ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ‘ಬೆಂಗಳೂರು ಚಲೋ’

Update: 2019-06-27 18:11 GMT

ಬೆಂಗಳೂರು, ಜೂ.27: ಸಾರಿಗೆ ನೌಕರರ ಹಿತಕಾಯದ ಸಚಿವ ಡಿ.ಸಿ.ತಮ್ಮಣ್ಣ ಈ ಕೂಡಲೇ ರಾಜೀನಾಮೆ ನೀಡಬೇಕು. ಜೊತೆಗೆ, ಸರಕಾರಿ ನೌಕರರನ್ನಾಗಿ ಘೋಷಿಸುವಂತೆ ಆಗ್ರಹಿಸಿ ಕೆಎಸ್ಸಾರ್ಟಿಸಿ, ಬಿಎಂಟಿಸಿ ಸೇರಿ ನಾಲ್ಕು ವಿಭಾಗೀಯ ಸಾರಿಗೆ ನೌಕರರು ‘ಬೆಂಗಳೂರು ಚಲೋ’ ಧರಣಿ ಮೆರವಣಿಗೆ ನಡೆಸಿದರು.

ಗುರುವಾರ ನಗರದ ಲಾಲ್‌ಬಾಗ್ ಪ್ರವೇಶ ದ್ವಾರದ ಮುಂಭಾಗ ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್ ನೇತೃತ್ವದಲ್ಲಿ ಶಾಂತಿನಗರದ ಕೆಎಚ್ ರಸ್ತೆವರೆಗೂ ಮೆರವಣಿಗೆ ನಡೆಸಿದ ನೌಕರರು, ಸರಕಾರ ಎಚ್ಚೆತ್ತು ನೌಕರರ ಬೇಡಿಕೆಗಳನ್ನು ಈಡೇರಿಸಲು ಮುಂದಾಗುವಂತೆ ಘೋಷಣೆ ಕೂಗಿದರು.

ಡಿ.ಸಿ.ತಮ್ಮಣ್ಣ ಅವರು ಸಾರಿಗೆ ಇಲಾಖೆಯ ಸಚಿವರಾಗಿ ಒಂದು ವರ್ಷ ಕಳೆದರೂ ನೌಕರರ ಹಿತಕಾಯುವಲ್ಲಿ ಸಂಪೂರ್ಣ ವಿಫಲವಾಗಿದ್ದಾರೆ. ತಮ್ಮಣ್ಣ ಅವರು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಅವರ ಸಂಬಂಧಿ ಆಗಿರುವ ಹಿನ್ನೆಲೆ, ಮುಖ್ಯಮಂತ್ರಿಯೂ ಅವರನ್ನು ಪ್ರಶ್ನಿಸುವ ಹಕ್ಕು ಕಳೆದುಕೊಂಡಿದ್ದಾರೆ ಎಂದು ನೌಕರರು ಆರೋಪಿಸಿದರು.

ರಾಜ್ಯ ವ್ಯಾಪ್ತಿಯ ಕೆಎಸ್ಸಾರ್ಟಿಸಿ, ಬಿಎಂಟಿಸಿ, ಎನ್‌ಡಬ್ಲೂಕೆಆರ್‌ಟಿಸಿ, ಎನ್‌ಇಟಿ ಕೆಆರ್‌ಟಿಸಿಯಲ್ಲಿ ಸುಮಾರು 1.25 ಲಕ್ಷ ನೌಕರರು ಕಾರ್ಯ ನಿರ್ವಹಿಸುತ್ತಿದ್ದು, ಉತ್ತಮ ಸೇವೆ ಮೂಲಕ ಸಂಸ್ಥೆಗೆ ರಾಷ್ಟ್ರೀಯ ಪ್ರಶಸ್ತಿಗಳನ್ನು ತಂದು ಕೊಟ್ಟಿದ್ದಾರೆ. ಇದರ ನಡುವೆ ವೇತನ, ಪಿಂಚಣಿ, ಆರೋಗ್ಯ ಮತ್ತಿತರೆ ಸೇವಾ ಭತ್ತೆಗಳಲ್ಲಿನ ತಾರತಮ್ಯದಿಂದ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಬೇಸರ ವ್ಯಕ್ತಪಡಿಸಿದರು.

ಸರಕಾರಿ ನೌಕರಿ: ವಿಧಾನಸಭಾ ಚುನಾವಣೆ ಪೂರ್ವ ರಾಮನಗರದಲ್ಲಿ ನಡೆದ ಸಮಾರಂಭದಲ್ಲಿ ಎಚ್.ಡಿ.ಕುಮಾರಸ್ವಾಮಿ, ತಮ್ಮ ಸರಕಾರ ಅಧಿಕಾರಕ್ಕೆ ಬಂದರೆ ಸಂಸ್ಥೆಯ ಎಲ್ಲ ಸಿಬ್ಬಂದಿಯನ್ನು ಸರಕಾರಿ ನೌಕರರನ್ನಾಗಿ ಘೋಷಿಸುವ ಭರವಸೆ ನೀಡಿದ್ದರು. ಸದ್ಯ ಕುಮಾರಸ್ವಾಮಿ ಮುಖ್ಯಮಂತ್ರಿಯಾಗಿದ್ದಾರೆ. ಆದರೆ, ಈವರೆಗೂ ನಮ್ಮ ಬೇಡಿಕೆಗಳನ್ನು ಈಡೇರಿಸಿಲ್ಲ ಎಂದು ಹೇಳಿದರು.

