ಗುಜರಾತ್ ಹತ್ಯಾಕಾಂಡ: ಪ್ರಧಾನಿಯವರೇ ಸುಪ್ರೀಂ ತೀರ್ಪಿನ ಬಗ್ಗೆ ನೀವು ಹೇಳಿದ್ದು ಸುಳ್ಳು

Update: 2019-06-25 10:27 GMT

30 ವರ್ಷ ಹಳೆಯ ಕಸ್ಟಡಿ ಸಾವು ಪ್ರಕರಣದಲ್ಲಿ ಇತ್ತೀಚೆಗೆ ನ್ಯಾಯಾಲಯದಿಂದ ಜೀವಾವಧಿ ಶಿಕ್ಷೆಗೊಳಗಾಗಿರುವ ಮಾಜಿ ಐಪಿಎಸ್ ಅಧಿಕಾರಿ  ಸಂಜೀವ್ ಭಟ್ ಪ್ರಧಾನಿ ನರೇಂದ್ರ ಮೋದಿಗೆ ಬಹಿರಂಗ ಪತ್ರ ಬರೆದಿದ್ದಾರೆ. ಎಹ್ಸಾನ್ ಜಾಫ್ರಿ ಪ್ರಕರಣದ ಸುಪ್ರೀಂ ಕೋರ್ಟ್ ತೀರ್ಪಿನ ಕುರಿತಂತೆ ಗುಜರಾತಿನ 6 ಕೋಟಿ ಜನರನ್ನು ಪ್ರಧಾನಿ ತಪ್ಪು ದಾರಿಗೆಳೆದಿದ್ದಾರೆ ಎಂದು ಅವರು ಈ ಪತ್ರದಲ್ಲಿ ಬರೆದಿದ್ದಾರೆ.

ಪತ್ರದ ಪ್ರಮುಖ ಅಂಶಗಳು ಇಂತಿವೆ :

ಆತ್ಮೀಯ ಶ್ರೀ ಮೋದಿಯವರೇ,

ನೀವು ‘ಆರು ಕೋಟಿ ಗುಜರಾತಿಗರಿಗೆ’ ಬಹಿರಂಗ ಪತ್ರ ಬರೆದಿರುವುದು ಖುಷಿಯಾಗಿದೆ. ನಿಮ್ಮ ಮನಸ್ಸಿನಲ್ಲಿರುವುದನ್ನು ತಿಳಿಯಲು ಇದರಿಂದ ನನಗೆ ಸಾಧ್ಯವಾಗಿದೆ ಹಾಗೂ ಅದೇ ಮಾಧ್ಯಮದ ಮುಖಾಂತರ ನಿಮಗೆ ಪತ್ರ ಬರೆಯಲು ನನಗೆ ಅವಕಾಶ ಕೂಡ ಒದಗಿಸಿದೆ.

ಝಕಿಯಾ ನಸೀಮ್ ಎಹ್ಸಾನ್ ಹಾಗೂ ಗುಜರಾತ್ ಸರಕಾರದ ನಡುವಿನ ಪ್ರಕರಣದ ಕುರಿತಂತೆ ಮಾನ್ಯ ಸುಪ್ರೀಂ ಕೋಟ್ ನೀಡಿರುವ ತೀರ್ಪು ಹಾಗೂ ಆದೇಶವನ್ನು ನೀವು ಸಂಪೂರ್ಣವಾಗಿ ತಪ್ಪಾಗಿ ಅರ್ಥೈಸಿದಂತೆ ಕಾಣಿಸುತ್ತದೆ. ‘ನಿಮ್ಮ ಆಯ್ಕೆಯ ಸಲಹೆಗಾರರು’ ನಿಮ್ಮನ್ನು ಮತ್ತೊಮ್ಮೆ ತಪ್ಪು ದಾರಿಗೆಳೆದಿರುವ ಸಾಧ್ಯತೆಯಿದೆ ಹಾಗೂ ನಿಮ್ಮನ್ನು ತಾವು ಆರಿಸಿದ ನಾಯಕನೆಂದು ತಿಳಿದುಕೊಂಡಿರುವ “6 ಕೋಟಿ ಗುಜರಾತಿಗರನ್ನು” ನೀವು ತಪ್ಪು ದಾರಿಗೆಳೆದಿದ್ದೀರಿ.

