ಇಂಗ್ಲೆಂಡ್ ಗೆ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯದ ಸವಾಲು

Update: 2019-06-24 18:34 GMT

ಲಂಡನ್, ಜೂ.24: ಶ್ರೀಲಂಕಾ ವಿರುದ್ಧ ಕಳೆದ ಪಂದ್ಯದಲ್ಲಿ 20 ರನ್‌ಗಳ ಅಂತರದಲ್ಲಿ ಸೋಲು ಅನುಭವಿಸಿರುವ ಆತಿಥೇಯ ಇಂಗ್ಲೆಂಡ್ ತಂಡ ಮಂಗಳವಾರ ಲಾರ್ಡ್ಸ್‌ನಲ್ಲಿ ನಡೆಯಲಿರುವ ವಿಶ್ವಕಪ್ ಪಂದ್ಯದಲ್ಲಿ ಸಾಂಪ್ರದಾಯಿಕ ಎದುರಾಳಿ ಆಸ್ಟ್ರೇಲಿಯ ಸವಾಲು ಎದುರಿಸಲಿದೆ.

ಆಸ್ಟ್ರೇಲಿಯ ವಿರುದ್ಧ ಗೆಲುವಿಗೆ ಇಂಗ್ಲೆಂಡ್ ಎದುರು ನೋಡುತ್ತಿದೆ. ಇದೇ ವೇಳೆ ಹಾಲಿ ಚಾಂಪಿಯನ್ ಆಸ್ಟ್ರೇಲಿಯ ಸಾಂಪ್ರದಾಯಿಕ ಎದುರಾಳಿ ಇಂಗ್ಲೆಂಡ್‌ಗೆ ಸೋಲುಣಿಸುವ ಯೋಜನೆ ಹಾಕಿಕೊಂಡಿದೆ.

ಸದ್ಯ ಟೂರ್ನಿಯಲ್ಲಿ ಇಂಗ್ಲೆಂಡ್ ಎರಡು ಬಾರಿ ಸೋಲು ಅನುಭವಿಸಿದೆ. ಶ್ರೀಲಂಕಾ ವಿರುದ್ಧ 233 ರನ್‌ಗಳ ಸವಾಲನ್ನು ಪಡೆದಿದ್ದ ಇಂಗ್ಲೆಂಡ್ 212 ರನ್‌ಗಳಿಗೆ ಆಲೌಟಾಗಿತ್ತು. ಈ ಮೊದಲು ಪಾಕಿಸ್ತಾನಕ್ಕೆ ಶರಣಾಗಿತ್ತು. ಇದೀಗ ಇಂಗ್ಲೆಂಡ್ ಆಡಿರುವ 6 ಪಂದ್ಯಗಳಲ್ಲಿ 4 ಗೆಲುವು ಸಾಧಿಸಿದೆ. ಅಗ್ರ ನಾಲ್ಕರಲ್ಲಿ ಸ್ಥಾನ ಪಡೆದು ಸೆಮಿಫೈನಲ್ ಪ್ರವೇಶಿಸಲು ಇದೇ ಪ್ರದರ್ಶನವನ್ನು ಮುಂದುವರಿಸಬೇಕಾಗಿದೆ.

 ವಿಶ್ವಕಪ್ ಆರಂಭಗೊಂಡು 44 ವರ್ಷ ಸಂದರೂ ಇಂಗ್ಲೆಂಡ್‌ಗೆ ಈ ತನಕ ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಇನ್ನು ಉಳಿದಿರುವ ಮೂರು ಪಂದ್ಯಗಳಲ್ಲಿ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯ, ಭಾರತ ಮತ್ತು ನ್ಯೂಝಿಲ್ಯಾಂಡ್‌ನ ಸವಾಲು ಎದುರಾಗಲಿದೆ. ಈ ತಂಡಗಳ ವಿರುದ್ಧ ವಿಶ್ವಕಪ್‌ನಲ್ಲಿ ಗೆಲ್ಲಲು ಕಳೆದ 37 ವರ್ಷಗಳಲ್ಲಿ ಸಾಧ್ಯವಾಗಿಲ್ಲ. ಸೆಮಿಫೈನಲ್‌ಗೇರಲು ಇನ್ನು ಎರಡು ಪಂದ್ಯಗಳಲ್ಲಿ ಗೆಲ್ಲಲೇಬೇಕಾಗಿದೆ.

    ಆಸ್ಟ್ರೇಲಿಯ 6 ಪಂದ್ಯಗಳ ಪೈಕಿ 5ರಲ್ಲಿ ಜಯ ಗಳಿಸಿದೆ. ಭಾರತದ ವಿರುದ್ಧ ಮಾತ್ರ ಸೋಲು ಅನುಭವಿಸಿದೆ. ಒಟ್ಟು 447 ರನ್ ಗಳಿಸಿರುವ ಆಸ್ಟ್ರೇಲಿಯದ ವಾರ್ನರ್ ಟೂರ್ನಿಯಲ್ಲಿ 2ನೇ ಗರಿಷ್ಠ ಸ್ಕೋರರ್. ಅವರು 2 ಶತಕ ಮತ್ತು 2 ಅರ್ಧಶತಕಗಳನ್ನು ಗಳಿಸಿದ್ದಾರೆ. 2015ರ ವಿಶ್ವಕಪ್‌ನಲ್ಲಿ ಬಹಳ ಬೇಗನೆ ನಿರ್ಗಮಿಸಿದ್ದ ಇಂಗ್ಲೆಂಡ್ ಈ ಬಾರಿ ಐಸಿಸಿ ರ್ಯಾಂಕಿಂಗ್‌ನಲ್ಲಿ ಅಗ್ರ ಸ್ಥಾನದೊಂದಿಗೆ ಮೊದಲ ಬಾರಿ ವಿಶ್ವಕಪ್ ಗೆಲ್ಲುವ ಪ್ರಯತ್ನಕ್ಕೆ ಇಳಿದಿದೆ. ಇಂಗ್ಲೆಂಡ್ ಏಕದಿನ ಕ್ರಿಕೆಟ್‌ನಲ್ಲಿ ಎರಡು ಬಾರಿ 400ಕ್ಕೂ ಅಧಿಕ ರನ್ ಗಳಿಸಿ ಅಗ್ರಸ್ಥಾನಕ್ಕೇರಿತ್ತು. ಆಸ್ಟ್ರೇಲಿಯ ವಿರುದ್ಧ 6 ವಿಕೆಟ್ ನಷ್ಟದಲ್ಲಿ 481 ರನ್ ಗಳಿಸಿತ್ತು. ಈ ಬಾರಿ ವಿಶ್ವಕಪ್‌ನಲ್ಲಿ ಸರಾಸರಿ 300 ರನ್ ದಾಖಲಿಸಿದ್ದರೂ, ಶ್ರೀಲಂಕಾ ವಿರುದ್ಧ 232 ರನ್‌ಗಳ ಗೆಲುವಿನ ಸವಾಲನ್ನು ಬೆನ್ನಟ್ಟುವಲ್ಲಿ ಎಡವಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News