್ ಬರುತ್ತೇನೆ. ನಂತರ ಕಾನೂನು ಅದರ ಕೆಲಸ ಮಾಡುತ್ತದೆ.

21 ಸಾವಿರ ಕುಟುಂಬಗಳಿಗೆ ಐಎಂಎ 13 ವರ್ಷಗಳಿಂದ ಆದಾಯ ನೀಡುತ್ತಾ ಬಂದಿದೆ. 1,800 ಮಕ್ಕಳ ಶೈಕ್ಷಣಿಕ ಸೌಲಭ್ಯವನ್ನು ನೋಡಿಕೊಳ್ಳುತ್ತಿದೆ. 7,300 ಮನೆಗಳಿಗೆ ರೇಷನ್ ನೀಡುತ್ತಿದೆ. ಐಎಂಎ ಇದುವರೆಗೆ 12 ಸಾವಿರ ಕೋಟಿ ರೂ. ಲಾಭ ಗಳಿಸಿದ್ದು,  ಅದನ್ನು ಹೂಡಿಕೆದಾರರಿಗೆ ನೀಡಿದ್ದೇವೆ. 2 ಸಾವಿರ ಕೋಟಿ ಕ್ಯಾಪಿಟಲ್ ಇನ್ ವೆಸ್ಟ್ ಮೆಂಟ್ ವಾಪಸ್ ನೀಡಿದ್ದೇವೆ. ಇನ್ನು ನಮ್ಮಲ್ಲಿ 1350 ಕೋಟಿ ರೂ. ಮೌಲ್ಯದ ಆಸ್ತಿಗಳಿವೆ. ಅದರ ಮೂಲಕ ಹಣ ಹಂಚುತ್ತೇವೆ. ಈ ವಿಡಿಯೋದ ಉದ್ದೇಶ ಒಂದೇ, 99 ಶೇ. ಜನರು ನನ್ನ ವಿರುದ್ಧ ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ನಾನು ಯಾವುದೇ ಪಾಂಝಿ ಸ್ಕೀಮ್ ನಡೆಸುತ್ತಿಲಲ್ಲ. ನನ್ನ ಉದ್ಯಮದ  ಕುಸಿತದ ಹಿಂದೆ ಯಾರಿದ್ದಾರೆ, ಏನು ಭ್ರಷ್ಟಾಚಾರ ನಡೆದಿದೆ, ಕೇಂದ್ರ, ರಾಜ್ಯ ಮಟ್ಟದ ಭ್ರಷ್ಟಾಚಾರಗಳು ನನ್ನನ್ನು ದಿವಾಳಿಯಾಗಿಸಲು  ಯತ್ನಿಸಿ ಯಶಸ್ವಿಯಾದವು. ಇದರ ಎಲ್ಲಾ ಪಟ್ಟಿ, ಅವರ ಚಟುವಟಿಕೆ, ಯಾರು ಸುಲಿಗೆ ಮಾಡಿದ್ದಾರೆ, ಯಾರು ದೌರ್ಜನ್ಯ ನಡೆಸ ಹಣ ದೋಚಿದ್ದಾರೆ ಎಲ್ಲಾ ವಿವರಗಳು ನನ್ನ ಬಳಿಯಿದೆ.

ಆ ಪಟ್ಟಿಯನ್ನು, ಎಲ್ಲಾ ವಿವರಗಳನ್ನು ನ್ಯಾಯಾಂಗದ ಮುಂದಿಡುತ್ತೇನೆ.  ಆ ವ್ಯಕ್ತಿಗಳು ನನ್ನನ್ನು ಜೀವಂತ ಬಿಡುವುದಿಲ್ಲ ಎನ್ನುವುದು ಗೊತ್ತಿದೆ. ಇದರ ಹಿಂದಿರುವ ಹೆಸರುಗಳು ಸಣ್ಣಪುಟ್ಟದ್ದಲ್ಲ. ಇದರ ಹಿಂದೆ ದೊಡ್ಡ ದೊಡ್ಡ ಕೈಗಳಿವೆ.  ನಾನು ಆ ಹೆಸರುಗಳನ್ನು ಈಗ ಹೇಳಬಹುದು.  ಆದರೆ ನನ್ನ ಕುಟುಂಬ ಭಾರತದಲ್ಲಿದೆ.  ಅವರು ನನ್ನ ಕುಟುಂಬವನ್ನು ಮುಗಿಸುತ್ತಾರೆ.  ನಾನು ಅಲ್ಲಿಗೆ ತಲುಪಿದಾಗ ಅವರು ನನ್ನನ್ನು ಮುಗಿಸುತ್ತಾರೆ. ನನ್ನ ಬಾಯ್ಮುಚ್ಚಿಸಲು ಎಲ್ಲಾ ಯೋಜನೆಗಳು ನಡೆದಿವೆ. ನನ್ನನ್ನು ಹೊಡೆದು ಕೊಲ್ಲಲು ಜನರು ತಯಾರಾಗಿದ್ದಾರೆ ಎನ್ನುವುದು ನನಗೆ ಗೊತ್ತಿದೆ. ಕಸ್ಟಡಿಯಲ್ಲಿ ನನಗೆ ಹಲ್ಲೆ ನಡೆಯಬಹುದು.