ರಾಜಕೀಯ ಕ್ಷೇತ್ರದ ಕೆಲವೊಂದು ವರ್ಗಗಳು ಭಾರೀ ವಿಜಯವೆಂದು ಬಣ್ಣಿಸುತ್ತಿರುವ ಸುಪ್ರೀಂ ಕೋರ್ಟ್ ತೀರ್ಪು ಹಾಗೂ ಆದೇಶವನ್ನು ನಿಮಗಾಗಿ  ಬಿಡಿಸಿ ಹೇಳಲು ಸಹಾಯ ಮಾಡುತ್ತೇನೆ.

“ಸುಪ್ರೀಂ ಕೋರ್ಟಿನ ತೀರ್ಪಿನಿಂದ ಒಂದು ವಿಷಯ ಸ್ಪಷ್ಟ. ನನ್ನ ಹಾಗೂ ಗುಜರಾತ್ ಸರಕಾರದ ವಿರುದ್ಧ 2002 ಹಿಂಸಾಚಾರದ ನಂತರ ಮಾಡಲಾದ ಸುಳ್ಳು ಹಾಗೂ ನಿರಾಧಾರ ಆರೋಪಗಳು ಹಾಗೂ ಅನಾರೋಗ್ಯಕರ ವಾತಾವರಣ ಇದೀಗ ಅಂತ್ಯವಾಗಿದೆ'' ಎಂದು ನೀವು ನಿಮ್ಮ ಪತ್ರದಲ್ಲಿ ಬರೆದಿದ್ದೀರಿ. ಶ್ರೀಮತಿ ಝಕಿಯಾ ಜಾಫ್ರಿ ಅವರ ದೂರಿನಲ್ಲಿ ಮಾಡಲಾಗಿರುವ ಆರೋಪಗಳು ನಿರಾಧಾರ ಅಥವಾ ಸುಳ್ಳು ಎಂದು ಸುಪ್ರೀಂ ಕೋರ್ಟ್ ತೀರ್ಪು ಎಲ್ಲಿಯೂ ಹೇಳಿಲ್ಲ ಎಂದು ನಿಮಗೆ ಸ್ಪಷ್ಟ ಪಡಿಸಲು ಬಯಸುತ್ತೇನೆ. ನಿಜ ಹೇಳಬೇಕೆಂದರೆ ಗುಜರಾತ್ ಘಟನೆಯ ನಿಸ್ಸಹಾಯಕ ಸಂತ್ರಸ್ತರಿಗೆ ನ್ಯಾಯ ಒದಗಿಸುವ ದಿಕ್ಕಿನಲ್ಲಿ ಈ ಸುಪ್ರೀಂ ಕೋರ್ಟ್ ಆದೇಶ ಒಂದು ದೊಡ್ಡ  ನೆಗೆತವಾಗಿದೆ.

ತಮ್ಮ ದೂರನ್ನು ಎಫ್‍ಐಆರ್ ಆಗಿ ದಾಖಲಿಸಲು ಕೋರಿ ಶ್ರೀಮತಿ ಜಾಫ್ರಿ ಮಾನ್ಯ ಗುಜರಾತ್ ಹೈಕೋರ್ಟಿನ ಮೊರೆ ಹೋಗಿದ್ದರು. ಆದರೆ ಅಲ್ಲಿ ಆ ಅರ್ಜಿಯನ್ನು ಮಾನ್ಯ ಮಾಡಲಾಗಿಲ್ಲ. ನಂತರ ಅವರು ಮಾನ್ಯ ಸುಪ್ರೀಂ ಕೋರ್ಟಿಗೆ ಗುಜರಾತ್ ಹೈಕೋರ್ಟಿನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಿದ್ದರು. ಆಕೆಯ ದೂರನ್ನು ಪರಿಗಣಿಸುವಂತೆ ಸುಪ್ರೀಂ ಕೋರ್ಟ್ ಸಿಟ್ ಗೆ ಹೇಳಿತ್ತು ಹಾಗೂ  ಸಿಟ್ ಸಂಗ್ರಹಿಸಿದ ಸಾಕ್ಷ್ಯವನ್ನು ಪರಿಶೀಲಿಸುವಂತೆ ಮಾನ್ಯ ಅಮಿಕಸ್ ಅವರಿಗೂ ನಿರ್ದೇಶನ ನೀಡಿತ್ತು.

