ನಾಯಿಗಳ ಹಿಂಡು ಕಂಡು ಮೇಯರ್ ಗಂಗಾಂಬಿಕೆ ಕೆಂಡಾಮಂಡಲ

Update: 2019-06-26 16:49 GMT
ಸಾಂದರ್ಭಿಕ ಚಿತ್ರ

ಬೆಂಗಳೂರು, ಜೂ.26: ನಗರದ ಆಸ್ಟಿನ್‌ಟೌನ್‌ನ ಬಿಬಿಎಂಪಿ ಶಾಲೆಯ ಆವರಣದಲ್ಲಿ ಮನಸೋ ಇಚ್ಛೆ ಅಡ್ಡಾಡುತ್ತಿದ್ದ 20ಕ್ಕೂ ಹೆಚ್ಚು ನಾಯಿಗಳ ಹಿಂಡನ್ನು ಕಂಡು ಬಿಬಿಎಂಪಿ ಮೇಯರ್ ಗಂಗಾಂಬಿಕೆ ಕೆಂಡಾಮಂಡಲರಾಗಿದ್ದಾರೆ.

ಬುಧವಾರ ನಗರದ ಶಾಲೆಗೆ ಭೇಟಿ ನೀಡಿದ ಸಮಯದಲ್ಲಿ ಶಾಲಾ ಆವರಣದಲ್ಲಿದ್ದ ನಾಯಿಗಳ ಹಿಂಡನ್ನು ಕಂಡು ಸಿಟ್ಟಿಗೆದ್ದ ಮೇಯರ್ ಅವರು, ಶಾಲಾ ಮುಖ್ಯೋಪಧ್ಯಾಯರು ಹಾಗೂ ಪಶುಪಾಲನಾ ವಿಭಾಗದ ಹಿರಿಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಶಾಲಾ ಆವರಣದಲ್ಲೇ ಹೀಗಾದರೆ ಸುತ್ತಮುತ್ತಲಿನ ಪರಿಸ್ಥಿತಿ ಏನು? ನಾಯಿಗಳನ್ನು ಶಾಲೆಗೆ ಏಕೆ ಬಿಟ್ಟಿದ್ದೀರಾ? ಎಂದು ಆಕ್ರೋಶ ವ್ಯಕ್ತಪಡಿಸಿದರಲ್ಲದೆ ತಕ್ಷಣವೇ ನಾಯಿ ಹಿಡಿಯುವವರನ್ನು ಸಂಪರ್ಕಿಸಿ ತಮ್ಮ ಸಮ್ಮುಖದಲ್ಲೇ ನಾಯಿಗಳನ್ನು ಹಿಡಿಸಿ ಸಂತಾನಹರಣ ಚಿಕಿತ್ಸಾ ಕೇಂದ್ರಕ್ಕೆ ರವಾನಿಸಿದರು.

ಶಾಲೆಯ ಆವರಣದಲ್ಲಿ ಮಕ್ಕಳು ತಿಂದು ಉಳಿಯುವ ಊಟವನ್ನು ಹಾಗೂ ಶಾಲೆಯಲ್ಲಿನ ಕಸವನ್ನು ತಕ್ಷಣವೇ ಹೊರ ಸಾಗಿಸಬೇಕು. ಇಲ್ಲದಿದ್ದಲ್ಲಿ ನಾಯಿಗಳು ನೇರವಾಗಿ ಶಾಲೆಗೆ ಪ್ರವೇಶಿಲಿವೆ. ಅಲ್ಲದೆ ಶಾಲೆಯ ಸುತ್ತಮುತ್ತ ಮಾಂಸದ ಅಂಗಡಿಗಳು ಹೆಚ್ಚಿರುವ ಬಗ್ಗೆ ಮಾಹಿತಿಯನ್ನು ಪಡೆದ ಮೇಯರ್ ಲೈಸೆನ್ಸ್ ಇಲ್ಲದ ಮಾಂಸದಂಗಡಿಗಳನ್ನು ಕೂಡಲೇ ಮುಚ್ಚಿಸಬೇಕು. ಮಾಂಸದ ಅಂಗಡಿ ಮಾಲಕರು ಅಳಿದುಳಿದ ಮಾಂಸವನ್ನು ರಸ್ತೆಯಲ್ಲಿ ಬಿಸಾಡದಂತೆ ಎಚ್ಚರಿಕೆ ವಹಿಸಬೇಕೆಂದು ಅಧಿಕಾರಿಗಳಿಗೆ ಸೂಚಿಸಿದರು.

ನಂತರ ಮೇಯರ್ ರೋಜ್‌ಗಾರ್ಡನ್‌ಗೆ ತೆರಳಿ ಅಲ್ಲಿ ನಾಯಿ ಕಚ್ಚಿ ಗಾಯಗೊಂಡಿದ್ದ ಬಾಲಕಿಯ ಆರೋಗ್ಯವನ್ನು ವಿಚಾರಿಸಿ, ಕುಟುಂಬದ ಸದಸ್ಯರನ್ನು ಸಾಂತ್ವನಗೊಳಿಸಿದರಲ್ಲದೆ ಬಾಲಕಿಯ ಚಿಕಿತ್ಸಾ ವೆಚ್ಚವನ್ನು ತಮ್ಮ ಮೇಯರ್ ನಿಧಿಯಿಂದ ಭರಿಸುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಸ್ಥಳೀಯ ಪಾಲಿಕೆ ಸದಸ್ಯ ಶಿವಕುಮಾರ್ ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News