ದೇಶದ ಭವಿಷ್ಯ ಗಮನದಲ್ಲಿಟ್ಟು ಕರಡು ಶಿಕ್ಷಣ ನೀತಿ ರೂಪಿಸಲಾಗಿದೆ: ಎಂ.ಕೆ.ಶ್ರೀಧರ್

Update: 2019-06-23 14:55 GMT

ಬೆಂಗಳೂರು, ಜೂ.23: ದೇಶದ ಭವಿಷ್ಯವನ್ನು ಗಮನದಲ್ಲಿಟ್ಟುಕೊಂಡು ಕರಡು ಶಿಕ್ಷಣ ನೀತಿಯನ್ನು ರೂಪಿಸಲಾಗಿದೆ. ಇದೇ ಮೊದಲ ಬಾರಿಗೆ 3ನೆ ವಯಸ್ಸಿನಿಂದ ಪ್ರಾರಂಭವಾಗುವ ಬಾಲ್ಯದ ಶಿಕ್ಷಣವನ್ನು ಸೇರಿಸಿ ನೀತಿ ರೂಪಿಸಲಾಗಿದೆ ಎಂದು ಕರಡು ರಾಷ್ಟ್ರೀಯ ಶಿಕ್ಷಣ ನೀತಿಯ ಸಮಿತಿಯ ಮಾಜಿ ಸದಸ್ಯ ಪ್ರೊ.ಎಂ.ಕೆ.ಶ್ರೀಧರ್ ಹೇಳಿದರು.

ರವಿವಾರ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನ ಕೇಂದ್ರವು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ್ದ ಕರಡು ರಾಷ್ಟ್ರೀಯ ಶಿಕ್ಷಣ ನೀತಿಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಕರಡು ಶಿಕ್ಷಣ ನೀತಿಯಲ್ಲಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಸ್ವಾಯತ್ತವನ್ನಾಗಿ ಮಾಡುವುದು. ಹಾಗೂ 2030ರ ವೇಳೆಗೆ ಪದವಿ ನೀಡುವ ಸಾಮಾರ್ಥ್ಯವನ್ನು ಸಾಧಿಸುವ ಹಂತವನ್ನು ತಲುಪಬೇಕು ಎನ್ನುವ ದೃಷ್ಟಿಕೋನವನ್ನು ಹೊಂದಿದೆ ಎಂದು ತಿಳಿಸಿದರು.

ಕರಡು ಶಿಕ್ಷಣ ನೀತಿಯು ಶಿಕ್ಷಣ ವ್ಯವಸ್ಥೆಯ ಪರಿಪೂರ್ಣತೆಯ ಕಡೆಗೆ ಸಾಗುವಂತೆ ರೂಪಿಸಲಾಗಿದೆ. ಇದರಲ್ಲಿ ಬಹುಮುಖ್ಯವಾಗಿ ಶಿಕ್ಷಣ ವ್ಯಾಪಾರೀಕರಣವನ್ನು ನಿಯಂತ್ರಿಸುವತ್ತ ಗಮನ ಹರಿಸಲಾಗಿದೆ. ದೇಶದಲ್ಲಿರುವ ಸಂಪನ್ಮೂಲಗಳನ್ನು ಸದ್ಬಳಕೆ ಮಾಡಿಕೊಳ್ಳುವಲ್ಲಿ ವಿಶೇಷ ಕಾಳಜಿಯನ್ನು ವಹಿಸಲಾಗಿದೆ ಎಂದು ಅವರು ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ವೇಣುಗೋಪಾಲ್ ಮಾತನಾಡಿ, ಕರಡು ಶಿಕ್ಷಣ ನೀತಿ ಜಾರಿಯಿಂದ ಶಿಕ್ಷಣ ಸಂಸ್ಥಯಲ್ಲಿ ಪ್ರವೇಶ ಪಡೆಯುವ ಪ್ರತಿಯೊಬ್ಬರಿಗೂ ಸಂಬಂಧಿಸಿದ ಪ್ರಮಾಣಪತ್ರವನ್ನು ನೀಡಲಾಗುತ್ತದೆ. ಮತ್ತು ಶ್ರೇಣೀಕರಣಕ್ಕೆ ಅವಕಾಶವಿರುವುದರಿಂದ ಶಿಕ್ಷಣ ವ್ಯವಸ್ಥೆಯಲ್ಲಿ ಸಮಗ್ರ ಬದಲಾವಣೆಯಾಗಲಿದೆ ಎಂದು ತಿಳಿಸಿದರು.

ಉನ್ನತ ಶಿಕ್ಷಣ ವ್ಯವಸ್ಥೆಯಲ್ಲಿ ಸೌಲಭ್ಯಗಳ ಕೊರತೆ ಇದೆ. ರಾಜ್ಯದಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಹೊಂದಿರುವ ವಿಶೇಷ ಕೇಂದ್ರಗಳು ಇರಬೇಕು. ಶಿಕ್ಷಣವು ಕೌಶಲ್ಯ ಮತ್ತು ಜ್ಞಾನ ಆಧಾರಿತವಾಗಿರಬೇಕು ಎಂದು ಅವರು ಅಭಿಪ್ರಾಯಿಸಿದರು. ಈ ವೇಳೆ ಶೈಕ್ಷಣಿಕ ಮತ್ತು ಸಾಮಾಜಿಕ ಅಧ್ಯಯನಗಳ ಕೇಂದ್ರದ ನಿರ್ದೇಶಕಿ ಪ್ರೊ.ಮಾನಸಾ ನಾಗಭೂಷಣ್, ಕುಲಸಚಿವ ಪ್ರೊ.ಬಿ.ಕೆ.ರವಿ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News