ಆರೋಗ್ಯ ಸಮಸ್ಯೆ: ಲಕ್ನೋ ಮೆಟ್ರೋ ಸಲಹೆಗಾರ ಹುದ್ದೆಯನ್ನು ತ್ಯಜಿಸಿದ ಇ.ಶ್ರೀಧರನ್

Update: 2019-06-24 13:58 GMT

ಲಕ್ನೋ, ಜೂ.24: ಮೆಟ್ರೋ ಮಾನವ ಎಂದೇ ಜನಜನಿತವಾಗಿರುವ ಇ. ಶ್ರೀಧರನ್ ಆರೋಗ್ಯ ಸಮಸ್ಯೆಯಿಂದಾಗಿ ಲಕ್ನೋ ಮೆಟ್ರೋ ಸಲಹೆಗಾರ ಹುದ್ದೆಯನ್ನು ತ್ಯಜಿಸಿದ್ದಾರೆ.

ಶ್ರೀಧರನ್ ಅವರು ಲಕ್ನೋ ಮೆಟ್ರೋದ ಉತ್ತರ-ದಕ್ಷಿಣ ಕಾರಿಡಾರ್ ನಿರ್ಮಾಣ ಕಾಮಗಾರಿಯನ್ನು ನೋಡಿಕೊಳ್ಳುತ್ತಿದ್ದರು ಎಂದು ಲಕ್ನೋ ಮೆಟ್ರೊ ನಿರ್ದೇಶಕ ಕುಮಾರ್ ಕೇಶವ್ ತಿಳಿಸಿದ್ದಾರೆ. ಭೂಗತ ವಿಭಾಗದ ನಿರ್ಮಾಣ ಕಾರ್ಯದಲ್ಲಿ ಅವರ ಸಲಹೆ ಅತ್ಯಂತ ಮಹತ್ವಪೂರ್ಣವಾಗಿತ್ತು. ಅವರು ರಾಜೀನಾಮೆ ನೀಡದಂತೆ ನಾನು ಮನವಿ ಮಾಡಿಕೊಂಡರೂ ಅವರ ಆರೋಗ್ಯ ಹದಗೆಟ್ಟ ಪರಿಣಾಮ ಅವರು ರಾಜೀನಾಮೆ ನೀಡುತ್ತಿರುವುದಾಗಿ ತಿಳಿಸಿದರು ಎಂದು ಕೇಶವ್ ತಿಳಿಸಿದ್ದಾರೆ.

 ಶ್ರೀಧರನ್ ಜೊತೆಗೆ ಲಕ್ನೋ ಮೆಟ್ರೋ ರೈಲು ನಿಗಮದ ಇನ್ನೂ ಕೆಲವು ಹಿರಿಯ ಅಧಿಕಾರಿಗಳು ರಾಜೀನಾಮೆ ನೀಡಲು ನಿರ್ಧರಿಸಿದ್ದಾರೆ ಎಂದು ಪತ್ರಿಕೆಗಳು ವರದಿ ಮಾಡಿವೆ. ಶ್ರೀಧರನ್ ಅವರ ರಾಜೀನಾಮೆ ಪತ್ರವನ್ನು ಅಂಗೀಕಾರಕ್ಕಾಗಿ ರಾಜ್ಯ ಸರಕಾರಕ್ಕೆ ಕಳುಹಿಸಲಾಗಿದೆ. ದೇಶಾದ್ಯಂತ ಅನೇಕ ಬೃಹತ್ ಮೆಟ್ರೋ ಯೋಜನೆಗಳನ್ನು ನಿಬಾಯಿಸಿರುವ ಶ್ರೀಧರನ್ ಅವರನ್ನು ಮೆಟ್ರೊ ಮಾನವ ಎಂದೇ ಕರೆಯಲಾಗುತ್ತಿತ್ತು. ಅವರನ್ನು 2014ರಲ್ಲಿ ಲಕ್ನೋ ಮೆಟ್ರೋ ರೈಲು ನಿಗಮದ ಮುಖ್ಯ ಸಲಹೆಗಾರರಾಗಿ ನೇಮಕ ಮಾಡಲಾಗಿತ್ತು. ಮೆಟ್ರೋಗಳಲ್ಲಿ ಮಹಿಳೆಯರಿಗೆ ಉಚಿತ ಪ್ರಯಾಣದ ದಿಲ್ಲಿ ಸರಕಾರದ ಪ್ರಸ್ತಾವವನ್ನು ವಿರೋಧಿಸಿದ ಕಾರಣಕ್ಕೆ ಶ್ರೀಧರನ್ ಟೀಕೆಗಳನ್ನು ಎದುರಿಸಿದ್ದರು. ಈ ಕುರಿತು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯ ಅವರಿಗೆ ಪತ್ರ ಬರೆದಿದ್ದ ಶ್ರೀಧರನ್, ಈ ಪ್ರಸ್ತಾವ ಚುನಾವಣಾ ಗಿಮಿಕ್ ಆಗಿದೆ ಎಂದು ಆರೋಪಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News