ಐಎಂಎ ಬಹುಕೋಟಿ ವಂಚನೆ ಪ್ರಕರಣ; ಸೂಪರ್ ಮಾರ್ಕೆಟ್‌ಗಳ ಮೇಲೂ ದಾಳಿ

Update: 2019-06-27 15:12 GMT

ಬೆಂಗಳೂರು, ಜೂ.27: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಆರೋಪಿ ಮನ್ಸೂರ್ ಖಾನ್ ಮಾಲಕತ್ವದ ಉದ್ಯಮಗಳ ಮೇಲೆ ದಾಳಿ ಮುಂದುವರೆಸಿರುವ ಸಿಟ್(ಎಸ್‌ಐಟಿ), ಮಲ್ಬೇರಿ ಗ್ರೀನ್ಸ್ ಸೂಪರ್ ಮಾರ್ಕೆಟ್ ಹಾಗೂ ಫ್ರಂಟ್‌ಲೈನ್ ಸೆಂಟ್ರಲ್ ವೇರ್‌ಹೌಸ್ ಬೃಹತ್ ಮಳಿಗೆಗಳ ಮೇಲೆ ಗುರುವಾರ ದಾಳಿ ನಡೆಸಿದೆ.

ಇಲ್ಲಿನ ಮಾರುತಿ ಸೇವಾನಗರ ವ್ಯಾಪ್ತಿಯ ಥಾಮಸ್ ಟೌನ್‌ನಲ್ಲಿದ್ದ ಮಲ್ಬೇರಿ ಗ್ರೀನ್ಸ್ ಸೂಪರ್ ಮಾರ್ಕೆಟ್ ಬೃಹತ್ ಮಳಿಗೆ ಮೇಲೆ ಡಿವೈಎಸ್ಪಿ ಕೆ.ರವಿಶಂಕರ್ ನೇತೃತ್ವದಲ್ಲಿ ದಾಳಿ ನಡೆದಿದ್ದು, 45 ಲಕ್ಷ ಮೌಲ್ಯದ ದಿನಬಳಕೆ ಹಾಗೂ ಗೃಹೋಪಯೋಗಿ ವಸ್ತುಗಳನ್ನು ಜಪ್ತಿ ಮಾಡಲಾಗಿದೆ.

ಅದೇ ರೀತಿ, ಬಿಟಿಎಂ 2ನೇ ಹಂತದಲ್ಲಿರುವ ಮತ್ತೊಂದು ಮಲ್ಬೇರಿ ಗ್ರೀನ್ಸ್ ಸೂಪರ್ ಮಾರ್ಕೆಟ್ ಬೃಹತ್ ಮಳಿಗೆ ಮೇಲೂ ಡಿವೈಎಸ್ಪಿ ಜಿ.ಟಿ.ಶ್ರೀನಿವಾಸ್ ನೇತೃತ್ವದ ತಂಡ ದಾಳಿ ನಡೆಸಿ, 68 ಲಕ್ಷ ರೂ. ಮೌಲ್ಯದ ಮಾಲು ಹಾಗೂ 41 ಸಾವಿರ ರೂ. ನಗದು, ಕಂಪ್ಯೂಟರ್‌ಗಳನ್ನು ವಶಕ್ಕೆ ಪಡೆಯಲಾಗಿದೆ.

ಡಿವೈಎಸ್ಪಿ ಅನಿಲ್ ಕುಮಾರ್ ನೇತೃತ್ವದಲ್ಲಿ ಟ್ಯಾನರಿ ರಸ್ತೆಯ ಫ್ರಂಟ್‌ಲೈನ್ ಸೆಂಟ್ರಲ್ ವೇರ್‌ಹೌಸ್ ಮೇಲೆ ದಾಳಿ ನಡೆಸಿದ ತನಿಖಾಧಿಕಾರಿಗಳು, 15 ಲಕ್ಷ ಮೌಲ್ಯದ ಔಷಧಿ ಉಪಕರಣ, ಔಷಧಿ ಹಾಗೂ ಸೌಂದರ್ಯ ವರ್ಧಕಗಳನ್ನು ಜಪ್ತಿ ಮಾಡಿ ತನಿಖೆ ಮುಂದುವರೆಸಲಾಗಿದೆ ಎಂದು ಸಿಟ್ ತನಿಖಾಧಿಕಾರಿ ಎಸ್.ಗಿರೀಶ್ ತಿಳಿಸಿದ್ದಾರೆ.

ಮತ್ತೊಂದು ಐಎಂಎ?
ಐಎಂಎ ಮಾದರಿಯಲ್ಲಿಯೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಹಣ ಹೂಡಿಕೆ ಮಾಡಿದರೆ, ಆದಾಯ ನೀಡುವುದಾಗಿ ನಂಬಿಸಿ, 50 ಕುಟುಂಬಗಳಿಗೆ ವಂಚಿಸಿರುವ ಪ್ರಕರಣವೊಂದು ತಡವಾಗಿ ಬೆಳಕಿಗೆ ಬಂದಿದೆ.

ಈ ಸಂಬಂಧ ನಗರ ಪೊಲೀಸ್ ಆಯುಕ್ತರಿಗೆ ವಂಚನೆಗೊಳದವರು, ದೂರು ನೀಡಿದ್ದು, ಸ್ಟಾಕ್ ಎಕ್ಸೇಂಜ್ ಹೆಸರಿನಲ್ಲಿ ಬಾಣಸವಾಡಿಯ ವೆಂಕಟರಾಘುವೇಂದ್ರ ಎಂಬಾತ 50 ಕೋಟಿಗೂ ಅಧಿಕ ಮೊತ್ತ ಹಣ ವಂಚಿಸಿರುವುದಾಗಿ ಹೇಳಲಾಗುತ್ತಿದೆ.

ವಂಚನೆ ಸಂಬಂಧ ಈಗಾಗಲೇ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಆರೋಪಿ ವೆಂಕಟರಾಘವೇಂದ್ರ ವಿರುದ್ಧ ಕ್ರಮ ಜರುಗಿಸಿ, ಹಣ ವಾಪಸ್ಸು ನೀಡುವಂತೆ ಕೋರಿ, ಆಯುಕ್ತರಿಗೆ ಮನವಿ ಮಾಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News