ಜೂ.27ರಂದು ಕೆಎಸ್ಸಾರ್ಟಿಸಿ ನೌಕರರ ಧರಣಿ

Update: 2019-06-26 16:56 GMT

ಬೆಂಗಳೂರು, ಜೂ.26: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ನಾಳೆ, ಜೂ.27ರಂದು ನಗರದ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯ ಬಳಿ ಕೆಎಸ್ಸಾರ್ಟಿಸಿ ಬಸ್ ಚಾಲಕರು ಹಾಗೂ ನಿರ್ವಾಹಕರು ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ನೇತೃತ್ವದಲ್ಲಿ ಪ್ರತಿಭಟನೆ ಹಮ್ಮಿಕೊಂಡಿದ್ದಾರೆ.

ಎಪಿಎಸ್‌ಆರ್‌ಟಿಯಲ್ಲಿನ ಬೆಳವಣಿಗೆಗಳನ್ನು ಆಧರಿಸಿ ಸಾರಿಗೆ ನೌಕರರನ್ನು ಸರಕಾರಿ ನೌಕರರನ್ನಾಗಿ ಮಾಡುವ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕು. ನಾಲ್ಕು ಸಾರಿಗೆಗಳನ್ನು ಒಂದು ಮಾಡಬೇಕು, ಹೊಸ ಇಟಿಎಂ ಯಂತ್ರಗಳನ್ನು ಒದಗಿಸಬೇಕು ಸೇರಿದಂತೆ ಸುಮಾರು 15 ಬೇಡಿಕೆಗಳನ್ನಿಟ್ಟುಕೊಂಡು ಲಾಲ್‌ಬಾಗ್ ಬಳಿಯ ಹಾಪ್‌ಕಾಮ್ಸ್‌ನಿಂದ ಶಾಂತಿನಗರದಲ್ಲಿರುವ ಕೆಎಸ್ಸಾರ್ಟಿಸಿ ಕೇಂದ್ರ ಕಚೇರಿಯ ವರೆಗೂ ಸಾವಿರಾರು ಸಂಖ್ಯೆಯಲ್ಲಿ ಚಾಲಕ ಮತ್ತು ನಿರ್ವಾಹಕರು ಮೆರವಣಿಗೆ ನಡೆಸಲಿದ್ದು, ಬಳಿಕ ಇಲ್ಲಿಯೇ ಪ್ರತಿಭಟನಾ ಧರಣಿ ನಡೆಸಲಿದ್ದಾರೆ.

ರಾಜ್ಯದ ಎಲ್ಲ ನಿಗಮಗಳಿಂದಲೂ ಸಾರಿಗೆ ನೌಕರರು ಪಾಲ್ಗೊಳ್ಳಲಿದ್ದಾರೆ. ಆದರೆ, ಸಾರಿಗೆ ಸಂಚಾರಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ಎಂದಿನಂತೆ ಸಾರಿಗೆ ಸಂಚಾರವಿರಲಿದೆ. ರಜೆಯಲ್ಲಿರುವ ನೌಕರರು ಹಾಗೂ ಕೆಲವರು ರಜೆ ಪಡೆದುಕೊಂಡು ಹೋರಾಟದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಎಐಟಿಯುಸಿ ಮುಖಂಡರು ಸ್ಪಷ್ಟಪಡಿಸಿದ್ದಾರೆ.

ಬೇಡಿಕೆಗಳು: ಐಡಿ ನಂ.148/2005 ಇತ್ಯರ್ಥಪಡಿಸುವುದು. ಎಲ್‌ಎಂಎಸ್ ಮಿಷನ್ ಅನ್ನು ಅಳವಡಿಸುವುದು. ಹೆದ್ದಾರಿಯ ಟೋಲ್ ಫ್ರೀ ಶುಲ್ಕವನ್ನು ರದ್ದುಪಡಿಸಬೇಕು. ಡೀಸೆಲ್ ಮೇಲಿನ ಸುಂಕವನ್ನು ಕಡಿಮೆ ಮಾಡಬೇಕು. ನಿರ್ವಾಹಕರಿಗೆ ಎನ್‌ಐಎನ್‌ಸಿ ಹೆಸರಿನಲ್ಲಿ ಪ್ರಕರಣ ದಾಖಲಿಸುವುದನ್ನು ನಿಲ್ಲಿಸಬೇಕು. ಸಾರಿಗೆ ನೌಕರರಿಗೆ ಸರಕಾರ ವೇತನ ನೀಡಬೇಕು. ನಿಗಮಗಳಿಗೆ ಮೋಟಾರ್ ವೆಹಿಕಲ್ ತೆರಿಗೆ ರಿಯಾಯಿತಿ ನೀಡಬೇಕು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News