ರಕ್ತದಾನದ ಬಗ್ಗೆ ಜಾಗೃತಿ ಅಗತ್ಯ: ಡಾ.ರಾಜು

Update: 2019-06-26 16:59 GMT

ಬೆಂಗಳೂರು, ಜೂ.26: ಇಂದಿನ ಯುವ ಪೀಳಿಗೆಯಲ್ಲಿ ರಕ್ತದಾನದ ಬಗ್ಗೆ ತಪ್ಪು ಕಲ್ಪನೆಗಳಿದ್ದು, ಅದನ್ನು ಹೋಗಲಾಡಿಸಿ ರಕ್ತದಾನ ಮಹತ್ವದ ಕುರಿತು ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ಕರ್ನಾಟಕ ರಾಜ್ಯ ಸ್ವಯಂ ರಕ್ತದಾನಿಗಳ ಒಕ್ಕೂಟದ ಅಧ್ಯಕ್ಷ ಡಾ.ರಾಜು ಚಂದ್ರಶೇಖರ್ ಹೇಳಿದ್ದಾರೆ.

ಬುಧವಾರ ನಗರದ ಗಾಂಧೀ ಭವನದಲ್ಲಿ ರಾಷ್ಟ್ರಪಿತ ಮಹಾತ್ಮಗಾಂಧೀಜಿ ಅವರ 150 ನೇ ಜನ್ಮವರ್ಷಾಚರಣೆ ಅಂಗವಾಗಿ ಆಯೋಜಿಸಿದ್ದ ರಕ್ತದಾನ ಶಿಬಿರ ಹಾಗೂ ಭಿತ್ತಿಚಿತ್ರ ರಚನಾ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಇಂದಿನ ನಮ್ಮ ಮಾರುಕಟ್ಟೆಯಲ್ಲಿ ಎಲ್ಲವೂ ಸಿಗುತ್ತದೆ. ಆದರೆ, ಪ್ರಾಣ ಉಳಿಸುವ ರಕ್ತ ಸಿಗುವುದು ಕಷ್ಟವಾಗುತ್ತಿದೆ. ಆದುದರಿಂದಾಗಿ, ರಕ್ತದಾನಕ್ಕೆ ಯುವ ಜನಾಂಗ ರಾಯಭಾರಿಗಳಾಗುವ ಮೂಲಕ ಹೆಚ್ಚಿನ ಪ್ರಮಾಣದಲ್ಲಿ ರಕ್ತದಾನ ಮಾಡುವ ಮೂಲಕ ಪ್ರಾಣಾಪಾಯದಲ್ಲಿರುವವರನ್ನು ಬದುಕಿಸಲು ಮುಂದಾಗಬೇಕು. ರಕ್ತದಾನದ ಬಗ್ಗೆ ಕಟ್ಟಿಕೊಂಡಿರುವ ತಪ್ಪು ಕಲ್ಪನೆಗಳನ್ನು ನಿರ್ಮೂಲನೆ ಮಾಡಬೇಕು ಎಂದು ಹೇಳಿದರು.

ಮನುಷ್ಯ ಚಂದ್ರನ ಮೇಲೆ ಕಾಲಿಡುವಷ್ಟು ತಂತ್ರಜ್ಞಾನ, ವಿಜ್ಞಾನದಲ್ಲಿ ಮುಂದುವರೆದಿದ್ದಾರೆ. ಆದರೆ, ಯಾವುದೇ ಪ್ರಯೋಗಾಲಯಗಳಲ್ಲಿ ರಕ್ತವನ್ನು ತಯಾರಿಸಲು ಸಾಧ್ಯವಿಲ್ಲ. ಮಾರುಕಟ್ಟೆಯಲ್ಲಿ ಸಿಗುವ ವಸ್ತುವೂ ಅಲ್ಲ. ಹಲವಾರು ಕಾಯಿಲೆಗಳನ್ನು ಗುಣಪಡಿಸಲು ಮನುಷ್ಯನ ದೇಹದಲ್ಲಿರುವ ರಕ್ತದ ಅವಶ್ಯವಿದೆ ಎಂದು ನುಡಿದರು.

