ಅನಧಿಕೃತ ಜಾಹೀರಾತು ತೆರವು ವಿಚಾರ: ವರದಿ ನೀಡಲು ಸರಕಾರ-ಬಿಬಿಎಂಪಿಗೆ ಹೈಕೋರ್ಟ್ ಆದೇಶ

Update: 2019-06-26 17:42 GMT

ಬೆಂಗಳೂರು, ಜೂ.26: ಬಿಬಿಎಂಪಿ ವ್ಯಾಪ್ತಿಯಲ್ಲಿ ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಲು ಕೋರಿ ಸಲ್ಲಿಸಿದ್ದ ಅರ್ಜಿ ಸಂಬಂಧ ಹೈಕೋರ್ಟ್ ಕರ್ನಾಟಕ ಮುನಿಸಿಪಲ್ ಕಾರ್ಪೋರೇಷನ್ ಕಾಯ್ದೆ(ಕೆಎಂಸಿ)-1976 ಮತ್ತು ಕರ್ನಾಟಕ ಓಪನ್ ಪ್ಲೇಸ್(ಕೆಓಪಿ) ಕಾಯ್ದೆ-1981ರ ಅನ್ವಯ ಕೈಗೊಂಡಿರುವ ಕ್ರಮಗಳ ಕುರಿತು ವರದಿ ನೀಡಲು ರಾಜ್ಯ ಸರಕಾರ ಹಾಗೂ ಬಿಬಿಎಂಪಿಗೆ ಹೈಕೋರ್ಟ್ ಆದೇಶಿಸಿದೆ.

ಈ ಕುರಿತು ಅನಧಿಕೃತ ಜಾಹೀರಾತು ತೆರವುಗೊಳಿಸಲು ಕೋರಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ಮುಖ್ಯ ನ್ಯಾಯಮೂರ್ತಿ ಎ.ಎಸ್.ಓಕಾ ಮತ್ತು ನ್ಯಾಯಮೂರ್ತಿ ಎಚ್.ಟಿ.ನರೇಂದ್ರಪ್ರಸಾದ್ ಅವರಿದ್ದ ವಿಭಾಗೀಯ ನ್ಯಾಯಪೀಠದಲ್ಲಿ ನಡೆಯಿತು. ಅರ್ಜಿದಾರರ ಪರ ವಾದಿಸಿದ ವಕೀಲ ಜಿ.ಆರ್.ಮೋಹನ್ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಜಾಹೀರಾತುಗಳನ್ನು ಹಾಕಬಾರದು. ಕೆಎಂಸಿ ಕಾಯ್ದೆ-1976 ಮತ್ತು ಕೆಓಪಿ ಕಾಯ್ದೆ-1981ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಅನಧಿಕೃತವಾಗಿ ಜಾಹೀರಾತುಗಳನ್ನು ಹಾಕಬಾರದು. ಆದರೆ, ಕಾಯ್ದೆಯನ್ನು ಉಲ್ಲಂಘಿಸಿ ಜಾಹೀರಾತುಗಳನ್ನು ಹಾಕುತ್ತಿದ್ದಾರೆ ಎಂದು ಪೀಠಕ್ಕೆ ತಿಳಿಸಿದರು.

ನಗರದಲ್ಲಿ ಹೊರಾಂಗಣ ಸೈನೇಜ್ ಮತ್ತು ಸಾರ್ವಜನಿಕ ಸಂದೇಶ ಬೈಲಾ 2018ರ ಕರಡನ್ನು ಪರಿಸ್ಕರಿಸಿ ಜಾರಿಗೆ ತರಲಾಗುವುದು ಎಂದು ಬಿಬಿಎಂಪಿ ಹೇಳುತ್ತಲೇ ಇದೆ. ಆದರೆ, ಇಲ್ಲಿಯವರೆಗೆ ಬೈಲಾವನ್ನು ಜಾರಿಗೆ ತಂದಿಲ್ಲ ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಅನಧಿಕೃತ ಜಾಹೀರಾತುಗಳ ಅಳವಡಿಕೆ ಬಗ್ಗೆ ನಗರದ ನಾಗರಿಕರು ದೂರು ನೀಡಿದರೆ, ಬಿಬಿಎಂಪಿ ಜಾಹೀರಾತುದಾರರ ವಿರುದ್ಧ ತಕ್ಷಣ ಕ್ರಮ ಕೈಗೊಳ್ಳಬೇಕು. ಅನಧಿಕೃತ ಜಾಹೀರಾತುಗಳನ್ನು ತೆರವುಗೊಳಿಸಬೇಕೆಂದು ಬಿಬಿಎಂಪಿ ಪರ ವಕೀಲರಿಗೆ ಆದೇಶಿಸಿತು.

ಜಾಹೀರಾತುದಾರರ ಪರ ವಾದಿಸಿದ ವಕೀಲರು, ಬಿಬಿಎಂಪಿ ಕೆಓಪಿ ಕಾಯ್ದೆ-1981ರ ಅನ್ವಯ 1 ವರ್ಷ ಜಾಹೀರಾತು ಅಳವಡಿಕೆಯನ್ನು ನಿಷೇಧಿಸಿ ಆದೇಶ ಹೊರಡಿಸಿದೆ. ಇದರಿಂದ, ಜಾಹೀರಾತು ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದ 5 ಸಾವಿರ ಉದ್ಯೋಗಿಗಳಿಗೆ ಉದ್ಯೋಗವಿಲ್ಲದಂತಾಗಿದೆ ಎಂದು ಪೀಠಕ್ಕೆ ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ನ್ಯಾಯಪೀಠವು ಕಾನೂನು ಏನು ಹೇಳುತ್ತದೆಯೇ ಅದರ ಅನುಸಾರವಾಗಿಯೇ ಬಿಬಿಎಂಪಿ ಜಾಹೀರಾತನ್ನು ತೆರವುಗೊಳಿಸುತ್ತಿದೆ ಎಂದು ತಿಳಿಸಿ, ಕಾಯ್ದೆ ಅನ್ವಯ ಕೈಗೊಂಡಿರುವ ಕ್ರಮಗಳ ಕುರಿತು ಜು.23ರಂದು ವರದಿ ನೀಡಲು ಆದೇಶ ಹೊರಡಿಸಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News