ವೈದ್ಯಕೀಯ ಕೋರ್ಸ್‌ಗಳ ಶುಲ್ಕ ಹೆಚ್ಚಳ ಖಂಡಿಸಿ ಎಬಿವಿಪಿ ಪ್ರತಿಭಟನೆ

Update: 2019-06-25 16:43 GMT

ಬೆಂಗಳೂರು, ಜೂ.25: 2019-20ನೆ ಸಾಲಿನ ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಕೋರ್ಸುಗಳ ಶುಲ್ಕವನ್ನು ಶೇ.15ಕ್ಕೆ ಹೆಚ್ಚಿಸಿರುವ ಕ್ರಮ ಕೂಡಲೆ ಹಿಂಪಡೆಯಬೇಕೆಂದು ಆಗ್ರಹಿಸಿ ನಗರದ ಮಲ್ಲೇಶ್ವರಂ ವೃತ್ತದಲ್ಲಿ ಎಬಿವಿಪಿ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

ಸರಕಾರದ ಶುಲ್ಕ ಹೆಚ್ಚಳ ನೀತಿಯಿಂದಾಗಿ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳು ವೈದ್ಯಕೀಯ ಶಿಕ್ಷಣದಿಂದ ದೂರ ಉಳಿಯುವಂತಾಗುತ್ತದೆ. ಸಂವಿಧಾನದ ಆಶಯದಂತೆ ಸರ್ವರಿಗೂ ಸರ್ವ ರೀತಿಯ ಶಿಕ್ಷಣ ಲಭ್ಯವಾಗುವಂತಿರಬೇಕು. ಈ ರೀತಿಯ ಶುಲ್ಕವನ್ನು ಹೆಚ್ಚಿಸಿರುವುದು ಸಂವಿಧಾನದ ಮೂಲ ಆಶಯದ ವಿರುದ್ಧವಾಗಿರುತ್ತದೆ ಎಂದು ಎಬಿವಿಪಿ ರಾಜ್ಯ ಕಾರ್ಯದರ್ಶಿ ಹರ್ಷ ನಾರಾಯಣ ತಿಳಿಸಿದರು.

ಎಬಿವಿಪಿ ಕಾರ್ಯಕರ್ತೆ ಯಶಸ್ವಿನಿ ಮಾತನಾಡಿ, ಕೇಂದ್ರ ಸರಕಾರವು ಆರ್ಥಿಕವಾಗಿ ಹಿಂದುಳಿದ ಮೇಲ್ಜಾತಿಯವರಿಗೆ ಶೇ.10 ಮೀಸಲಾತಿಯನ್ನು ಜಾರಿಗೆ ತಂದಿದ್ದು, ಈ ನೀತಿಯು ಈಗಾಗಲೇ ದೇಶದ ಹಲವಾರು ರಾಜ್ಯಗಳಲ್ಲಿ ಜಾರಿಯಲ್ಲಿದೆ. ಆದರೆ, ಕರ್ನಾಟಕ ಸರಕಾರವು ಈ ಮೀಸಲಾತಿ ನೀತಿಯನ್ನು ಅನುಷ್ಠಾನಗೊಳಿಸದೇ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡುತ್ತಿದೆ ಎಂದು ಆರೋಪಿಸಿದರು.

ಶಿಕ್ಷಣಕ್ಕೆ ಪ್ರೋತ್ಸಾಹ ನೀಡಬೇಕಾದ ಸರಕಾರವೇ ಪ್ರತಿವರ್ಷ ಶುಲ್ಕ ಹೆಚ್ಚಳ ಮಾಡಿ, ಖಾಸಗಿ ಕಾಲೇಜುಗಳ ಲಾಬಿಗೆ ಮಣಿದಿರುವುದು ವಿಪರ್ಯಾಸವಾಗಿದೆ. ಸರಕಾರದ ಈ ನಿರ್ಧಾರದಿಂದ ಬಡ ಮತ್ತು ಗ್ರಾಮೀಣ ಭಾಗದ ವಿದ್ಯಾರ್ಥಿಗಳು ನರಳಬೇಕಾಗುತ್ತದೆ. ಹೀಗಾಗಿ ಕೂಡಲೇ ಸರಕಾರ ತನ್ನ ಈ ನಿರ್ಧಾರದಿಂದ ಹಿಂದೆ ಸರಿಯಬೇಕೆಂದು ಅವರು ಆಗ್ರಹಿಸಿದರು.

ಪ್ರತಿಭಟನೆಯಲ್ಲಿ ಜಿಲ್ಲಾ ಸಂಘಟನಾ ಕಾರ್ಯದರ್ಶಿ ವೆಂಕಟೇಶ ಢಾಂಗೆ, ಜಿಲ್ಲಾ ಸಂಚಾಲಕ ಸುಭಾಷ ಗೌಡ, ಕಾರ್ಯಕರ್ತ ಮನೋಜ, ದರ್ಶನ, ಆದರ್ಶ, ರಾಹುಲ್ ಸೇರಿ ಅನೇಕರು ಉಪಸ್ಥಿತರಿಂದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News