ಕೆಳಸೇತುವೆ ಕಾಮಗಾರಿ ಪೂರ್ಣಗೊಳಿಸುವಂತೆ ಬಿಬಿಎಂಪಿ ಮೇಯರ್ ಗಡುವು

Update: 2019-06-25 16:46 GMT

ಬೆಂಗಳೂರು, ಜೂ.25: ಹೊಸಕೆರೆಹಳ್ಳಿ ಸಮೀಪದ ಮುತ್ತುರಾಜ್ ಜಂಕ್ಷನ್ ಬಳಿ ನಿರ್ಮಿಸುತ್ತಿರುವ ಕೆಳಸೇತುವೆ ಕಾಮಗಾರಿಯನ್ನು ಮುಂದಿನ ತಿಂಗಳ ಅಂತ್ಯದೊಳಗೆ ಪೂರ್ಣಗೊಳಿಸಬೇಕು ಎಂದು ಮೇಯರ್ ಗಂಗಾಂಬಿಕೆ ಆದೇಶಿಸಿದ್ದಾರೆ.

ಮಂಗಳವಾರ ನಗರದ ಮುತ್ತುರಾಜ್ ಜಂಕ್ಷನ್ ಬಳಿ ಬಿಬಿಎಂಪಿ ಕೈಗೆತ್ತಿಕೊಂಡಿರುವ ಕೆಳಸೇತುವೆ ಕಾಮಗಾರಿಯನ್ನು ಪರಿಶೀಲಿಸಿ, ಕಳೆದ ಮೂರು ವರ್ಷಗಳಿಂದ ಕಾಮಗಾರಿ ನಡೆಯುತ್ತಲೇ ಇದೆ, ಆದರೂ ಮುಗಿದಿಲ್ಲ. ಸಾರ್ವಜನಿಕರು ಕಾಮಗಾರಿ ವಿಳಂಬಕ್ಕೆ ರೋಸಿ ಹೋಗಿದ್ದಾರೆ ಎಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.

ಹಗಲು-ರಾತ್ರಿ ಕಾಮಗಾರಿ ನಡೆಸಿ ಜುಲೈ ಅಂತ್ಯದೊಳಗೆ ಪೂರ್ಣಗೊಳಿಸಿ ಸಾರ್ವಜನಿಕರ ಬಳಕೆಗೆ ಒಪ್ಪಿಸಬೇಕೆಂದು ಗುತ್ತಿಗೆದಾರರಿಗೆ ಸೂಚಿಸಿದರು. ಅಲ್ಲದೆ, 280 ಮೀಟರ್ ಉದ್ದದ ಕೆಳಸೇತುವೆ ಕಾಮಗಾರಿಯನ್ನು ಕಳೆದ ಮೂರು ವರ್ಷಗಳ ಹಿಂದೆ ಕೈಗೊಳ್ಳಲಾಗಿತ್ತು. ಮೈಸೂರು ರಸ್ತೆಯಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ ಸಿಗ್ನಲ್ ಫ್ರೀ ಕಾರಿಡಾರ್ ಇದಾಗಿದೆ. ಹೊಸಕೆರೆಹಳ್ಳಿಯ ಮುತ್ತುರಾಜ್ ಜಂಕ್ಷನ್ ಕೆಳಸೇತುವೆ ನಾಲ್ಕು ಪಥದಿಂದ ಕೂಡಿದ್ದು, ಸರ್ವೀಸ್ ರಸ್ತೆಯನ್ನು ಒಳಗೊಂಡಿದೆ ಎಂದು ತಿಳಿಸಿದರು.

ಈ ಕಾಮಗಾರಿ ಪೂರ್ಣಗೊಂಡರೆ, ಈ ಭಾಗದಲ್ಲಿ ಉಂಟಾಗುತ್ತಿರುವ ಸಂಚಾರ ದಟ್ಟಣೆ ಪ್ರಮಾಣ ತಗ್ಗುತ್ತದೆ. ಈ ಭಾಗದಲ್ಲಿ ಬೃಹತ್ ಪ್ರಮಾಣದ ಬಂಡೆ ಎದುರಾಗಿತ್ತು. ಅಲ್ಲದೆ, ಬೆಸ್ಕಾಂ ಮತ್ತು ಜಲಮಂಡಳಿ ಸಂಸ್ಥೆಗಳು, ವಿದ್ಯುತ್ ಮತ್ತು ನೀರಿನ ಪೈಪ್‌ಗಳನ್ನು ತೆರವುಗೊಳಿಸುವುದು ಹಾಗೂ ಸಂಚಾರ ದಟ್ಟಣೆ ಮಾರ್ಗವನ್ನು ಬದಲಿಸುವುದು ಸೇರಿದಂತೆ, ಹಲವಾರು ಅಡಚಣೆಗಳು ಎದುರಾಗಿದ್ದರಿಂದ ಕಾಮಗಾರಿ ವಿಳಂಬವಾಗಿದೆ ಎಂದು ಹೇಳಿದರು.

ಈ ಸಂದರ್ಭದಲ್ಲಿ ಶಾಸಕ ರವಿ ಸುಬ್ರಮಣ್ಯ, ಬಿಬಿಎಂಪಿ ಆಡಳಿತ ಪಕ್ಷದ ನಾಯಕ ಅಬ್ದುಲ್ ವಾಜಿದ್, ಸ್ಥಾಯಿ ಸಮಿತಿ ಅಧ್ಯಕ್ಷೆ ಲಾವಣ್ಯ ರೆಡ್ಡಿ ಮತ್ತು ಪ್ರದಾನ ಎಂಜಿನಿಯರ್ ಕೆ.ಟಿ.ನಾಗರಾಜ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News