ಈ ದೀರ್ಘ ಪ್ರಕ್ರಿಯೆಯ ನಂತರ ಮಾನ್ಯ ಸುಪ್ರೀಂ ಕೋರ್ಟ್ ಶ್ರೀಮತಿ ಜಾಫ್ರಿ ಅವರ ಅಪೀಲನ್ನು ಪರಿಗಣಿಸಲು ಒಪ್ಪಿತ್ತಲ್ಲದೆ ಆಕೆಯ ದೂರನ್ನು ಎಫ್‍ಐಆರ್ ಆಗಿ ಪರಿಗಣಿಸಲು ಸಿಟ್ ಗೆ ವಸ್ತುಶಃ ಸೂಚಿಸಿ ಕ್ರಿಮಿನಲ್ ದಂಡ ಸಂಹಿತೆಯ ಸೆಕ್ಷನ್ 173(2) ಅನ್ವಯ ವರದಿ ಸಲ್ಲಿಸುವಂತೆಯೂ ನಿರ್ದೇಶನ ನೀಡಿತ್ತು.

ಕ್ರಿಮಿನಲ್ ದಂಡ ಸಂಹಿತೆಯ ಈ ಸೆಕ್ಷನ್ 173(2)  ಚಾರ್ಜ್ ಶೀಟ್ ಅಥವಾ ಅಂತಿಮ ವರದಿಯೆಂದೇ ಪರಿಗಣಿತವಾಗಿದೆ ಎಂದು ನಿಮ್ಮ ಆರು ಕೋಟಿ ಗುಜರಾತಿ ಸೋದರ ಸೋದರಿಯರಿಗೆ ಹಾಗೂ ನಿಮಗೆ ಸ್ಪಷ್ಟ ಪಡಿಸಲು ಬಯಸುತ್ತೇನೆ.

ಸಿಟ್ ಸಂಗ್ರಹಿಸಿದ ಸಾಕ್ಷ್ಯಗಳ ಜತೆ ಅಮಿಕಸ್ ಅವರ ವರದಿಗಳನ್ನು ಮ್ಯಾಜಿಸ್ಟ್ರೇಟ್ ಮುಂದೆ ಸಲ್ಲಿಸುವಂತೆ ಸಿಟ್ ಗೆ ಮಾನ್ಯ ಸುಪ್ರೀಂ ಕೋರ್ಟ್ ಸೂಚಿಸಿತ್ತು. ಕಾನೂನು  ತನ್ನ ಹಾದಿಯಲ್ಲಿಯೇ ಮುಂದುವರಿಯಲು ಸುಪ್ರೀಂ ಕೋರ್ಟ್ ಮುಂದೆ ಕ್ರಿಮಿನಲ್ ದಂಡ ಸಂಹಿತೆಯನ್ವಯ ಇದ್ದ ಅತ್ಯುತ್ತಮ ಕ್ರಮ ಇದಾಗಿತ್ತು. ಶ್ರೀಮತಿ ಜಾಫ್ರಿ ಮನವಿ ಮಾಡಿದ್ದಕ್ಕಿಂತಲೂ ಹೆಚ್ಚನ್ನು ಸುಪ್ರೀಂ ಕೋರ್ಟ್ ಆಕೆಗೆ ನೀಡಿತ್ತು.

ಈಗ ಕೆಲವರು ಹೇಳುವುದಕ್ಕಿಂತ ವ್ಯತಿರಿಕ್ತವೆಂಬಂತೆ ಸುಪ್ರೀಂ ಕೋರ್ಟ್ ಆದೇಶಗಳು ಜಾರಿಯಾದಾಗ ವಿಭಿನ್ನ ಚಿತ್ರ ಮುಂದೆ  ಬರಲಿದೆ. ನಿಮ್ಮ ದುರುದ್ದೇಶಗಳಿಗೆ ಗೊತ್ತಿದ್ದೋ ಗೊತ್ತಿಲ್ಲದೆಯೋ ಗುಜರಾತ್ ಜನರನ್ನು ತಪ್ಪು ದಾರಿಗೆಳೆಯುತ್ತಿರುವುದನ್ನು ನೋಡಿದಾಗ  ನೋವಾಗುತ್ತಿದೆ. ಗೊಬೆಲ್ಸ್ ಸಿದ್ಧಾಂತ ಬಹುಸಂಖ್ಯಾತ ಜನರ ಮೇಲೆ ಕೆಲ ಸಮಯ ಖಂಡಿತಾ ಕೆಲಸ ಮಾಡಲಿದೆಯಾದರೂ ಎಲ್ಲಾ ಕಾಲಕ್ಕೂ ಇದು ಸಾಧ್ಯವಿಲ್ಲ.

