ಜೈನ ಸಮುದಾಯದ ಅಭಿವೃದ್ಧಿಗೆ ಕೈ ಜೋಡಿಸಬೇಕು: ಡಾ.ಕಮಲಾ ಹಂಪನಾ

Update: 2019-06-23 13:51 GMT

ಬೆಂಗಳೂರು, ಜೂ.23: ಜೈನ ಸಮುದಾಯ ಸಾಮಾಜಿಕವಾಗಿ ಹಿಂದುಳಿದಿದ್ದು, ಇದರ ಅಭಿವೃದ್ಧಿಗೆ ಪ್ರತಿಯೊಬ್ಬರು ಕೈ ಜೋಡಿಸಬೇಕು ಎಂದು ಹಿರಿಯ ಸಾಹಿತಿ ನಾಡೋಜ ಡಾ.ಕಮಲಾ ಹಂಪನಾ ನುಡಿದರು.

ರವಿವಾರ ನಗರದ ಬಸವನಗುಡಿಯ ಬಿ.ಪಿ.ವಾಡಿಯಾ ಸಭಾಂಗಣದಲ್ಲಿ ಸಾಲಿ ಗ್ರಾಮ ಜೈನ ಮಿತ್ರ ಮಂಡಲಿ ವತಿಯಿಂದ ಆಯೋಜಿಸಿದ್ದ, ‘ಬಂಧು ವರ್ಮನ ಜೀವನ ಸಂಬೋಧನೆ’ ಕೃತಿ ಕುರಿತು ವಿಚಾರ ಸಂಕಿರಣ ಹಾಗೂ 18ನೇ ವಾರ್ಷಿಕೋತ್ಸವದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಅವರು ಮಾತನಾಡಿದರು.

ಜೈನ ಸಮುದಾಯ ಸಾಮಾಜಿಕವಾಗಿ ಹಿಂದುಳಿದಿದೆ. ಈ ಬಗ್ಗೆ ಹಲವು ಜನರು ಪ್ರಸ್ತಾಪಿಸಿದ್ದಾರೆ. ಆದರೆ, ಸಾಮಾಜಿಕ ಅಭಿವೃದ್ಧಿಗೆ ಬೇಕಾದ ಅಂಶಗಳ ಕುರಿತು ನಾವು ಚರ್ಚಿಸಿ, ಸೂಕ್ತ ಕ್ರಮ ಕೈಗೊಂಡಾಗ ಮಾತ್ರ ಒಂದು ಪರಿಹಾರ ದೊರೆಯಲು ಸಾಧ್ಯ. ಜೊತೆಗೆ, ಸರಕಾರಗಳ ಸೌಲಭ್ಯಗಳನ್ನು ಪಡೆಯಲು ಸಾಧ್ಯ ಎಂದರು.

ಕರ್ನಾಟಕ ರಾಜ್ಯ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಪದ್ಮರಾಜ ದಂಡಾವತಿ ಮಾತನಾಡಿ, ಜೈನ ಸಮುದಾಯವನ್ನು ಮುಂದು ತೆಗೆದುಕೊಂಡು ಹೋಗುವುದರ ಜೊತೆಗೆ ಒಟ್ಟು ಸಮಾಜವನ್ನು ಮುನ್ನಡೆಸುವ ಕಾರ್ಯ ಆಗಬೇಕಿದೆ ಎಂದು ನುಡಿದರು.

ಲೇಖಕ ಬಾಳಾ ಸಾಹೇಬ ಲೋಕಾಪುರ ಮಾತನಾಡಿ, ಜೈನ ಸಾಹಿತ್ಯದಲ್ಲಿ ಹಲವು ವಿಚಾರಗಳಿವೆ.ಅದನ್ನು ಪ್ರಚಾರ ಪಡಿಸುವ ಅಗತ್ಯತೆ ಇದೆ. ಆದರೆ, ಇಂದಿನ ಕಾಲಘಟ್ಟದಲ್ಲಿ ಜೈನ ಸಾಹಿತ್ಯಕ್ಕೆ ಹೆಚ್ಚಿನ ಪ್ರೋತ್ಸಾಹ ದೊರೆಯುತ್ತಿಲ್ಲ. ಈ ಬಗ್ಗೆ ಅಳವಾದ ಅಧ್ಯಯನ ನಡೆಯಬೇಕು ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News