ಭೂಮಿ ನೀಡದಿದ್ದರೆ ರಾಜ್ಯಕ್ಕೆ ಹೂಡಿಕೆದಾರರು ಬರುವುದಿಲ್ಲ: ಸಿಎಂ ಕುಮಾರಸ್ವಾಮಿ

Update: 2019-06-24 16:57 GMT

ಬೆಂಗಳೂರು, ಜೂ.24: ಜಿಂದಾಲ್ ಕಂಪನಿಗೆ ಒಪ್ಪಂದದ ಪ್ರಕಾರ ಭೂಮಿ ನೀಡಲಾಗುತ್ತಿದೆ. ಇದೀಗ ಭೂಮಿ ಕೊಡದಿದ್ದರೆ ಮುಂದಿನ ದಿನಗಳಲ್ಲಿ ರಾಜ್ಯಕ್ಕೆ ಹೂಡಿಕೆದಾರರು ಬರುವುದಿಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಸಮರ್ಥಿಸಿಕೊಂಡಿದ್ದಾರೆ.

ಸೋಮವಾರ ನಗರದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕೆ ಮಹಾಸಂಸ್ಥೆ ಏರ್ಪಡಿಸಿದ್ದ ವಾಣಿಜ್ಯ ಸ್ಪಂದನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಜಿಂದಾಲ್ ಕಂಪನಿಗೆ ಹಿಂದಿನ ಒಪ್ಪಂದದಂತೆ ಭೂಮಿ ಕೊಡದಿದ್ದರೆ ರಾಜ್ಯದಲ್ಲಿ ಬಂಡವಾಳ ಹೂಡುವವರಿಗೆ ಯಾವ ಸಂದೇಶ ನೀಡಿದಂತಾಗುತ್ತದೆ. ಹಿಂದಿನ ಸರಕಾರ ಲೀಸ್ ಕಂ ಸೇಲ್ ಒಪ್ಪಂದ ಮಾಡಿಕೊಂಡಿದ್ದು, ಅದರಂತೆ ಭೂಮಿ ನೀಡಲಾಗುತ್ತಿದೆ ಎಂದು ಹೇಳಿದರು.

ಹಿಂದಿನ ಸರಕಾರದ ಅವಧಿಯಲ್ಲಿ ಜಿಂದಾಲ್ ಜತೆ ಒಪ್ಪಂದ ಮಾಡಿಕೊಂಡಿದ್ದ ಸಂದರ್ಭದಲ್ಲಿ ಭೂಮಿ ಬೆಲೆ ಕಡಿಮೆಯಿತ್ತು. ಅವತ್ತು ಭೋಗ್ಯ ಹಾಗೂ ಮಾರಾಟಕ್ಕೆ ಒಪ್ಪಂದ ಮಾಡಿಕೊಂಡಿದ್ದೆವು. ಇದೀಗ ಅದರ ಭೋಗ್ಯದ ಅವಧಿ ಮುಗಿದಿದ್ದರಿಂದ ಮಾರಾಟ ಮಾಡಲೇಬೇಕಿದೆ. ಮಾಜಿ ಸಿಎಂ ಯಡಿಯೂರಪ್ಪ ಉಪ ಮುಖ್ಯಮಂತ್ರಿಯಾಗಿದ್ದ ವೇಳೆ ಮಾಡಿಕೊಂಡಿದ್ದ ಒಪ್ಪಂದ ಇದಾಗಿದೆ. ಇದೀಗ ಅವರೇ ಉತ್ತರಿಸಬೇಕು ಎಂದು ತಿಳಿಸಿದರು.

ನಾನು ಕಿಕ್‌ಬ್ಯಾಕ್ ಪಡೆದಿದ್ದೇನೆ ಎಂಬ ಅಸಂಬದ್ಧ ಹೇಳಿಕೆ ನೀಡುವುದು ಸರಿಯಲ್ಲ. ಜಿಂದಾಲ್‌ಗೆ ಭೂಮಿ ನೀಡುವ ಸಂಬಂಧ ಉಪ ಸಮಿತಿ ಮಾಡಲು ತಿಳಿಸಿದ್ದು, ಅದರಲ್ಲಿ ಎಚ್.ಕೆ.ಪಾಟೀಲ್ ಮತ್ತು ಯಡಿಯೂರಪ್ಪ ಅವರನ್ನು ಸೇರಿಸಲು ತಿಳಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕೇಂದ್ರದ ಜೊತೆ ಉತ್ತಮ ಸಂಬಂಧ: ಕೇಂದ್ರ ಸರಕಾರದ ಜೊತೆ ಸಂಘರ್ಷಕ್ಕೆ ಹೋಗಿಲ್ಲ. ಒಮ್ಮೆ ಹೊಸದಿಲ್ಲಿಗೆ ಹೋದರೆ, 5-6 ಕೇಂದ್ರ ಸಚಿವರನ್ನು ಭೇಟಿ ಮಾಡಿ ರಾಜ್ಯದ ಸಮಸ್ಯೆಗಳನ್ನು ಪರಿಹರಿಸುವ ಕೆಲಸ ಮಾಡುತ್ತಿದ್ದೇನೆ. ಇತ್ತೀಚಿಗೆ ನೀತಿ ಆಯೋಗ ಸಭೆಯಲ್ಲಿ ಭಾಗಿಯಾದಾಗ ಪ್ರಧಾನಿ ನರೇಂದ್ರ ಮೋದಿ ಅವರು, ರಾಜ್ಯ ಸರಕಾರಗಳು ತಮ್ಮ ಗ್ರಾಮ ಪಂಚಾಯತ್ ಗಳಲ್ಲಿ ಜಿಡಿಪಿ ಬೆಳವಣಿಗೆಗೆ ಶ್ರಮಿಸಬೇಕು ಎಂದರೇ ಹೊರತು ತಮ್ಮ ಪಾತ್ರದ ಬಗ್ಗೆ ಸ್ಪಷ್ಟಪಡಿಸಲಿಲ್ಲ ಎಂದು ಆರೋಪಿಸಿದರು.