ದ್ವೇಷವನ್ನು ದ್ವೇಷದಿಂದ ವಶ ಪಡಿಸಿಕೊಳ್ಳಲು ಸಾಧ್ಯವಿಲ್ಲ ಎಂಬುದು ರಾಜ್ಯವನ್ನು ಒಂದು ದಶಕ ಆಳಿದ ನಿಮಗೆ ಹಾಗೂ 23 ವರ್ಷ ಪೊಲೀಸ್ ಸೇವೆಯಲ್ಲಿದ್ದ ನನಗಿಂತ ಹೆಚ್ಚು ಯಾರಿಗೆ ಅರ್ಥವಾಗಲು ಸಾಧ್ಯ?. ಗುಜರಾತ್ ನ ವಿವಿಧೆಡೆ ದ್ವೇಷ ಹಾಗೂ ಹಿಂಸೆ ಪಸರಿಸಿದ್ದ 2002ರ ಆ ದಿನಗಳಲ್ಲಿ ನಿಮ್ಮ ಅಧೀನದಲ್ಲಿ ಸೇವೆ ಸಲ್ಲಿಸುವ ದೌರ್ಭಾಗ್ಯ ನನ್ನದಾಗಿತ್ತು. ಈಗ ಆ ಸಂದರ್ಭದ ವಿಚಾರಗಳನ್ನು ಚರ್ಚಿಸುವ ವೇದಿಕೆ ಇದಲ್ಲ. ಅದಕ್ಕೆ ಮುಂದೆ ಇಬ್ಬರಿಗೂ ಸಾಕಷ್ಟು ಅವಕಾಶಗಳು ಸೂಕ್ತ ಪ್ರಾಧಿಕಾರಗಳ ಮುಂದೆ ದೊರಕಬಹುದು.

ನೈಜ ಉತ್ತಮ ಸಂಬಂಧಗಳನ್ನು ನಾವು ಖರೀದಿಸಲು ಹಾಗೂ ಬೆದರಿಸಿ ಪಡೆಯಲು ಸಾಧ್ಯವಿಲ್ಲ, ಅದನ್ನು ಪಡೆಯಲು ನಾವು ಶ್ರಮಿಸಬೇಕು. ಇದು ಅಷ್ಟು ಸುಲಭವೂ ಅಲ್ಲ. ಎಲ್ಲಾ ವರ್ಗಗಳಿಗೆ ನೀವು ಹೊಣೆಗಾರರಾಗಬೇಕಿಲ್ಲ ಎಂಬ ಭಾವನೆ ಗುಜರಾತ್ ನ ಅತ್ಯಂತ ಪ್ರಬಲ ವ್ಯಕ್ತಿಯಾಗಿ ನೀವು ಅಂದುಕೊಳ್ಳಬಹುದು. ಆದರೆ ಉತ್ತಮ ಸಂಬಂಧಗಳಿಲ್ಲದೇ ದೊರೆತ ಅಧಿಕಾರ ಯಾವತ್ತೂ ಅಪಾಯಕಾರಿ ಹಾಗೂ ಅಲ್ಲಿಂದ ಹಿಂದಿರುಗುವ ಹಾದಿ ಇರದು.

ಸದ್ಭಾವಕ್ಕೆ ಮೊದಲು ಸಮಭಾವ ಅಗತ್ಯ. ಸತ್ಯ ಯಾವತ್ತೂ ಸ್ವಲ್ಪ ಕಹಿ ಹಾಗೂ ನುಂಗಲು ಅಷ್ಟು ಸುಲಭವಲ್ಲ.’ಅನ್ಯಾಯ ಎಲ್ಲಿ ನಡೆದರೂ ಅದು ಎಲ್ಲ ಕಡೆಯಲ್ಲೂ ನ್ಯಾಯಕ್ಕೆ ಅಪಾಯ’ ಎಂದು ಮಾರ್ಟಿನ್ ಲೂಥರ್ ಕಿಂಗ್ ಜೂನಿಯರ್ ಹೇಳಿದ್ದಾರೆ. ಗುಜರಾತ್ ಸಂತ್ರಸ್ತರ ನ್ಯಾಯಕ್ಕಾಗಿನ ಪ್ರಯತ್ನವನ್ನು ಎಷ್ಟೇ ಸುಳ್ಳು ಪ್ರಚಾರದ ಮೂಲಕ ಅದುಮಲು ಸಾಧ್ಯವಿಲ್ಲ.

ನಿಮ್ಮ ಆತ್ಮೀಯ

-ಸಂಜೀವ್ ಭಟ್

ಕೃಪೆ: nationalheraldindia.com

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News