ದಯಾನತ್ ಖಾನ್ ಹತ್ಯೆ ಪ್ರಕರಣ; ನ್ಯಾಯಾಂಗ ತನಿಖೆಗೆ ಪಾಪ್ಯುಲರ್ ಫ್ರಂಟ್ ಆಗ್ರಹ
ಬೆಂಗಳೂರು, ಜೂ.27: ದಾವಣಗೆರೆ ಜಿಲ್ಲೆ ಹೊನ್ನಾಳಿಯ ದಯಾನತ್ ಖಾನ್ ಯುವಕನ ಬರ್ಬರ ಹತ್ಯೆ ಪ್ರಕರಣವನ್ನು ರಾಜ್ಯ ಸರಕಾರವು ಗಂಭೀರವಾಗಿ ಪರಿಗಣಿಸಿ ನ್ಯಾಯಾಂಗ ತನಿಖೆಗೊಳಪಡಿಸಿ, ಸಂತ್ರಸ್ತ ಕುಟುಂಬಕ್ಕೆ ಪರಿಹಾರ ಮೊತ್ತವನ್ನು ಘೋಷಿಸಬೇಕೆಂದು ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ ಆಗ್ರಹಿಸಿದೆ.
ಈ ಹತ್ಯೆ ಪ್ರಕರಣವನ್ನು ಸ್ಥಳೀಯ ಘಟನೆ ಎಂಬಂತೆ ಪೊಲೀಸರು ತನಿಖೆ ನಡೆಸುತ್ತಿದ್ದು, ಪ್ರೇಮ ಪ್ರಕರಣಕ್ಕೆ ಸಂಬಂಧಿಸಿದ ಕೊಲೆ ಎಂಬ ಪ್ರಚಾರ ನಡೆಸಿದ್ದಾರೆ. ಅಲ್ಲದೆ ಇಬ್ಬರು ಆರೋಪಿಗಳನ್ನು ಬಂಧಿಸಿ ಪ್ರಕರಣವನ್ನು ಮುಚ್ಚಿಹಾಕಲು ಪ್ರಯತ್ನಿಸುತ್ತಿದ್ದಾರೆ. ಮೃತ ದಯಾನತ್ ಖಾನ್ ತನ್ನ ವಾಟ್ಸ್ ಆ್ಯಪ್ ಸ್ಟೇಟಸ್‌ನಲ್ಲಿ ಹಾಕಿದ್ದ ಮಿಲಾದ್ ಹಸಿರು ಧ್ವಜವನ್ನು ಆಕ್ಷೇಪಿಸಿ ನಡೆದ ಹತ್ಯೆ ಕೃತ್ಯ ಇದಾಗಿದ್ದು, ಅಕ್ರಮ ಕೂಟವು ಸಂಚು ಹೂಡಿ ನಡೆಸಿದ ಪೂರ್ವಯೋಜಿತ ಕೃತ್ಯವಾಗಿದೆ. ಈಗಾಗಲೇ ದಯಾನತ್ ಖಾನ್ ತಾಯಿ ಹೆಸರಿಸಿರುವ ಪ್ರಕರಣದ ಎಲ್ಲ ಆರೋಪಿಗಳನ್ನು ಬಂಧಿಸಿ ಈ ಕೃತ್ಯದ ಹಿಂದಿರುವ ಸಂಚನ್ನು ಬಯಲಿಗೆಳೆಯಬೇಕು ಎಂದು ಪಾಪ್ಯುಲರ್ ಫ್ರಂಟ್ ಒತ್ತಾಯಿಸಿದೆ.
ದೇಶಾದ್ಯಂತ ಮುಸ್ಲಿಮರನ್ನು ಗುರಿಯಾಗಿಸಿ ಗುಂಪು ಹತ್ಯೆ ಪ್ರಕರಣಗಳು ವರದಿಯಾಗುತ್ತಿದ್ದು, ರಾಜ್ಯದಲ್ಲೂ ಇದರ ಸಂಚು ನಡೆಯುತ್ತಿರುವ ಬಗ್ಗೆ ಸಂಶಯಗಳು ದಟ್ಟವಾಗುತ್ತಿವೆ. ಕಳೆದ ಮೇ ತಿಂಗಳು ಚಿತ್ರದುರ್ಗದಲ್ಲಿ ಬಜರಂಗದಳದ ವತಿಯಿಂದ ತ್ರಿಶೂಲಧೀಕ್ಷೆ ತರಬೇತಿ ನಡೆಸಲಾಗಿತ್ತು, ಈ ಕಾರ್ಯಕ್ರಮದಲ್ಲಿ ರಾಜ್ಯದ ಹಲವಾರು ಬಜರಂಗದಳದ ಕಾರ್ಯಕರ್ತರು ಭಾಗಿಯಾಗಿದ್ದರು. ಇದರಲ್ಲಿ ಭಾಗಿಯಾದ್ದವರಿಂದಲೇ ದಯಾನತ್ ಖಾನ್ ಹತ್ಯೆ ನಡೆದಿರುವ ಬಗ್ಗೆಯೂ ಸೂಕ್ತ ತನಿಖೆ ನಡೆಯಬೇಕು.
ದಯಾನತ್ ಖಾನ್‌ನ ಮೃತದೇಹದಲ್ಲಿ 30ಕ್ಕೂ ಹೆಚ್ಚು ಇರಿತದ ಗಾಯಗಳಿದ್ದು, ಅದು ಕೇವಲ ಇಬ್ಬರು ಆರೋಪಿಗಳು ಒಂದು ಚಾಕುವಿನಿಂದ ನಡೆಸಿದ ಕೃತ್ಯವಾಗಿರಲು ಸಾಧ್ಯವಿಲ್ಲ. ಕೊಲೆಗೆ ಬಳಸಿದ ಮಾರಕಾಯುಧವನ್ನು ಪತ್ತೆಹಚ್ಚಿ, ಇದರ ಹಿಂದಿರುವ ನಿಗೂಢ ಸಂಚನ್ನು ಬಯಲಿಗೆಳೆದು ರಾಜ್ಯದಲ್ಲಿ ಮತ್ತಷ್ಟು ಕೃತ್ಯಗಳು ಮರುಕಳಿಸದಂತೆ ನಿಗ್ರಹಿಸುವುದು ರಾಜ್ಯ ಸರಕಾರದ ಜವಾಬ್ದಾರಿಯಾಗಿದೆ.
ದಯಾನತ್ ಖಾನ್ ಹತ್ಯೆ ಪ್ರಕರಣವನ್ನು ಸರಕಾರವು ಗಂಭೀರವಾಗಿ ಪರಿಗಣಿಸಿ ಅದರ ಹಿಂದಿರುವ ಎಲ್ಲ ಆರೋಪಿಗಳನ್ನು ಮತ್ತು ಷಡ್ಯಂತ್ರಗಳನ್ನು ಪತ್ತೆ ಹಚ್ಚಿ ಕಾನೂನು ಕ್ರಮ ಜರುಗಿಸಬೇಕು ಎಂದು ಪಾಪ್ಯುಲರ್ ಫ್ರಂಟ್‌ನ ರಾಜ್ಯ ಪ್ರಧಾನ ಕಾರ್ಯದರ್ಶಿ ನಾಸಿರ್ ಪಾಶ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.