ರಾಜಕಾರಣಿಗಳಿಗೆ ಕೆಂಪೇಗೌಡ ಮಾದರಿಯಾಗಬೇಕು: ಎಸ್.ಆರ್.ವಿಶ್ವನಾಥ್

Update: 2019-06-27 15:02 GMT

ಬೆಂಗಳೂರು, ಜೂ.27: ಇಂದಿನ ರಾಜಕಾರಣಿಗಳು ಅಭಿವೃದ್ಧಿಯಲ್ಲಿ ಬೆಂಗಳೂರು ನಿರ್ಮಾರ್ತೃ ಕೆಂಪೇಗೌಡರ ಆದರ್ಶಗಳನ್ನು ಅಳವಡಿಸಿಕೊಳ್ಳಬೇಕು ಎಂದು ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹೇಳಿದ್ದಾರೆ.

ನಾಡಪ್ರಭು ಕೆಂಪೇಗೌಡರ 509ನೇ ಜನ್ಮದಿನದ ಅಂಗವಾಗಿ ಯಲಹಂಕದಲ್ಲಿನ ಕೆಂಪೇಗೌಡ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಬಳಿಕ ರಥಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಅವರು, ಸ್ಮಾರ್ಟ್ ಸಿಟಿಯ ಪರಿಕಲ್ಪನೆ ಇಂದು ನಿನ್ನೆಯದಲ್ಲ. ಕೆಂಪೇಗೌಡರು 5 ಶತಮಾನಗಳ ಹಿಂದೆಯೆ ವ್ಯವಸ್ಥಿತವಾಗಿ ಬೆಂಗಳೂರು ನಗರವನ್ನು ನಿರ್ಮಿಸಿದ್ದರು. ಪ್ರತಿ ಜಾತಿ ಮತ್ತು ಕಸುಬುಗಳನ್ನು ಆದರಿಸಿ ಪ್ರತ್ಯೇಕ ಪೇಟೆಗಳನ್ನು ನಿರ್ಮಿಸಿ, ಜನರಿಗೆ ವ್ಯವಸ್ಥಿತ ಬದುಕನ್ನು ರೂಪಿಸಿಕೊಟ್ಟಿದ್ದರು ಎಂದು ತಿಳಿಸಿದರು.

ಇಂದಿನ ರಾಜಕಾರಣಿಗಳು ಅವರ ಆದರ್ಶಗಳನ್ನು ಅಳವಡಿಸಿಕೊಂಡರೆ ಮಾದರಿ ನಗರವನ್ನು ನಿರ್ಮಾಣ ಮಾಡಲು ಸಾಧ್ಯವಿದೆ. ಕೆಂಪೇಗೌಡರಿಗೆ ಪರಿಸರದ ಮೇಲೆ ಅಪಾರವಾದ ಕಾಳಜಿಯಿತ್ತು. ಆದುದರಿಂದಾಗಿ ಎಲ್ಲೆಡೆ ಸಾಲು ಸಾಲು ಗಿಡ, ಮರಗಳನ್ನು ಬೆಳೆಸಿದ್ದರು. ನಗರದಲ್ಲಿ ಕೆಂಪಾಂಬುದಿ ಕೆರೆ, ಯಲಹಂಕ ಕೆರೆ ಸೇರಿದಂತೆ ನೂರಾರು ಕೆರೆಗಳನ್ನು ನಿರ್ಮಿಸಿ ನೀರಿಗೆ ತತ್ವಾರ ಬರದಂತೆ ಅಂದಿನ ಕಾಲದಲ್ಲೆ ನೋಡಿಕೊಂಡಿದ್ದರು ಎಂದು ಹೇಳಿದರು.

ನಿರ್ಲಕ್ಷ್ಯ ಸಲ್ಲದು: ರಾಜ್ಯ ಸರಕಾರ ಕೆಂಪೇಗೌಡ ಪ್ರಾಧಿಕಾರ ಆರಂಭಿಸಿ ಎರಡು ವರ್ಷಗಳು ಕಳೆದರೂ ಅದರ ಕಾರ್ಯಚಟುವಟಿಕೆಯಲ್ಲಿ ಪ್ರಗತಿ ಕಾಣುತ್ತಿಲ್ಲ. ಯಾವುದೇ ಪ್ರಾಧಿಕಾರ ರಚನೆ ಮಾಡಿದರೆ ಅದನ್ನು ನಿರ್ಲಕ್ಷ ಮಾಡದೆ ಸಮರ್ಥವಾಗಿ ನಡೆಸಿಕೊಂಡು ಹೋಗಬೇಕು. ನಿರ್ಲಕ್ಷ ತೋರುವುದಾದರೆ ಪ್ರಾಧಿಕಾರಗಳನ್ನ ರಚಿಸುವ ಅಗತ್ಯವಿಲ್ಲ ಎಂದು ಟೀಕಿಸಿದರು.

ನಾಡಪ್ರಭು ಕೆಂಪೇಗೌಡ ಜಯಂತಿಯ ಅಂಗವಾಗಿ ಡೊಳ್ಳು ಕುಣಿತ, ವೀರಗಾಸೆ, ತಮಟೆ ವಾದ್ಯ ಸೇರಿದಂತೆ ಹಲವಾರು ಜಾನಪದ ತಂಡಗಳಿಂದ ಮೆರವಣಿಗೆ ಮಾಡಲಾಯಿತು. ಬೀದಿ ಬೀದಿಯಲ್ಲಿ ಸುವರ್ಣ ರಥದ ಮೂಲಕ ಜಾಥ ನಡೆಸಲಾಯಿತು. ಈ ಸಂದರ್ಭದಲ್ಲಿ ಒಕ್ಕಲಿಗರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಹಲವರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News