7ನೆ ಆರ್ಥಿಕ ಗಣತಿ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಿ: ಜಿಲ್ಲಾಧಿಕಾರಿ ಬಿ.ಎಂ.ವಿಜಯ್ ಶಂಕರ್

Update: 2019-06-26 18:22 GMT

ಬೆಂಗಳೂರು, ಜೂ. 26: ಜಿಲ್ಲೆಯಲ್ಲಿ ಜುಲೈ ತಿಂಗಳಿಂದ ಪ್ರಾರಂಭಿಸುವ 7ನೆ ಆರ್ಥಿಕ ಗಣತಿಯ ಕಾರ್ಯಕ್ರಮದ ಬಗ್ಗೆ ಸಾರ್ವಜನಿಕರಲ್ಲಿ ಅಧಿಕಾರಿಗಳು ಅರಿವು ಮೂಡಿಸಬೇಕೆಂದು ಜಿಲ್ಲಾಧಿಕಾರಿ ಬಿ.ಎಂ.ವಿಜಯ್‌ಶಂಕರ್ ತಿಳಿಸಿದರು. 

ಬುಧವಾರ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ 7ನೆ ಆರ್ಥಿಕ ಗಣತಿ ಕಾರ್ಯದ ಜಿಲ್ಲಾ ಮಟ್ಟದ ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಗ್ರಾಮೀಣ ಹಾಗೂ ನಗರ ಪ್ರದೇಶಗಳಲ್ಲಿ ಸಾರ್ವಜನಿಕ ಹಾಗೂ ಖಾಸಗಿ ವಲಯದಲ್ಲಿನ ಸಂಘಟಿತ ಹಾಗೂ ಅಸಂಘಟಿತ ಭಾಗಗಳಲ್ಲಿ ಸರಕುಗಳ ಉತ್ಪಾದನೆ, ವಿತರಣೆ, ಮಾರಾಟ, ಸೇವಾ ಚಟುವಟಿಕೆಗಳಿಂದ ಉತ್ಪನ್ನಕ್ಕೆ ಮೌಲ್ಯವನ್ನು ತಂದುಕೊಡುವ ಚಟುವಟಿಕೆಗಳಲ್ಲಿ ತೊಡಗಿರುವ ಉದ್ಯಮಗಳ ಪಟ್ಟಿಯನ್ನು ತಯಾರಿಸುವುದು ಆರ್ಥಿಕ ಗಣತಿಯ ಉದ್ದೇಶ. ಗಣತಿಯ ಸಂಪೂರ್ಣ ಜವಾಬ್ದಾರಿಯನ್ನು ಸಾಮಾನ್ಯ ಸೇವಾ ಕೇಂದ್ರಕ್ಕೆ (ಸಿಎಸ್‌ಸಿ) ವಹಿಸಿದ್ದು, ಅವರ ನೇತೃತ್ವದಲ್ಲಿ ಈಗಾಗಲೆ ಬ್ಲಾಕುಗಳ ರಚನೆಯಾಗಿದ್ದು, ಗಣತಿ ಕಾರ್ಯಕ್ಕೆ ಬಂದಾಗ ಸಾರ್ವಜನಿಕರು ಸಹಕರಿಸಿ, ಕಾರ್ಯವನ್ನು ಯಶಸ್ವಿಗೊಳಿಸಬೇಕು ಎಂದು ಅವರು ತಿಳಿಸಿದರು.

ಮೊದಲ ಗಣತಿ 1977, ಎರಡನೆ ಗಣತಿ 1980, ಮೂರನೆ ಗಣತಿ 1990, ನಾಲ್ಕನೆ ಗಣತಿ 1998, ಐದನೆ ಗಣತಿ 2005, ಆರನೆ ಗಣತಿ 2013-14ರಲ್ಲಿ ಆರ್ಥಿಕ ಮತ್ತು ಸಾಂಖ್ಯಿಕ ನಿರ್ದೇಶನಾಲಯದ ನೇತೃತ್ವದಲ್ಲಿ ನಡೆಸಲಾಗಿತ್ತು. ಏಳನೆ ಆರ್ಥಿಕ ಗಣತಿಯು ಸಿಎಸ್‌ಸಿ, ರಾಷ್ಟ್ರೀಯ ಮಾದರಿ ಸಮೀಕ್ಷಾ ಕೇಂದ್ರ(ಎನ್‌ಎಸ್‌ಎಸ್‌ಓ)ದ ನೇತೃತ್ವದಲ್ಲಿ ಸಂಪೂರ್ಣವಾಗಿ ಮೊಬೈಲ್ ಆಪ್ ಬಳಕೆಯೊಂದಿಗೆ ನಡೆಯುತ್ತದೆ ಎಂದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News