ಸಿಆರ್‌ಕೆ ಕೃತಿಗಳಲ್ಲಿ ನಾವು ಎಂಬ ಆಯಾಮ: ನಾಡೋಜ ಎಂ.ಎಚ್.ಕೃಷ್ಣಯ್ಯ

Update: 2019-06-23 13:48 GMT

ಬೆಂಗಳೂರು, ಜೂ.23: ಸಿ.ಆರ್.ಕೃಷ್ಣರಾವ್ ಕೃತಿಗಳನ್ನು ಓದುತ್ತಾ ಹೋದರೆ ನಾವು ಎಂಬ ದೃಷ್ಠಿಕೋನ ಚಿಗುರೊಡೆಯುತ್ತದೆ ಎಂದು ಹಿರಿಯ ಸಾಹಿತಿ ಹಾಗೂ ನಾಡೋಜ ಪುರಸ್ಕೃತ ಎಂ.ಎಚ್. ಕೃಷ್ಣಯ್ಯ ಇಂದಿಲ್ಲಿ ಅಭಿಪ್ರಾಯಪಟ್ಟಿದ್ದಾರೆ.

ರವಿವಾರ ನಗರದ ಗಾಂಧಿ ಭವನದಲ್ಲಿ ಎಂ.ಎಸ್.ಕೃಷ್ಣನ್ ಸ್ಮರಣ ಸಂಸ್ಥೆ ಮತ್ತು ನವ ಕರ್ನಾಟಕ ಪ್ರಕಾಶನ ಆಯೋಜಿಸಿದ್ದ ಸಿ.ಆರ್.ಕೃಷ್ಣರಾವ್‌ಗೆ ಅಭಿನಂದನೆ ಹಾಗೂ ಬದುಕಿನ ತಿರುವುಗಳ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಿಆರ್‌ಕೆ ಕೃತಿಗಳಲ್ಲಿ ನಾವು ಎಂಬ ಸಮಗ್ರ ದೃಷ್ಠಿಕೋನವನ್ನು ಕೃತಿಯುದ್ದಕ್ಕೂ ಕಟ್ಟಿಕೊಟ್ಟಿರುವುದನ್ನು ಕಾಣಬಹುದಾಗಿದೆ ಎಂದರು.

ಸಿಆರ್‌ಕೆ ಬದುಕಿನ ತಿರುವುಗಳು ಹಲವು ಸಂಪೂರ್ಣ ಅಪರಿಚಿತ ರೂಪಿಕೆಗಳನ್ನು ಪರಿಚಯಿಸುತ್ತದೆ. ಬದುಕಿನ ತಿರುವುಗಳು ಗ್ರಂಥವು ತಿರುವೇ ಹೊರತು ಸುಳಿಯಲ್ಲ. ಸುಳಿ ಒಳಕ್ಕೆ ಸೆಳೆಯುತ್ತದೆ. ಆದರೆ ತಿರುವು ಬರಬೇಕಾದರೆ ಸುಳಿಯನ್ನು ದಾಟಿ ಬರಬೇಕು ಎಂದು ಹೇಳಿದರು.

ಇದು ದಿನಚರಿಯಲ್ಲ, ಆತ್ಮಕಥೆಯಲ್ಲ, ಕಾದಂಬರಿಯಲ್ಲ. ಇದೊಂದು ಅನುಭವ ಕಥನ. ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿರುವಾಗ ಆದ ಅನುಭವಗಳನ್ನು ಈ ಕೃತಿಯ ಮೂಲಕ ಹಂಚಿಕೊಂಡಿದ್ದಾರೆ. ಅವರು ಬೆಂಗಳೂರಿಗೆ ಬಂದ ನಂತರ ಅನೇಕ ಕೃತಿಗಳನ್ನು ಹೊರತಂದರು. ವಿಜ್ಞಾನ, ತಂತ್ರಜ್ಞಾನ ನಿಘಂಟು ಕ್ಷೇತ್ರಕ್ಕೆ ಸಂಬಂಧಿಸಿದ ಅನೇಕ ಸಂಪಾದಿಸಿದ ಕೃತಿಗಳನ್ನು ಹೊರತಂದು ಸಾಹಿತ್ಯ ಕ್ಷೇತ್ರಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ ಎಂದು ತಿಳಿಸಿದರು. ಪತ್ರಕರ್ತರಾಗಿ, ಕಮ್ಯುನಿಸ್ಟ್ ಕಾರ್ಯಕರ್ತರಾಗಿ, ನವ ಕರ್ನಾಟಕ ಪ್ರಕಾಶನದ ಹಿರಿಯ ಸಂಪಾದಕರಾಗಿ ಹೀಗೆ ಅನೇಕ ಕ್ಷೇತ್ರಗಳಲ್ಲಿ ತನ್ನನ್ನು ತೊಡಗಿಸಿಕೊಂಡಿದ್ದಾರೆ ಎಂದು ಹೇಳಿದರು.

