ವಿಶ್ವಕಪ್: ಪಾಕ್ ಗೆಲ್ಲಲು 238 ರನ್ ಗುರಿ ನೀಡಿದ ಕಿವೀಸ್

Update: 2019-06-26 14:30 GMT

ಬರ್ಮಿಂಗ್‌ಹ್ಯಾಮ್, ಜೂ.26: ಆರಂಭಿಕ ಆಘಾತಕ್ಕೊಳಗಾಗಿದ್ದ ನ್ಯೂಝಿಲ್ಯಾಂಡ್ ತಂಡ ಮಧ್ಯಮ ಕ್ರಮಾಂಕದ ದಾಂಡಿಗರಾದ ಜೇಮ್ಸ್ ನೀಶಾಮ್(ಔಟಾಗದೆ 97) ಹಾಗೂ ಕಾಲಿನ್ ಗ್ರಾಂಡ್‌ಹೋಮ್(64) ಜವಾಬ್ದಾರಿಯುತ ಬ್ಯಾಟಿಂಗ್ ನೆರವಿನಿಂದ ಚೇತರಿಸಿಕೊಂಡು ಪಾಕಿಸ್ತಾನ ವಿರುದ್ಧ ವಿಶ್ವಕಪ್‌ನ 33ನೇ ಪಂದ್ಯದಲ್ಲಿ ಗೌರವಾರ್ಹ ಮೊತ್ತ ಕಲೆ ಹಾಕಿದೆ.

 ಬುಧವಾರ ಟಾಸ್ ಜಯಿಸಿ ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಝಿಲ್ಯಾಂಡ್ 50 ಓವರ್‌ಗಳಲ್ಲಿ 6 ವಿಕೆಟ್‌ಗಳ ನಷ್ಟಕ್ಕೆ 237 ರನ್ ಗಳಿಸಿತು.ಕೊನೆಯ ಎಸೆತದಲ್ಲಿ ಸಿಕ್ಸರ್ ಸಿಡಿಸಿ ಇನಿಂಗ್ಸ್ ಗೆ ಅಂತ್ಯ ಹಾಡಿದ ನೀಶಾಮ್ ಔಟಾಗದೆ 97 ರನ್(112 ಎಸೆತ, 5 ಬೌಂಡರಿ, 3 ಸಿಕ್ಸರ್)ಗಳಿಸಿ ಶತಕ ವಂಚಿತರಾದರು.

ಶಾಹೀನ್ ಶಾ ಅಫ್ರಿದಿ(3-28) ಶಿಸ್ತುಬದ್ಧ ಬೌಲಿಂಗ್‌ಗೆ ತತ್ತರಿಸಿದ ಕಿವೀಸ್ ಒಂದು ಹಂತದಲ್ಲಿ 44 ರನ್‌ಗೆ 4 ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿತ್ತು. ಆಗ 5ನೇ ವಿಕೆಟ್‌ಗೆ ಜೇಮ್ಸ್ ನೀಶಾಮ್‌ರೊಂದಿಗೆ 37 ರನ್ ಜೊತೆಯಾಟ ನಡೆಸಿದ ವಿಲಿಯಮ್ಸನ್ ಇನಿಂಗ್ಸ್ ದುರಸ್ತಿಗೆ ಯತ್ನಿಸಿದರು.

ಭರ್ಜರಿ ಫಾರ್ಮ್‌ನಲ್ಲಿದ್ದ ವಿಲಿಯಮ್ಸನ್(41)ಅವರನ್ನು ಶಾದಾಬ್ ಖಾನ್ ಪೆವಿಲಿಯನ್‌ಗೆ ಕಳುಹಿಸಿದರು. ಆಗ ಕಿವೀಸ್ ಸ್ಕೋರ್ 5 ವಿಕೆಟ್‌ಗೆ 83 ರನ್.

ಆರನೇ ವಿಕೆಟ್‌ಗೆ 132 ರನ್ ಜೊತೆಯಾಟದಲ್ಲಿ ಭಾಗಿಯಾದ ನೀಶಾಮ್ ಹಾಗೂ ಗ್ರಾಂಡ್‌ಹೋಮ್ ತಂಡ ಚೇತರಿಸಿಕೊಳ್ಳಲು ನೆರವಾದರು. 48ನೇ ಓವರ್ ತನಕ ಈ ಜೋಡಿ ಪಾಕಿಸ್ತಾನದ ಬೌಲರ್‌ಗಳನ್ನು ಕಾಡಿತು.

ಆಮಿರ್ ಹಾಗೂ ಸರ್ಫರಾಝ್ ಅಹ್ಮದ್‌ರಿಂದ ರನೌಟಾದ ಗ್ರಾಂಡ್‌ಹೋಮ್ 71 ಎಸೆತಗಳಲ್ಲಿ 6 ಬೌಂಡರಿ, 1 ಸಿಕ್ಸರ್ ಸಹಿತ 64 ರನ್ ಗಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News