ಶೈಕ್ಷಣಿಕ ಸಾಲ ಮನ್ನಾಗೆ ಇಂಡಿಯನ್ ನ್ಯಾಷನಲ್ ಯೂತ್ ಪಾರ್ಟಿ ಆಗ್ರಹ

Update: 2019-06-24 17:04 GMT

ಬೆಂಗಳೂರು, ಜೂ.24: ಉನ್ನತ ಶಿಕ್ಷಣ ಪಡೆಯಲು ಬಡ ವಿದ್ಯಾರ್ಥಿಗಳಿಗೆ ವಿವಿಧ ಬ್ಯಾಂಕ್‌ಗಳು ನೀಡಿರುವ ಸಾಲವನ್ನು ಕೇಂದ್ರ ಸರಕಾರ ಮನ್ನಾ ಮಾಡಬೇಕು ಎಂದು ಇಂಡಿಯನ್ ನ್ಯಾಷನಲ್ ಯೂತ್ ಪಾರ್ಟಿ ಆಗ್ರಹಿಸಿದೆ.

ನಗರದಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಪಾರ್ಟಿ ಅಧ್ಯಕ್ಷ ಪವನ್ ಕುಮಾರ್, ಕರ್ನಾಟಕದಲ್ಲಿ ಶೇ.70 ಕ್ಕೂ ಅಧಿಕ ಜನರು ಕೃಷಿಯಾಧಾರಿತರಾಗಿದ್ದಾರೆ. ಆದರೆ, ಮಳೆಯ ಕೊರತೆಯಿಂದಾಗಿ ಸರಿಯಾದ ಸಮಯಕ್ಕೆ ಬೆಳೆ ಬೆಳೆಯಲು ಸಾಧ್ಯವಾಗಿಲ್ಲ. ಹೀಗಾಗಿ, ಹಲವು ರೈತರ ಮಕ್ಕಳ ಉನ್ನತ ಶಿಕ್ಷಣದ ಕನಸು ನನಸಾಗದೇ ಉಳಿದುಬಿಟ್ಟಿದೆ ಎಂದು ಹೇಳಿದರು.

ರೈತರ ಮಕ್ಕಳಿಗೆ ನೆರವಾಗಲು ಕೇಂದ್ರ ಸರಕಾರ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಶಿಕ್ಷಣ ಸಾಲ ನೀಡುತ್ತಿರುವುದು ಒಳ್ಳೆಯದು. ಇದರ ಅಡಿಯಲ್ಲಿ ರಾಜ್ಯದಾದ್ಯಂತ ಉನ್ನತ ಶಿಕ್ಷಣಕ್ಕಾಗಿ ಸಾವಿರಾರು ವಿದ್ಯಾರ್ಥಿಗಳು ಸಾಲವನ್ನೂ ಪಡೆದಿದ್ದಾರೆ. ಆದರೆ, ಶಿಕ್ಷಣ ಪಡೆದ ಬಳಿಕ ಉದ್ಯೋಗವಿಲ್ಲದೆ, ಪದವೀಧರರು ನರಳುವಂತಾಗಿದೆ. ಇದರಿಂದ ಸಾಲ ಮರು ಪಾವತಿ ಮಾಡಲು ಕಷ್ಟವಾಗುತ್ತಿದೆ ಎಂದು ತಿಳಿಸಿದರು.

ಸರಕಾರ ಉದ್ಯೋಗ ಸಿಗದೇ ಪರದಾಡುತ್ತಿರುವ ನಿರುದ್ಯೋಗಿಗಳಿಂದ ಸಾಲ ಮರು ಪಾವತಿಸುವಂತೆ ಒತ್ತಾಯ ಮಾಡಬಾರದು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಸರಕಾರವೇ ಸಾಲ ಮನ್ನಾ ಮಾಡಬೇಕು ಎಂದು ಅವರು ಆಗ್ರಹಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News