ರಾಷ್ಟ್ರೀಯ ಸೇವಾ ಯೋಜನೆಯ ರಾಜ್ಯ ಸಂಪಕಾರ್ಧಿಕಾರಿ ಡಾ.ಗಣನಾಥಶೆಟ್ಟಿ ಎಕ್ಕಾರು ಮಾತನಾಡಿ, ರಾಜ್ಯಕ್ಕೆ, ದೇಶಕ್ಕೆ ಅಗತ್ಯವಿರುವ ರಕ್ತದಲ್ಲಿ ಅರ್ಧದಷ್ಟು ಮಾತ್ರ ಪೂರೈಸಲು ಸಾಧ್ಯವಾಗುತ್ತಿದೆ. ಇದಕ್ಕೆ ಬಹುಮುಖ್ಯ ಕಾರಣ ರಕ್ತದಾನದ ಕುರಿತು ಜನರಲ್ಲಿರುವ ತಪ್ಪು ಕಲ್ಪನೆ. ಅದನ್ನು ಮೊದಲು ಜನರ ತಲೆಯಿಂದ ತೆಗೆದುಹಾಕುವ ಕೆಲಸವಾಗಬೇಕಿದೆ. ಅದು ನಮ್ಮೆಲ್ಲರ ಜವಾಬ್ದಾರಿ ಎಂದು ಭಾವಿಸಿ ಜಾಗೃತಿ ಮೂಡಿಸುವ ಮೂಲಕ ರಕ್ತದಾನಿಗಳ ಸಂಖ್ಯೆ ಹೆಚ್ಚಳ ಮಾಡುವ ಅನಿವಾರ್ಯ ಎದುರಾಗಿದೆ ಎಂದರು.

ಗಾಂಧೀಜಿ ಅವರ 150 ವರ್ಷಾಚರಣೆಯಲ್ಲಿ ರಕ್ತದಾನ ಶಿಬಿರ ಏರ್ಪಡಿಸುವ ಮುಖೇನ ಗಾಂಧೀಜಿ ಅವರಿಗೆ ನಿಜವಾದ ಗೌರವ ಸಲ್ಲಿಸಿದಂತಾಗಿದೆ. ಎಲ್ಲಾ ಕಾಲೇಜುಗಳು ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಹಯೋಗದಲ್ಲಿ ರಕ್ತದಾನ ಶಿಬಿರಗಳನ್ನು, ಕಾರ್ಯಕ್ರಮಗಳನ್ನು ಯೋಜಿಸಬೇಕೆಂದು ಎಲ್ಲ ಕಾಲೇಜುಗಳಿಗೆ ಪತ್ರ ಬರೆಯುತ್ತೇವೆ ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ಕರ್ನಾಟಕ ಗಾಂಧಿ ಸ್ಮಾರಕ ನಿಧಿಯ ಅಧ್ಯಕ್ಷ ಡಾ.ವೂಡೇ ಪಿ.ಕೃಷ್ಣ, ಖ್ಯಾತ ವೈದ್ಯ ಡಾ.ಎಚ್.ಎಸ್.ನರೇಂದ್ರ, ಗೌರವ ಕಾರ್ಯದರ್ಶಿ ಇಂದಿರಾ ಕೃಷ್ಣಪ್ಪ, ಕರ್ನಾಟಕ ಚಿತ್ರಕಲಾ ಪರಿಷತ್ ಪ್ರಾಂಶುಪಾಲ ಪ್ರೊ.ತೇಜೆಂದರ್ ಸಿಂಗ್ ಬಾವನಿ ಸೇರಿದಂತೆ ಮತ್ತಿತರರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News