ಇಂಗ್ಲಿಷ್ ಕಲಿಕೆಗೆ ಒತ್ತು: ಇವತ್ತಿನ ದಿನಗಳಲ್ಲಿ ಇಂಗ್ಲಿಷ್ ಇಲ್ಲವೆಂದರೆ ಬದುಕೇ ಇಲ್ಲ. ಕನ್ನಡ ಮಾಧ್ಯಮ ವಿದ್ಯಾರ್ಥಿಗೆ ಬಹಳ ಚೆನ್ನಾಗಿ ವಿಷಯ ಗೊತ್ತಿರುತ್ತದೆ. ಆದರೆ, ಅದನ್ನು ಪ್ರಸ್ತತಪಡಿಸಲು ತೊಂದರೆ ಆಗುತ್ತಿದೆ. ಇದನ್ನು ಸರಿಪಡಿಸಲು ರಾಜ್ಯದಲ್ಲಿ ಪ್ರಾಥಮಿಕವಾಗಿ 1 ಸಾವಿರ ಇಂಗ್ಲಿಷ್ ಶಾಲೆಗಳನ್ನು ಆರಂಭಿಸಲಾಗಿದೆ. ಕನ್ನಡ ಉಳಿವಿನ ಜೊತೆ ಇಂಗ್ಲಿಷ್‌ಗೆ ಒತ್ತು ನೀಡಲಾಗುವುದು ಎಂದರು.

ವಿಧಾನ ಪರಿಷತ್ ಸದಸ್ಯ ಕೆ.ಸಿ.ಕೊಂಡಯ್ಯ ಮಾತನಾಡಿ, ಜಿಂದಾಲ್‌ಗೆ ಭೂಮಿ ನೀಡುವ ಸಂಬಂಧ ಸೃಷ್ಟಿಯಾದ ಸಮಸ್ಯೆಯನ್ನು ಮೈತ್ರಿ ಸರಕಾರವೇ ಬಗೆಹರಿಸಲಿ. ಮುಖ್ಯಮಂತ್ರಿ 3 ತಿಂಗಳಿಗೊಮ್ಮೆಯಾದರೂ, ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆಗಳ ಸದಸ್ಯರನ್ನು ಕರೆದು ಚರ್ಚಿಸಬೇಕು. ಬಂಡವಾಳ ಹೂಡಿಕೆದಾರರು, ಸಣ್ಣ ಕೈಗಾರಿಕೆದಾರರಿಗೆ ಉತ್ತೇಜನ ನೀಡಬೇಕು ಎಂದು ನುಡಿದರು.

ನಾನು ಹಿಂದಿನ ಸರಕಾರದ ಅವಧಿಯಲ್ಲಿ ಗ್ರಾಮ ವಾಸ್ತವ್ಯ ಮಾಡಿದ್ದೆ. ಈಗ ಅದನ್ನು ಮುಂದುವರಿಸಿದ್ದೇನೆ. ಆಗ ವಿರೋಧ ಮಾಡದವರು ಇಂದು ವಿರೋಧ ಮಾಡುತ್ತಿದ್ದಾರೆ. ಯಾದಗಿರಿಯ ಶಾಲೆಯಲ್ಲಿ ಶೌಚಾಲಯ ನಿರ್ಮಿಸಿರುವುದನ್ನೇ ದೊಡ್ಡ ತಪ್ಪೆಂದು ಬಿಂಬಿಸಿದ್ದಾರೆ. ಗ್ರಾಮ ವಾಸ್ತವ್ಯ ಮುಗಿದ ನಂತರ ಅಲ್ಲಿನ ಶಾಲಾ ಮಕ್ಕಳಿಗೆ ಶೌಚಾಲಯ ಉಪಯೋಗವಾಗಿದೆ. ಟೀಕಿಸುವ ವಿರೋಧ ಪಕ್ಷದ ನಾಯಕರು ಗ್ರಾಮ ವಾಸ್ತವ್ಯ ಮಾಡಲಿ.

-ಎಚ್.ಡಿ.ಕುಮಾರಸ್ವಾಮಿ, ಮುಖ್ಯಮಂತ್ರಿ

ರಾಜ್ಯದಲ್ಲಿ ಸತತವಾಗಿ ಬರಗಾಲ ಆವರಿಸಿಕೊಂಡಿದೆ. ರೈತರು ಬೆಳೆಯುತ್ತಿರುವ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೇ ಕಂಗಾಲಾಗಿದ್ದು, ಮಾಡಿದ ಸಾಲ ತೀರಿಸಲಾಗದ ಸ್ಥಿತಿಯಲ್ಲಿದ್ದಾರೆ. ಹೀಗಾಗಿ ಅವರ ಹೊರೆ ಕಡಿಮೆ ಮಾಡಲು ಸಾಲ ಮನ್ನಾ ಮಾಡಲಾಗಿದೆ. ಅಭಿವೃದ್ಧಿಗೆ ಹಿನ್ನಡೆಯಾಗದಂತೆ 2 ಬಜೆಟ್‌ನಲ್ಲಿ 25 ಸಾವಿರ ಕೋಟಿ ರೂ. ಸಾಲಮನ್ನಾಕ್ಕಾಗಿ ಬಿಡುಗಡೆ ಮಾಡಿದ್ದು, ಆರ್ಥಿಕ ಶಿಸ್ತು ಕಾಪಾಡಿಕೊಳ್ಳಲಾಗಿದೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News