ಐಎಂಎ ವಂಚನೆ ಪ್ರಕರಣ: ನ್ಯಾಯಕ್ಕಾಗಿ ದಿಲ್ಲಿಗೆ ಪಾದಯಾತ್ರೆಯ ಎಚ್ಚರಿಕೆ

Update: 2019-06-26 16:42 GMT

ಬೆಂಗಳೂರು, ಜೂ.26: ಐಎಂಎ ಕಂಪನಿಯಿಂದ ಕೋಟ್ಯಂತರ ರೂ. ಕಳೆದುಕೊಂಡು ವಂಚನೆಗೊಳಗಾದ ಸಂತ್ರಸ್ತರಿಗೆ ಸರಕಾರ ನ್ಯಾಯ ಕೊಡಿಸದಿದ್ದರೆ ಬೆಂಗಳೂರಿನಿಂದ ದೆಹಲಿವರೆಗೆ ಪಾದಯಾತ್ರೆ ನಡೆಸುವುದಾಗಿ ಜನಪರ ವೇದಿಕೆ ಎಚ್ಚರಿಸಿದೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವೇದಿಕೆಯ ಅಧ್ಯಕ್ಷ ಅಸ್ಲಂ ಪಾಷಾ, ಐಎಂಎ ಹಗರಣದಲ್ಲಿ ಮುಸ್ಲಿಂ ಸಮುದಾಯದ ರಾಜಕಾರಣಿಗಳ ಕುಮ್ಮಕ್ಕು ಇರುವುದು ಸ್ಪಷ್ಟವಾಗಿದೆ. ಶೇ.95ರಷ್ಟು ಬಡವರೇ ಈ ಹಗರಣದಲ್ಲಿ ಸಿಲುಕಿ ಆತ್ಮಹತ್ಯೆಗೆ ಶರಣಾಗುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ. ಮುಸ್ಲಿಂ ಸಮುದಾಯದ ಹೆಸರು ಹೇಳಿ ಅಧಿಕಾರಕ್ಕೆ ಬಂದ ರಾಜಕಾರಣಿಗಳು ಜನರಿಗೆ ಮೋಸ ಮಾಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ಈ ಹಿಂದೆ ನಗರದಲ್ಲಿ 7 ರಿಂದ 8 ಸಂಸ್ಥೆಗಳು ಸಾವಿರಾರು ಕೋಟಿ ರೂ. ಸಂಗ್ರಹಿಸಿ ಜನರಿಗೆ ಟೋಪಿ ಹಾಕಿದ ನಿದರ್ಶನಗಳಿದ್ದರೂ ಸರಕಾರ ಕಣ್ಣುಮುಚ್ಚಿ ಕುಳಿತಿರುವುದು ವಿಪರ್ಯಾಸ. ಜನರ ಜೀವನದ ಜೊತೆ ಚೆಲ್ಲಾಟ ಆಡುತ್ತಿರುವ ರಾಜಕಾರಣಿಗಳ ವಿರುದ್ಧ ಉಗ್ರ ಹೋರಾಟ ಮಾಡುವ ಕಾಲ ಸನ್ನಿತವಾಗಿದೆ. ಸಂತ್ರಸ್ತರಿಗೆ ನ್ಯಾಯ ಒದಗಿಸದಿದ್ದರೆ ಬೆಂಗಳೂರಿನಿಂದ ದಿಲ್ಲಿವರೆಗೆ ಪಾದಯಾತ್ರೆ ನಡೆಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ಕಿಡಿ ಕಾರಿದರು.

ಅಲ್ಲದೆ, ಮುಖ್ಯಮಂತ್ರಿಗಳು ಇನ್ನು ಮುಂದೆ ಇಂತಹ ಹಗರಣಗಳು ನಡೆಯದಂತೆ ಕಠಿಣ ಕ್ರಮ ಕೈಗೊಳ್ಳಬೇಕು. ಜನರನ್ನು ಸ್ವಾರ್ಥಕ್ಕೆ ಬಳಸಿಕೊಂಡು ಬಲಿ ಕೊಡುವ ಇಂತಹ ಸಂಸ್ಥೆಗಳ ಸ್ಥಾಪನೆಗೆ ಅವಕಾಶ ನೀಡಬಾರದು. ಕೂಡಲೇ ಈ ಹಗರಣವನ್ನು ಸಿಬಿಐಗೆ ವಹಿಸಬೇಕೆಂದು ಆಗ್ರಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News