ಗುಜರಾತ್‌ನಿಂದ ರಾಜ್ಯಸಭೆಗೆ ಆಯ್ಕೆಯಾಗಲು ಜೈಶಂಕರ್ ಸಿದ್ಧತೆ

Update: 2019-06-25 05:37 GMT

ಅಹ್ಮದಾಬಾದ್, ಜೂ.25: ಎರಡು ರಾಜ್ಯಸಭಾ ಉಪ ಚುನಾವಣೆಗೆ ಗುಜರಾತ್‌ನ ಬಿಜೆಪಿ ಅಭ್ಯರ್ಥಿಗಳಾಗಿ ಕೇಂದ್ರ ವಿದೇಶಾಂಗ ವ್ಯವಹಾರ ಸಚಿವ ಎಸ್.ಜೈಶಂಕರ್ ಹಾಗೂ ಮೆಹ್ಸಾನದ ಒಬಿಸಿ ಯುವ ನಾಯಕ ಜುಗಲ್ಜಿ ಠಾಕೂರ್(ಲೋಖಂಡವಾಲಾ)ಮಂಗಳವಾರ ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ.

 ಮೇಲ್ಮನೆಯಲ್ಲಿ ತೆರವಾಗಿರುವ ಎರಡು ಸೀಟುಗಳಿಗೆ ಬಿಜೆಪಿ ಸೋಮವಾರ ರಾತ್ರಿ ತನ್ನ ಅಭ್ಯರ್ಥಿಗಳನ್ನು ಘೋಷಿಸಿತ್ತು. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಹಾಗೂ ಕೇಂದ್ರ ಸಚಿವೆ ಸ್ಮತಿ ಇರಾನಿ ಲೋಕಸಭೆಗೆ ಆಯ್ಕೆಯಾಗಿರುವ ಕಾರಣ ಇಬ್ಬರೂ ರಾಜ್ಯಸಭಾ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದು, ಉಪ ಚುನಾವಣೆ ನಡೆಯುವ ಅವಶ್ಯಕತೆ ಎದುರಾಗಿದೆ.

 1977ರ ಬ್ಯಾಚಿನ ನಿವೃತ್ತ ಐಎಫ್‌ಎಸ್ ಅಧಿಕಾರಿ ಜೈಶಂಕರ್, ನರೇಂದ್ರ ಮೋದಿ ನೇತೃತ್ವದ ಸರಕಾರದಲ್ಲಿ ವಿದೇಶಾಂಗ ಸಚಿವರಾಗಿ ಸೇರ್ಪಡೆಯಾಗಿ ಅಚ್ಚರಿ ಮೂಡಿಸಿದ್ದರು. ಕೇಂದ್ರ ಸಚಿವ ಸಂಪುಟಕ್ಕೆ ಸೇರಿರುವ ಜೈಶಂಕರ್ ಆರು ತಿಂಗಳೊಳಗೆ ಸಂಸತ್ತಿಗೆ ಆಯ್ಕೆಯಾಗುವ ಅಗತ್ಯವಿತ್ತು.

ಸೋಮವಾರ ಕಾರ್ಯಾಧ್ಯಕ್ಷ ಜೆಪಿ ನಡ್ಡಾ ಸಮ್ಮುಖದಲ್ಲಿ ಜೈಶಂಕರ್ ಅಧಿಕೃತವಾಗಿ ಬಿಜೆಪಿಗೆ ಸೇರ್ಪಡೆಯಾಗಿದ್ದರು.

 ಉತ್ತರ ಗುಜರಾತ್‌ನ ಮೆಹ್‌ಸಾನ ಜಿಲ್ಲೆಯ 49ರ ಹರೆಯದ ಠಾಕೂರ್ ರಾಜ್ಯಸಭೆ ಅಭ್ಯರ್ಥಿಯಾಗಿ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ. ಒಬಿಸಿ ಯುವ ನಾಯಕನಾಗಿರುವ ಠಾಕೂರ್ ಗುಜರಾತ್ ಬಿಜೆಪಿ ಒಬಿಸಿ ಸೆಲ್‌ನ ಕಾರ್ಯದರ್ಶಿಯಾಗಿದ್ದಾರೆ. ವೃತ್ತಿಯಲ್ಲಿ ರಿಯಲ್ ಎಸ್ಟೇಟ್, ಹೊಟೇಲ್ ವ್ಯವಹಾರ ಹಾಗೂ ಸಾಮಾಜಿಕ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ. ಜುಗಲ್ಜಿ ಠಾಕೂರ್ ಅವರ ತಂದೆ ಮಾರ್ಥುಜಿ ಕಾಂಗ್ರೆಸ್‌ನ ಕಟ್ಟಾ ಬೆಂಬಲಿಗರಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News