ಸೆಮಿಫೈನಲ್‌ನಲ್ಲಿ ಅವಕಾಶ ದೃಢಪಡಿಸಲು ಭಾರತಕ್ಕೆ ಇನ್ನೊಂದು ಗೆಲುವು ಅಗತ್ಯ

Update: 2019-06-26 18:54 GMT

 ಮ್ಯಾಂಚೆಸ್ಟರ್, ಜೂ. 26: ಸತತ ಗೆಲುವಿನೊಂದಿಗೆ ಅಜೇಯರಾಗಿರುವ ಭಾರತ ಗುರುವಾರ ನಡೆಯಲಿರುವ ವಿಶ್ವಕಪ್‌ನ 34ನೇ ಪಂದ್ಯದಲ್ಲಿ ಚೊಚ್ಚಲ ಆವೃತ್ತಿಯ ಚಾಂಪಿಯನ್ ವೆಸ್ಟ್‌ಇಂಡೀಸ್‌ನ್ನು ಎದುರಿಸಲಿದೆ.

   

ಭಾರತಕ್ಕೆ ಈ ಪಂದ್ಯದಲ್ಲಿ ಗೆಲುವು ದಾಖಲಿಸಿದರೆ ಸೆಮಿಫೈನಲ್ ಪ್ರವೇಶ ಸುಲಭವಾಗುತ್ತದೆ. ಆದರೆ ವೆಸ್ಟ್‌ಇಂಡೀಸ್ ತಂಡ ಅಪಾಯಕಾರಿಯಾಗಿದೆ. ಈ ಕಾರಣದಿಂದಾಗಿ ಕೊಹ್ಲಿ ಪಡೆ ತನ್ನ ದೌರ್ಬಲ್ಯವನ್ನು ಸರಿಪಡಿಸಬೇಕಾಗಿದೆ. ಭಾರತ ಈ ವರೆಗೂ ಟೂರ್ನಿಯಲ್ಲಿ ಸೋಲು ಅನುಭವಿಸಿಲ್ಲವಾದರೂ ಅಫ್ಘಾನಿಸ್ತಾನ ವಿರುದ್ಧ ಸೋಲಿನ ದವಡೆಗೆ ಸಿಲುಕಿತ್ತು. ಆದರೆ ಬೌಲರ್‌ಗಳ ಪ್ರಯತ್ನದಿಂದಾಗಿ ಸೋಲು ತಪ್ಪಿಸಿಕೊಂಡಿತ್ತು. ಭಾರತಕ್ಕೆ ಇನ್ನೂ 4 ಪಂದ್ಯಗಳು ಆಡಲು ಬಾಕಿ ಇವೆ. 10 ದಿನಗಳಲ್ಲಿ ಲೀಗ್ ಹಂತದ 4 ಪಂದ್ಯಗಳನ್ನು ಆಡಬೇಕಾಗಿದೆ. ಭಾರತ ಈ ತನಕ ಅತ್ಯುತ್ತಮ ಫಾರ್ಮ್‌ನಲ್ಲಿದೆ. ಆಡಿರುವ ಐದು ಪಂದ್ಯಗಳ ಪೈಕಿ ನಾಲ್ಕರಲ್ಲಿ ಜಯ ದಾಖಲಿಸಿದೆ.ಆದರೆ ವೆಸ್ಟ್ ಇಂಡೀಸ್ ಬಲಿಷ್ಠ ತಂಡಗಳಾದ ಆಸ್ಟ್ರೇಲಿಯ ವಿರುದ್ದ 15 ರನ್ ಮತ್ತು ನ್ಯೂಝಿಲ್ಯಾಂಡ್ ವಿರುದ್ಧ 5 ರನ್ ಅಂತರದಲ್ಲಿ ಸೋಲು ಅನುಭವಿಸಿದೆ. ತಂಡದ ಮಧ್ಯಮ ಸರದಿಯ ಬ್ಯಾಟಿಂಗ್ ದೌರ್ಬಲ್ಯ ಎದ್ದು ಕಾಣುತ್ತಿದೆ. ಕಾರ್ಲೊಸ್ ಬ್ರಾಥ್‌ವೇಟ್ ನ್ಯೂಝಿಲ್ಯಾಂಡ್ ವಿರುದ್ಧ ಶತಕ ದಾಖಲಿಸಿದ್ದರು. ಕ್ರಿಸ್ ಗೇಲ್, ಎವಿನ್ ಲೂಯಿಸ್, ಶಾಹಿ ಹೋಪ್ , ಶಿಮ್ರಿನ್ ಹೆಟ್ಮೆಯರ್, ನಿಕೋಲಾಸ್ ಪೂರನ್ ಮತ್ತು ಜೇಸನ್ ಹೋಲ್ಡರ್ ಟೂರ್ನಮೆಂಟ್‌ನಲ್ಲಿ ಅರ್ಧಶತಕಗಳನ್ನು ದಾಖಲಿಸಿದ್ದಾರೆ. ಬ್ರಾಥ್‌ವೇಟ್ ವಿಂಡೀಸ್ ಪರ ಶತಕ ದಾಖಲಿಸಿದ ಏಕೈಕ ಆಟಗಾರ. ಭಾರತದ ಬೌಲಿಂಗ್ ವಿಭಾಗ ಬಲಿಷ್ಠವಾಗಿದೆ. ಜಸ್‌ಪ್ರೀತ್ ಬುಮ್ರಾ ಅವರು ಯಾವುದೇ ವಾತಾವರಣದಲ್ಲೂ ಆಡಲು ಶಕ್ತರು. ಕುಲದೀಪ ಯಾದವ್ ಮತ್ತು ಯಜುವೇಂದ್ರ ಚಹಾಲ್ ಅತ್ಯುತ್ತಮ ಸ್ಪಿನ್ನರ್‌ಗಳಾಗಿದ್ದಾರೆ. ಆದರೆ ವೆಸ್ಟ್‌ಇಂಡೀಸ್ ಬಳಿ ಏಕೈಕ ಉತ್ತಮ ಸ್ಪಿನ್ನರ್ ಇದ್ದಾರೆ. ಬ್ಯಾಟಿಂಗ್‌ನಲ್ಲಿ ಭಾರತದ ಅಗ್ರಸರದಿ ಬಲಿಷ್ಠವಾಗಿದೆ. ಈ ವರೆಗಿನ ಎಲ್ಲ ಪಂದ್ಯಗಳಲ್ಲೂ ಅಗ್ರ ಸರದಿಯ ದಾಂಡಿಗರು ಉತ್ತಮ ಫಾರ್ಮ್‌ನಲ್ಲಿದ್ದಾರೆ. ಅಫ್ಘಾನಿಸ್ತಾನದ ವಿರುದ್ಧವೂ ಅಗ್ರ ಸರದಿಯ ದಾಂಡಿಗರು ಉತ್ತಮ ಪ್ರದರ್ಶನ ನೀಡಿದ್ದಾರೆ. ವಿಂಡೀಸ್‌ಗೆ ಎವಿನ್ ಲೂವಿಸ್ ಫಿಟ್‌ನೆಸ್ ಸಮಸ್ಯೆ ಎದುರಿಸುತ್ತಿದ್ದಾರೆ. ಡರೆನ್ ಬ್ರಾವೊ ಮಧ್ಯಮ ಸರದಿಯಲ್ಲಿ ಕಣಕ್ಕಿಳಿಯುವುದನ್ನು ನಿರೀಕ್ಷಿಸಲಾಗಿದೆ. ಹೋಪ್ ಬ್ಯಾಟಿಂಗ್ ಆರಂಭಿಸುವುದನ್ನು ನಿರೀಕ್ಷಿಸಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News