ಓಟರ್ ಐಡಿ ಪತ್ತೆ ಪ್ರಕರಣ: ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ಮುಂದೂಡಿಕೆ

Update: 2019-06-24 17:01 GMT

ಬೆಂಗಳೂರು, ಜೂ.24: ಆರ್.ಆರ್.ನಗರ ವಿಧಾನಸಭಾ ಕ್ಷೇತ್ರದ ಓಟರ್ ಐಡಿ ಪತ್ತೆ ಪ್ರಕರಣವನ್ನು ಸಿಬಿಐ ತನಿಖೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಯನ್ನು ಹೈಕೋರ್ಟ್ ಜೂ.26ಕ್ಕೆ ಮುಂದೂಡಿದೆ. ಈ ಕುರಿತು ದೂರುದಾರ ರಾಕೇಶ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ಹೈಕೋರ್ಟ್ ನ್ಯಾಯಪೀಠದಲ್ಲಿ ನಡೆಯಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಓಟರ್ ಐಡಿ ಪತ್ತೆ ಪ್ರಕರಣದ ತನಿಖೆಯನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಲು ವಿಳಂಬವಾಗುತ್ತಿರುವುದರಿಂದ ಸಾಕ್ಷಿಗಳು ನಾಶವಾಗುತ್ತಿವೆ. ಜಾಲಹಳ್ಳಿ ಪೊಲೀಸರೂ ತನಿಖೆಯನ್ನು ಸರಿಯಾಗಿ ನಡೆಸಿಲ್ಲ ಎಂದು ಪೀಠಕ್ಕೆ ವಿವರಿಸಿದರು.

ಓಟರ್ ಐಡಿ ಪತ್ತೆಯಾದ ಜಾಗದಲ್ಲಿ ಸಿಸಿ ಕ್ಯಾಮರಾ ಇತ್ತು. ಆ ಕ್ಯಾಮರಾವನ್ನು ವಶಕ್ಕೆ ಪಡೆಯಲು ಪೊಲೀಸರು ವಿಳಂಬ ನೀತಿ ಅನುಸರಿಸಿದ್ದಾರೆ ಎಂದು ತಿಳಿಸಿದರು. ವಕೀಲರ ವಾದ ಆಲಿಸಿದ ನ್ಯಾಯಪೀಠವು ವಿಚಾರಣೆಯನ್ನು ಜೂ.26ಕ್ಕೆ ಮುಂದೂಡಿತು.

ಕೇಸ್ ವಾಪಸ್ ತೆಗೆದುಕೊಳ್ಳಲು ಬೆದರಿಕೆ: ಓಟರ್ ಐಡಿ ಪತ್ತೆ ಪ್ರಕರಣವನ್ನು ವಾಪಸ್ ಪಡೆದುಕೊಳ್ಳಲು ಬೆದರಿಕೆ ಹಾಕಿದ ವಿಚಾರಕ್ಕೆ ಸಂಬಂಧಿಸಿದಂತೆ ದೂರುದಾರ ರಾಕೇಶ್‌ಗೆ ಪೊಲೀಸ್ ಭದ್ರತೆ ಮುಂದುವರೆಸಲು ಹೈಕೋರ್ಟ್ ನಿರಾಕರಿಸಿದೆ. ಓಟರ್ ಐಡಿ ಪತ್ತೆ ಹಿನ್ನೆಲೆಯಲ್ಲಿ ದಾಖಲಿಸಿರುವ ಪ್ರಕರಣವನ್ನು ವಾಪಸ್ ಪಡೆದುಕೊಳ್ಳುವಂತೆ ರಾಕೇಶ್‌ಗೆ ಸಿಟಿ ಸಿವಿಲ್ ಕೋರ್ಟ್‌ನಲ್ಲಿ ಎಸಿಪಿಯೊಬ್ಬರು ಬೆದರಿಕೆ ಹಾಕಿದ್ದರು. ಹೀಗಾಗಿ, ದೂರುದಾರ ರಾಕೇಶ್‌ಗೆ ಪೊಲೀಸ್ ಭದ್ರತೆ ನೀಡಲು ಹೈಕೋರ್ಟ್ ಆದೇಶಿಸಿತ್ತು. ಸೋಮವಾರ ಭದ್ರತೆಯನ್ನು ಮುಂದುವರಿಸಲು ನ್ಯಾಯಪೀಠವು ನಿರಾಕರಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News