ಹಿರಿಯ ಪತ್ರಕರ್ತೆ ಡಾ.ವಿಜಯಾ ಮಾತನಾಡಿ, ಸಿ.ಆರ್.ಕೆ ಸರಳ ಜೀವಿ. ಯಾವುದೇ ವಿಷಯವಾದರೂ ಸಮರ್ಥವಾಗಿ ಬರೆಯುವಂತವರು. ಯಾವುದೇ ಸಮಯದಲ್ಲೂ ಧೃತಿಗೆಡದೆ ಅನೇಕ ಯುವ ಜನಾಂಗಕ್ಕೆ ಮಾರ್ಗದರ್ಶಕರಾದವರು. ಯಾವುದೇ ಪತ್ರಿಕೆಗಳಿಗೆ ಜಾಹೀರಾತು ಮುಖ್ಯ. ಆದರೆ, ಸಿಆರ್‌ಕೆ ಮೇನಕಾ ಪತ್ರಿಕೆಯ ಸಂಪಾದಕರಾಗಿದ್ದಾಗ ಯಾವುದೇ ಜಾಹೀರಾತುಗಳಿಲ್ಲದ ಸಂದರ್ಭದಲ್ಲೂ ಆರ್ಥಿಕ ಸಂಕಷ್ಟವನ್ನು ಸರಿದೂಗಿಸಿಕೊಂಡು ಸಾಗಿದ್ದಾರೆ ಎಂದು ಹೇಳಿದರು.

ಕನ್ನಡ ಸಿನಿಮಾ ರಂಗದಲ್ಲೂ ಅವರು ತನ್ನನ್ನು ತೊಡಗಿಸಿಕೊಂಡಿದ್ದಾರೆ. ಮೊದಲು ತಮಿಳುನಾಡಿನ ಸೆನ್ಸಾರ್ ಬೋರ್ಡ್‌ನಲ್ಲಿ ಇದ್ದರು. ಈಗ ಇದು ಕರ್ನಾಟಕದಲ್ಲೂ ಜಾರಿಯಾಗಲು ಸಿಆರ್‌ಕೆ ಪಾತ್ರ ಮುಖ್ಯವಾದುದು. 70 ದಶಕದಲ್ಲಿ ಅನೇಕ ಚಳವಳಿಗಳು ಹುಟ್ಟಿಕೊಂಡವು. ಇಂತಹ ಚಳವಳಿಗೆ ಧುಮುಕಿದ ಅನೇಕ ಯುವ ಜನರಿಗೆ ವಿಚಾರಗಳ ಬಗ್ಗೆ ಹಸಿವು ನೀಗಿಸಿದ್ದಾರೆ ಎಂದು ಹೇಳಿದರು.

ಜಿ.ರಾಮಕೃಷ್ಣ ಮಾತನಾಡಿ, ಸಮಾಜದಲ್ಲಿ ಸಾರ್ವಜನಿಕ ಸಂಪತ್ತು ಎಗ್ಗಿಲ್ಲದೆ ಲೂಟಿಯಾಗುತ್ತಿದೆ. ಆದರೆ ಇದರ ಬಗ್ಗೆ ಯಾರೂ ಮಾತನಾಡುತ್ತಿಲ್ಲ. ಜೊತೆಗೆ ಪತ್ರಿಕೆಗಳು ಸಹ ವಿಮರ್ಶಾತ್ಮಕ ಪ್ರತಿಕ್ರಿಯೆಗಳನ್ನು ನೀಡುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಸಿಆರ್‌ಕೆ ಅವರ ತೀರ್ಮಾನಗಳು, ಸೈದ್ಧಾಂತಿಕ ವಿಚಾರಗಳು ಅನೇಕ ಸ್ನೇಹಿತರ ಒಡನಾಟ ಸೃಷ್ಟಿಸಿದೆ. ಇವರು ಸ್ವಲ್ಪ ಸಂಕೋಚ ಮನೋಭಾವದವರಾದರೂ ಬರವಣಿಗೆಯಲ್ಲಿ ಯಾವುದೇ ಸಂಕೋಚ ಇಲ್ಲ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಟಿ.ಆರ್.ಅನಂತರಾಮು, ಸಿದ್ದನಗೌಡ ಪಾಟೀಲ, ವಸುಂಧರಾ ಭೂಪತಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News