ಕಪ್ಪುಹಣವನ್ನು ನೀವು ಯಾರಿಗಾದರೂ ನೀಡುವಾಗ ಯಾವುದೇ ದಾಖಲೆಗಳಿರುವುದಿಲ್ಲ. ಯಾವುದೇ ರಶೀದಿಗಳಿರುವುದಿಲ್ಲ. ಆದರೆ ಇದು ಜನರ ಹಣವಾಗಿರುವುದರಿಂದ ಅದನ್ನು ಅವರಿಗೆ ಮರಳಿಸಬೇಕಾಗಿದೆ. ನಮ್ಮ ಬಳಿ 500 ಕೋಟಿ ರೂ. ಆಸ್ತಿಯಿದೆ. ನಮ್ಮ ಬಳಿ ನಾನು  ಬರುವಾಗ 120 ಕೆಜಿ ಆಭರಣಗಳಿತ್ತು. ಶುಕ್ರವಾರ ರಾತ್ರಿ ಅಲ್ಲಿಂದ ಕೆಲ ವಸ್ತುಗಳನ್ನು ತೆಗೆಯಲಾಗಿದೆ ಎನ್ನುವ ಮಾಹಿತಿ ನನಗೆ ಲಭಿಸಿದೆ.

 ನಾನು ಬರುತ್ತೇನೆ.  ನಾನು ಯಾರನ್ನು ಭೇಟಿಯಾಗಬೇಕು ಎಂದು ಅಲೋಕ್ ಕುಮಾರ್ ಸರ್ ನನಗೆ ತಿಳಿಸಿ.  ನಾನು ಟಿಕೆಟ್ ಬುಕ್ ಮಾಡಿ ಭಾರತಕ್ಕೆ ಬರುತ್ತೇನೆ.  ಎಲ್ಲಾ ವಿವರಗಳೊಂದಿಗೆ ನಾನು ಬರುತ್ತೇನೆ. 400 ಕೋಟಿ ರೂ. ಎಂದರೆ ತಮಾಷೆಯೇ ಎಂದು ಯಾರಾದರೂ ಕೇಳಿದರೆ ಅದು ಇಲ್ಲ ಎಂದರ್ಥವಲ್ಲ.  ನಾನು ಸಿಬಿಐ ತನಿಖೆಗೆ ಒತ್ತಾಯಿಸುತ್ತಿದ್ದೇನೆ. ನನ್ನ ಕುಟುಂಬ ಎಲ್ಲಿದೆ ಎನ್ನುವುದು ನನಗೆ ಗೊತ್ತಿಲ್ಲ. ನನ್ನ ಕುಟುಂಬದಲ್ಲಿ ವೃದ್ಧರಿದ್ದಾರೆ, ಮಕ್ಕಳಿದ್ದಾರೆ. ಅವರೆಲ್ಲರೂ ಅಮಾಯಕರು. ನೀವು ಬನ್ನಿ, ನಿಮ್ಮ ಜೊತೆ ನಾವಿದ್ದೇವೆ ಎಂದು ಝಮೀರ್ ಅಹ್ಮದ್ ಅವರು ವಿಡಿಯೋವೊಂದರಲ್ಲಿ ಹೇಳುವುದನ್ನು ನಾನು ನೋಡಿದ್ದೇನೆ. ಆದರೆ ಅವರು ನನಗೆ ಸಹಾಯ ಮಾಡಲು ಸಾಧ್ಯವಿಲ್ಲ. ಅದು ನನಗೆ ಗೊತ್ತಿದೆ. ನನ್ನಲ್ಲಿ ಹೆಸರುಗಳ ಪಟ್ಟಿಯಿದೆ. ಅವರ ಬಳಿ ನಿಮ್ಮ (ಜನರ) ಹಣವಿದೆ. ಅವರ ವಿರುದ್ಧ ಹೋರಾಟ ನಡೆಸಿ ನಿಮ್ಮ ಹಣ ಪಡೆದುಕೊಳ್ಳಿ. ಅವರ ಜನರು ನನ್ನನ್ನು ಇಲ್ಲೂ ಹುಡುಕುತ್ತಿದ್ದಾರೆ. ನನ್ನನ್ನು ಮುಗಿಸುತ್ತಾರೆ.

ಅವರು ನನ್ನನ್ನು ಮುಗಿಸುವ ಮೊದಲು ನಾನು ಎಲ್ಲಾ ದಾಖಲೆಗಳನ್ನು ನ್ಯಾಯಾಂಗದ ಮುಂದಿಡುತ್ತೇನೆ. ಆ ಹಣ ಹೇಗೆ ನೀವು ವಾಪಸ್ ಪಡೆಯುತ್ತೀರಿ ಎಂದು ನನಗೆ ಗೊತ್ತಿಲ್ಲ. ನಾನು ಆ ಹೆಸರುಗಳನ್ನು ಬಿಡುಗಡೆಗೊಳಿಸಿದರೆ  ಎಲ್ಲಾ ಮಾಧ್ಯಮಗಳು ಐಎಂಎಯ ಕಥೆ ಮುಗಿಸುತ್ತದೆ ಎನ್ನುವುದನ್ನು ನಾನು ಹೇಳಲು ಬಯಸುತ್ತೇನೆ”

ಮನ್ಸೂರ್ ಖಾನ್ ಮಾತನಾಡಿದ ವಿಡಿಯೋ ಈ ಕೆಳಗಿದೆ…

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News