ಗ್ರಂಥಾಲಯಗಳು ಬಿಬಿಎಂಪಿ ಸುಪರ್ದಿಗೆ ಬೇಡ: ಸಾಹಿತಿಗಳ ಒತ್ತಾಯ

Update: 2019-06-26 16:46 GMT

ಬೆಂಗಳೂರು, ಜೂ.26: ಬೆಂಗಳೂರು ನಗರ ಪಾಲಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ನಗರ ಗ್ರಂಥಾಲಯಗಳನ್ನು ಬಿಬಿಎಂಪಿ ಸುಪರ್ದಿಗೆ ತರುವ ನಿಟ್ಟಿನಲ್ಲಿ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಕೂಡಲೆ ಹಿಂಪಡೆಯಬೇಕೆಂದು ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಸಾಹಿತಿ ಡಾ.ಚಂದ್ರಶೇಖರ ಕಂಬಾರ ನೇತೃತ್ವದಲ್ಲಿ ಸಾಹಿತಿಗಳು ಒತ್ತಾಯಿಸಿದ್ದಾರೆ.

ಬೆಂಗಳೂರು ನಗರದಲ್ಲಿ ಸುಮಾರು 250 ಗ್ರಂಥಾಲಯಗಳು ಕಾರ್ಯನಿರ್ವಹಿಸುತ್ತಿವೆ. ಗ್ರಂಥಾಲಯಗಳ ನಿರ್ವಹಣೆಯಲ್ಲಿ ರಾಜ್ಯ ಗ್ರಂಥಾಲಯ ಇಲಾಖೆ ದೇಶದಲ್ಲೆ ಉತ್ತಮ ಹೆಸರು ಪಡೆದಿದೆ. ಹಾಗೂ ನಾಡಿನ ಸಾಹಿತ್ಯ, ಸಂಸ್ಕೃತಿಯೊಳಗೆ ಸಮ್ಮಿಳನಗೊಂಡಿದೆ. ಇದ್ಯಾವುದರ ಬಗೆಗೂ ಚಿಂತಿಸದ ಬಿಬಿಎಂಪಿ ಗ್ರಂಥಾಲಯಗಳನ್ನು ತಮ್ಮ ಸುಪರ್ದಿಗೆ ತಂದುಕೊಳ್ಳಲು ಚಿಂತನೆ ನಡೆಸಿರುವುದು ಸರಿಯಲ್ಲವೆಂದು ಸಾಹಿತಿಗಳು ಅಭಿಪ್ರಾಯಿಸಿದ್ದಾರೆ.

ಗ್ರಂಥಾಲಯಗಳನ್ನು ತನ್ನ ವಶಕ್ಕೆ ಪಡೆದುಕೊಳ್ಳಲು ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಸಿರುವ ಬಿಬಿಎಂಪಿಯ ಕ್ರಮವನ್ನು ಖಂಡಿಸಿ ನಗರದ ರವೀಂದ್ರ ಕಲಾಕ್ಷೇತ್ರದಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಟಿಯಲ್ಲಿ, ಹಿರಿಯ ಸ್ವಾತಂತ್ರ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ, ಕರ್ನಾಟಕ ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ, ಕುವೆಂಪು ಭಾಷಾ ಭಾರತಿ ಪ್ರಾಧಿಕಾರದ ಅಧ್ಯಕ್ಷ ಮರುಳಸಿದ್ದಪ್ಪ, ಹಿರಿಯ ವಿಮರ್ಶಕ ದಂಡಪ್ಪ ಸೇರಿದಂತೆ ಹಲವು ಸಾಹಿತಿಗಳು ಉಪಸ್ಥಿತರಿದ್ದರು.

ಬಿಬಿಎಂಪಿಯಿಂದ ಸೆಸ್ ಮೂಲಕ ಗ್ರಂಥಾಲಯ ಇಲಾಖೆಗೆ ಇದುವರೆಗೂ 325 ಕೋಟಿ ರೂ. ಹಣ ಬರಬೇಕಿದೆ. ಇದನ್ನು ಪಾವತಿಸುವಂತೆ ಬಿಬಿಎಂಪಿಗೆ ಹಲವಾರು ವರ್ಷಗಳಿಂದ ಗ್ರಂಥಾಲಯ ಇಲಾಖೆಯ ಅಧಿಕಾರಿಗಳು ಹಾಗೂ ಸಾಹಿತಿಗಳು ಒತ್ತಾಯಿಸುತ್ತಲೆ ಬರಲಾಗತ್ತಿದೆ. ಈ ಬಗ್ಗೆ ನಿರ್ಲಕ್ಷ್ಯ ಮಾಡುತ್ತಿರುವ ಬಿಬಿಎಂಪಿ, ಗ್ರಂಥಾಲಯಗಳನ್ನು ವಶಪಡಿಸಿಕೊಳ್ಳಲು ಮುಂದಾಗಿದೆ ಎಂದು ಪುಸ್ತಕ ಪ್ರಾಧಿಕಾರದ ಅಧ್ಯಕ್ಷೆ ವಸುಂಧರಾ ಭೂಪತಿ ಬೇಸರ ವ್ಯಕ್ತಪಡಿಸಿದರು.

ಈಗಾಗಲೆ ಬಿಬಿಎಂಪಿ ಸಮಸ್ಯೆಗಳ ಕೂಪವಾಗಿದೆ. ಮಳೆ ನೀರಿನ ಸಮಸ್ಯೆ, ಕಸ ವಿಂಗಡನೆ ಸೇರಿದಂತೆ ಆರೋಗ್ಯ, ಶಿಕ್ಷಣ ಸೇರಿದಂತೆ ಹಲವಾರು ಕ್ಷೇತ್ರಗಳನ್ನು ಪರಿಣಾಮಕಾರಿಯಾಗಿ ನಿರ್ವಹಿಸುವಲ್ಲಿ ಸೋತಿದೆ. ಇದರ ಜೊತೆಗೆ ಗ್ರಂಥಾಲಯಗಳನ್ನು ಬಿಬಿಎಂಪಿ ಸುಪರ್ದಿಗೆ ಕೊಟ್ಟರೆ ಕೆಲವು ದಿನಗಳಲ್ಲಿ ಗ್ರಂಥಾಲಯಗಳು ಬಾಗಿಲು ಮುಚ್ಚುವ ಅಪಾಯವಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದರು.

ಬಿಬಿಎಂಪಿ ವ್ಯಾಪ್ತಿಯಲ್ಲಿರುವ ಗ್ರಂಥಾಲಯಗಳನ್ನು ಬಿಬಿಎಂಪಿ ಸುಪರ್ದಿಗೆ ವಹಿಸುವಂತೆ ಸರಕಾರಕ್ಕೆ ಸಲ್ಲಿಸಿರುವ ಪ್ರಸ್ತಾವನೆಯನ್ನು ಯಾವುದೆ ಕಾರಣಕ್ಕೂ ಸಮ್ಮತಿಸಬಾರದೆಂದು ಸಾಹಿತಿಗಳ ನಿಯೋಗ ನಾಳೆ ರಾಜ್ಯ ಸರಕಾರದ ಮುಖ್ಯಕಾರ್ಯದರ್ಶಿ ವಿಜಯ್ ಭಾಸ್ಕರ್‌ನ್ನು ಭೇಟಿ ಮಾಡಿ ಒತ್ತಾಯಿಸಲಿದ್ದೇವೆ.

-ವಸುಂಧರಾ ಭೂಪತಿ, ಅಧ್ಯಕ್ಷೆ, ಪುಸ್ತಕ ಪ್ರಾಧಿಕಾರ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News