ಸಾರಿಗೆ ನಿಗಮಗಳು ಖರೀದಿಸುವ ಡೀಸೆಲ್ ಮೇಲೆ ರಾಜ್ಯ ಸರಕಾರ ವಿಧಿಸುವ ಸುಂಕವನ್ನು ಶೇಕಡಾ 50ರಷ್ಟು ಭಾಗ ಕಡಿಮೆ ಮಾಡಬೇಕು. ನಾಲ್ಕೂ ಸಾರಿಗೆ ನಿಗಮಗಳನ್ನು ಒಂದು ಮಾಡಬೇಕು ಎಂದು ಒತ್ತಾಯಿಸಿದ ನೌಕರರು, ನಿಗಮಗಳ ವಾಹನಗಳಿಗೆ ಹೆದ್ದಾರಿ ಸುಂಕ ರದ್ದು ಪಡಿಸಬೇಕು. ನಿಗಮಗಳ ನೌಕರರ ವೇತನವನ್ನು ಸರಕಾರವೇ ಪಾವತಿಸಿ, 4 ನಿಗಮಗಳಿಗೆ ವಾರ್ಷಿಕ ಒಂದು ಸಾವಿರ ಕೋಟಿ ರೂಪಾಯಿ ಅನುದಾನ ನೀಡಬೇಕೆಂದು ಪಟ್ಟು ಹಿಡಿದರು.

'25 ಲಕ್ಷ ಪರಿಹಾರ ನೀಡಿ'
ಕಳೆದ ಹತ್ತಾರು ವರ್ಷಗಳಿಂದ ಸಾರಿಗೆ ನಿಗಮಗಳಲ್ಲಿ ಕಾರ್ಯ ಸ್ಥಳದಲ್ಲಿ ಹಿಂಸೆ, ಕಿರುಕುಳಗಳನ್ನು ತಾಳಲಾರದೆ ಹತಾಶರಾಗಿ ಆತ್ಮಹತ್ಯೆಗೆ ಬಲಿಯಾದ ಸಂತ್ರಸ್ತ ಕುಟುಂಬಕ್ಕೆ 25 ಲಕ್ಷ ರೂ. ಪರಿಹಾರ ನೀಡಬೇಕು, ಬದುಕುಳಿದ ನೌಕರನ ವಿರುದ್ಧ ಯಾವುದೇ ಶಿಸ್ತು ಕ್ರಮ ಜರಗಿಸಬಾರದೆಂದು ನೌಕರರು ಒತ್ತಾಯಿಸಿದರು.

ಬೇಡಿಕೆ ಈಡೇರಿಸಿ
►4 ಸಾರಿಗೆ ನಿಗಮಗಳ ವಾಹನಗಳಿಗೆ ಹೆದ್ದಾರಿ ಸುಂಕ ರದ್ದುಗೊಳಿಸಬೇಕು
►ನಿಗಮಗಳ ನೌಕರರ ವೇತನವನ್ನು ಸರಕಾರವೇ ಪಾವತಿಸಬೇಕು
►4 ನಿಗಮಗಳಿಗೆ ವಾರ್ಷಿಕ 1 ಸಾವಿರ ಕೋಟಿ ರೂ.ಅನುದಾನ ನೀಡಬೇಕು
►ಸಾರಿಗೆ ನಿಗಮಗಳು ಖರೀದಿಸುವ ಡೀಸೆಲ್ ಮೇಲೆ ರಾಜ್ಯ ಸರಕಾರ ವಿಧಿಸುವ ಸುಂಕ ಕಡಿಮೆಗೊಳಿಸಬೇಕು
►4 ಸಾರಿಗೆ ನಿಗಮಗಳನ್ನು ಒಂದು ಮಾಡಬೇಕು

ಸಾಮಾಜಿಕ ಹೊಣೆಗಾರಿಕೆಗಳ ಸಂಪೂರ್ಣ ವೆಚ್ಚವನ್ನು ಸರಕಾರ ಸಾರಿಗೆ ನಿಗಮಗಳಿಗೆ ಕೊಡಬೇಕು. ವಿದ್ಯಾರ್ಥಿಗಳ ರಿಯಾಯಿತಿ ಬಸ್ ಪಾಸಿನ ಬಾಬ್ತಿನಲ್ಲಿ ಬಾಕಿ ಇರುವ ಹಣವನ್ನು ಸಾರಿಗೆ ನಿಗಮಗಳಿಗೆ ಸರಕಾರ ತಕ್ಷಣ ಪಾವತಿಸಬೇಕು
-ಎಚ್.ವಿ.ಅನಂಸುಬ್ಬರಾವ್, ಪ್ರಧಾನ ಕಾರ್ಯದರ್ಶಿ, ಕೆಎಸ್ಸಾರ್ಟಿಸಿ ಸ್ಟಾಫ್ ಅಂಡ್ ವರ್ಕರ್ಸ್ ಫೆಡರೇಷನ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News