ಸಂಭಾವನೆ ಬಿಡುಗಡೆಗೆ ಆಗ್ರಹಿಸಿ ಪಿಯು ಉಪನ್ಯಾಸಕರ ಸತ್ಯಾಗ್ರಹ

Update: 2019-06-25 16:45 GMT

ಬೆಂಗಳೂರು, ಜೂ.25: ಮೌಲ್ಯಮಾಪನ ಸಂಭಾವನೆ ಬಿಡುಗಡೆ ಸೇರಿದಂತೆ ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಪದವಿ ಪೂರ್ವ ಕಾಲೇಜುಗಳ ಉಪನ್ಯಾಸಕರ ಸಂಘ ಧರಣಿ ಸತ್ಯಾಗ್ರಹ ನಡೆಸಿತು.

ಮಂಗಳವಾರ ನಗರದ ಮೌರ್ಯ ವೃತ್ತದ ಗಾಂಧಿ ಪ್ರತಿಮೆ ಬಳಿ ಧರಣಿ ಸತ್ಯಾಗ್ರಹ ನಡೆಸಿದ ಉಪನ್ಯಾಸಕರ ಸಂಘದ ಪದಾಧಿಕಾರಿಗಳು ಹಾಗೂ ಸದಸ್ಯರು, ದ್ವಿತೀಯ ಪಿಯುಸಿ ಉತ್ತರ ಪತ್ರಿಕೆಗಳ ಮೌಲ್ಯ ಮಾಪನಕ್ಕೆ ನೀಡಬೇಕಾದ ಸಂಭಾವನೆಯನ್ನು ಸರಕಾರ ಇದುವರೆಗೂ ನೀಡಿಲ್ಲ. ಕೂಡಲೇ ಸಂಭಾವನೆಯನ್ನು ಚೆಕ್ ಮೂಲಕ ವಿತರಿಸಬೇಕೆಂದು ಸಂಘದ ಅಧ್ಯಕ್ಷ ತಿಮ್ಮಯ್ಯ ಪುರ್ಲೆ ಸರಕಾರವನ್ನು ಒತ್ತಾಯಿಸಿದರು.

ಉಳಿದಂತೆ, 2008ರ ನಂತರ ಆಯ್ಕೆಯಾದ ಉಪನ್ಯಾಸಕರಿಗೆ ನೀಡುತ್ತಿದ್ದ 500 ರೂ. ಎಕ್ಸ್‌ಗ್ರೇಷಿಯಾವನ್ನು ಮೂಲವೇತನಕ್ಕೆ ವಿಲೀನಗೊಳಿಸಬೇಕು. ಪ್ರೌಢಶಾಲೆ ಯಿಂದ ಪದೋನ್ನತಿ ಹೊಂದಿ, ಪಿಯು ಕಾಲೇಜುಗಳಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸುತ್ತಿರುವ ಉಪನ್ಯಾಸಕರಿಗೆ ಕಾಲುಮಿತಿ ಭಡ್ತಿಯನ್ನು 6ನೇ ವೇತನ ಆಯೋಗದ ಎರಡನೇ ವರದಿಯಲ್ಲಿ ಸೂಚಿಸಿರುವಂತೆ ಮಂಜೂರು ಮಾಡಬೇಕೆಂದು ಆಗ್ರಹಿಸಿದರು.

ಪಿಯು ಉಪನ್ಯಾಸಕರ ಕಾಲ್ಪನಿಕ ವೇತನ ಸಮಸ್ಯೆ ಬಗೆಹರಿಸಬೇಕು. ಎನ್‌ಸಿಇಆರ್‌ಟಿಸಿ ನಿಯಮದಂತೆ ವಿದ್ಯಾರ್ಥಿಗಳ ಗರಿಷ್ಠ ಸಂಖ್ಯೆಯನ್ನು ಪ್ರತಿ ತರಗತಿಗೆ 80 ರಿಂದ 40ಕ್ಕೆ ನಿಗದಿಪಡಿಸಬೇಕು. ಪಿಎಚ್‌ಡಿ ಇನ್ನಿತರ ಸಮಾನಾಂತರ ಶಿಕ್ಷಣ ಪಡೆದಿರುವ ಉಪನ್ಯಾಸಕರಿಗೆ ಪದವಿ ಕಾಲೇಜಿಗೆ ಭಡ್ತಿ ನೀಡಬೇಕು. ರಾಜ್ಯದಲ್ಲಿ ಪರಿವರ್ತನೆಯಾಗಿರುವ 276 ಪಬ್ಲಿಕ್ ಶಾಲೆಗಳಲ್ಲಿ ಆಡಳಿತಾತ್ಮಕ ಸಮಸ್ಯೆ ಬಗೆಹರಿಸಬೇಕು ಎಂದು ತಿಳಿಸಿದರು.

ಅಲ್ಲದೆ, ಗಣಿತ ವಿಷಯದಲ್ಲೂ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅಂಕ ನೀಡಬೇಕು. ವರ್ಗಾವಣೆ ಪ್ರಕ್ರಿಯೆಯನ್ನು ಅಧಿಸೂಚನೆ ಅನ್ವಯ ಆರಂಭಿಸುವುದು ಸೇರಿದಂತೆ, ಪ್ರಮುಖ 14 ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿದರು. ಪ್ರತಿಭಟನೆಯಲ್ಲಿ ಕಾರ್ಯಾಧ್ಯಕ್ಷ ಎಸ್.ಆರ್.ವೆಂಕಟೇಶ್, ಪ್ರಧಾನ ಕಾರ್ಯದರ್ಶಿ ನಿಂಗೇಗೌಡ ಹಾಗೂ ಸದಸ್ಯರುಗಳು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News