ದೇಶದ ಜನರಲ್ಲಿ ಅಸಹಾಯಕ ಮನಸ್ಥಿತಿ ಹೆಚ್ಚುತ್ತಿದೆ: ಚಿಂತಕ ಡಾ.ಜಿ.ರಾಮಕೃಷ್ಣ

Update: 2019-06-25 18:16 GMT

ಬೆಂಗಳೂರು, ಜೂ.25: ದೇಶದಲ್ಲಿ ಗುಂಪುಗಾರಿಕೆ ಮತ್ತು ಜನರಲ್ಲಿ ಅಸಹಾಯಕ ಸ್ಥಿತಿ ಹೆಚ್ಚುತ್ತದೆ. ಇಂತಹ ಅಸಮಾನತೆಯಿಂದ ಕೂಡಿರುವ ಸಮಾಜವನ್ನು ಬದಲಾಯಿಸಬೇಕಾದ ಜವಾಬ್ದಾರಿ ನಮ್ಮದು ಎಂದು ಚಿಂತಕ ಜಿ.ರಾಮಕೃಷ್ಣ ತಿಳಿಸಿದರು.

ಬೆಂಗಳೂರು ವಿಶ್ವವಿದ್ಯಾಲಯದ ಇತಿಹಾಸ ವಿಭಾಗ ಇಲ್ಲಿನ ಡಾ.ಕೆ.ವೆಂಕಟಗಿರಿಗೌಡ ಸಭಾಂಗಣದಲ್ಲಿ ಆಯೋಜಿಸಿದ್ದ ‘ಸಮಕಾಲೀನ ಭಾರತ ಸವಾಲು ಮತ್ತು ಗ್ರಹಿಕೆಗಳು’ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಹಣ, ಅಪ್ರಪ್ರಚಾರ, ಅಧಿಕಾರದ ಬಲಪ್ರಯೋಗ ಎಲ್ಲವೂ ನಡೆಯಿತು. ಮತದಾರರಿಗೆ ತಾವು ಯಾರಿಗೆ ಮತ ಹಾಕಬೇಕೆಂದು ಚಿಂತಿಸುವಷ್ಟು ಸಮಯಾವಕಾಶ ನೀಡಿಲ್ಲ. ಚುನಾವಣೆಯ ಇವೆಲ್ಲ ಪ್ರಕ್ರಿಯೆಗಳು ಪ್ರಜಾಪ್ರಭುತ್ವದ ಲಕ್ಷಣವಲ್ಲವೆಂದು ಅವರು ಹೇಳಿದರು.

ನ್ಯಾಷನಲ್ ಸ್ಕೂಲ್ ಆಫ್ ಜರ್ನಲಿಸಂನ ನಿರ್ದೇಶಕ ಎಚ್.ಎಸ್.ಬಲರಾಮ್ ಮಾತನಾಡಿ, ಪರಿಸರ ಮಾಲಿನ್ಯ, ಧಾರ್ಮಿಕ ಬಿಕ್ಕಟ್ಟುಗಳು, ಘರ್ಷಣೆಗಳು, ಹೆಣ್ಣಿನ ಮೇಲಿನ ದೌರ್ಜನ್ಯಗಳು ದಿನೇ ದಿನೇ ಹೆಚ್ಚಾಗುತ್ತಿವೆ. ಇದಕ್ಕೆ ಸೂಕ್ತ ಪರಿಹಾರ ನಮ್ಮೆಲ್ಲರ ಮನಸ್ಸುಗಳಲ್ಲಿ ಬದಲಾವಣೆ ಆಗಬೇಕು ಎಂದು ತಿಳಿಸಿದರು.

ಪರಿಸರ ಸಂರಕ್ಷಣೆ ಮಾಡುವುದು ನಮ್ಮೆಲ್ಲರ ಆದ್ಯ ಕರ್ತವ್ಯ. ಪ್ರತಿಯೊಬ್ಬರು ಸಸಿಗಳನ್ನು ನೆಟ್ಟು, ಗಿಡ, ಮರಗಳನ್ನು ಸಂರಕ್ಷಿಸಬೇಕು. ಯುವ ಜನತೆ ಪರಿಸರ ಕಾಳಜಿ, ಮಾನವೀಯತೆ, ವೈಜ್ಞಾನಿಕ ಚಿಂತನೆಗಳನ್ನು ಮೈಗೂಡಿಸಿಕೊಂಡು ಸಮಾಜದ ಅಭಿವೃದ್ಧಿಯಲ್ಲಿ ತೊಡಗಬೇಕು ಎಂದು ಅವರು ಆಶಿಸಿದರು.

ಜೆಎನ್‌ಯು ನಿವೃತ್ತ ಪ್ರಾಧ್ಯಾಪಕ ಪ್ರೊ.ಪ್ರಭಾಕರ್, ಬೆಂಗಳೂರು ವಿಶ್ವವಿದ್ಯಾಲಯದ ಕುಲಸಚಿವ ಪ್ರೊ.ಬಿ.ಕೆ.ರವಿ ಮಾತನಾಡಿದರು. ಗೋಷ್ಟಿಗಳಲ್ಲಿ ಪ್ರೊ.ಅಬ್ದುಲ್ ಅಜೀಜ್, ಪ್ರೊ.ಶಿವರಾಮಕೃಷ್ಣನ್, ಪ್ರೊ.ನಟರಾಜ ಹುಳಿಯಾರ್, ಪ್ರೊ.ನಂದಿನಿ, ಪ್ರೊ.ಕೆಂಪೇಗೌಡ ಭಾಗವಹಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News