ಶ್ರೇಷ್ಠ ಆಲ್‌ರೌಂಡ್ ಪ್ರದರ್ಶನದಿಂದ ಯುವರಾಜ್ ವಿಶ್ವಕಪ್ ದಾಖಲೆ ಸರಿಗಟ್ಟಿದ ಶಾಕಿಬ್

Update: 2019-06-25 06:26 GMT

  ಲಂಡನ್, ಜೂ.24: ವಿಶ್ವಕಪ್ ಟೂರ್ನಿಯ ಪಂದ್ಯವೊಂದರಲ್ಲಿ ಐದು ವಿಕೆಟ್‌ಗಳ ಗುಚ್ಚ ಹಾಗೂ ಅರ್ಧಶತಕ ಸಿಡಿಸಿದ ಎರಡನೇ ಆಲ್‌ರೌಂಡರ್ ಶಾಕಿಬ್ ಅಲ್ ಹಸನ್.

ಭಾರತದ ಮಾಜಿ ಆಲ್‌ರೌಂಡರ್ ಯುವರಾಜ್ ಸಿಂಗ್ ವಿಶ್ವಕಪ್ ಇತಿಹಾಸದಲ್ಲಿ ಅವಳಿ ಸಾಧನೆ ಮಾಡಿದ ಏಕೈಕ ಆಟಗಾರ ಎನಿಸಿಕೊಂಡಿದ್ದರು. ಯುವಿ 2011ರ ವಿಶ್ವಕಪ್‌ನ ಗ್ರೂಪ್ ಪಂದ್ಯದಲ್ಲಿ ಐರ್ಲೆಂಡ್ ವಿರುದ್ಧ 75 ಎಸೆತಗಳಲ್ಲಿ ಔಟಾಗದೆ 50 ರನ್ ಗಳಿಸಿದ್ದಲ್ಲದೆ 10 ಓವರ್‌ಗಳಲ್ಲಿ 31 ರನ್ ನೀಡಿ 5 ವಿಕೆಟ್‌ಗಳನ್ನು ಕಬಳಿಸಿದ್ದರು.

ಕಾಕತಾಳೀಯವೆಂಬಂತೆ ಶಾಕಿಬ್ ಹಾಗೂ ಯುವರಾಜ್ ಇಬ್ಬರೂ ಎಡಗೈ ಸ್ಪಿನ್ನರ್‌ಗಳಾಗಿದ್ದು, ವಿಶ್ವಕಪ್‌ನಲ್ಲಿ 5 ವಿಕೆಟ್ ಗೊಂಚಲು ಪಡೆದಿದ್ದಾರೆ.

ಸೋಮವಾರ ಸೌತಾಂಪ್ಟನ್‌ನಲ್ಲಿ ನಡೆದ ಅಫ್ಘಾನಿಸ್ತಾನ ವಿರುದ್ಧದ ವಿಶ್ವಕಪ್ ಪಂದ್ಯದಲ್ಲಿ ಮೊದಲಿಗೆ 51 ರನ್ ಗಳಿಸಿದ್ದ ಶಾಕಿಬ್ ಬಾಂಗ್ಲಾದೇಶ 7 ವಿಕೆಟ್‌ಗೆ 262 ರನ್ ಗಳಿಸಲು ನೆರವಾಗಿದ್ದರು.

263 ರನ್ ಬೆನ್ನಟ್ಟ ತೊಡಗಿದ ಅಫ್ಘಾನ್‌ಗೆ ಆಘಾತ ನೀಡಿದ ಶಾಕಿಬ್ 10 ಓವರ್‌ಗಳಲ್ಲಿ ಕೇವಲ 29 ರನ್ ನೀಡಿ 5 ವಿಕೆಟ್‌ಗಳನ್ನು ಉರುಳಿಸಿದರು.

ಶಾಕಿಬ್ ವಿಶ್ವಕಪ್ ಇತಿಹಾಸದಲ್ಲಿ 1,000ಕ್ಕೂ ಅಧಿಕ ರನ್ ಹಾಗೂ 30ಕ್ಕೂ ಅಧಿಕ ವಿಕೆಟ್ ಪಡೆದ ಮೊದಲ ಆಟಗಾರನೆಂಬ ಕೀರ್ತಿಗೂ ಭಾಜನರಾದರು. ಯಾವ ದೇಶದ ಆಟಗಾರನೂ ಈ ಅಪೂರ್ವ ಡಬಲ್ ದಾಖಲೆಯನ್ನು ಮಾಡಿಲ್ಲ.

ಶಾಕಿಬ್ ವಿಶ್ವಕಪ್ ಇತಿಹಾಸದಲ್ಲಿ ಸಾವಿರಕ್ಕೂ ಅಧಿಕ ರನ್ ಗಳಿಸಿದ ಬಾಂಗ್ಲಾದ ಮೊದಲ ಬ್ಯಾಟ್ಸ್ ಮನ್. ವಿಶ್ವಕಪ್‌ನಲ್ಲಿ 5 ವಿಕೆಟ್ ಪಡೆದ ಬಾಂಗ್ಲಾದ ಮೊದಲ ಬೌಲರ್ ಆಗಿದ್ದಾರೆ. ಶಾಕಿಬ್ ಏಕೈಕ ವಿಶ್ವಕಪ್‌ನಲ್ಲಿ 400ಕ್ಕೂ ಅಧಿಕ ರನ್ ಹಾಗೂ 10ಕ್ಕೂ ಮಿಕ್ಕಿ ವಿಕೆಟ್ ಪಡೆದ ಮೊದಲ ಆಟಗಾರನೆಂಬ ಹೆಗ್ಗಳಿಕೆಗೂ ಪಾತ್ರರಾಗಿದ್ದಾರೆ.

ವಿಶ್ವಕಪ್‌ನಲ್ಲಿ ಇನ್ನೆರಡು ಗ್ರೂಪ್ ಪಂದ್ಯಗಳನ್ನು ಆಡಲಿರುವ ಶಾಕಿಬ್ ಒಂದೇ ವಿಶ್ವಕಪ್‌ನಲ್ಲಿ ಶತಕ ಹಾಗೂ ಐದು ವಿಕೆಟ್ ಗೊಂಚಲು ಪಡೆದ ವಿಶ್ವದ ಮೂರನೇ ಆಟಗಾರನಾಗಿದ್ದಾರೆ.. ಭಾರತದ ದಂತಕತೆ ಕಪಿಲ್‌ದೇವ್ ಹಾಗೂ ಸ್ಟಾರ್ ಆಲ್‌ರೌಂಡರ್ ಯುವರಾಜ್ ಸಿಂಗ್ ಈ ಸಾಧನೆ ಮಾಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News