×
Ad

ಆರು ಲಕ್ಷ ಮೆಟ್ರೋ ಸ್ಮಾರ್ಟ್‌ಕಾರ್ಡ್ ಖರೀದಿ

Update: 2019-06-27 23:50 IST

ಬೆಂಗಳೂರು, ಜೂ.27: ನಮ್ಮ ಮೆಟ್ರೋ ರೈಲು ಪ್ರಯಾಣಿಕರಲ್ಲಿ ಸ್ಮಾರ್ಟ್‌ಕಾರ್ಡ್‌ಗಳನ್ನು ಬಳಸುವವರ ಸಂಖ್ಯೆ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಬಿಎಂಆರ್‌ಸಿಎಲ್ ಸುಮಾರು ಆರು ಲಕ್ಷ ಸ್ಮಾರ್ಟ್‌ಕಾರ್ಡ್‌ಗಳ ಖರೀದಿಗೆ ಮುಂದಾಗಿದೆ.

ಮೆಟ್ರೋ ರೈಲುಗಳಲ್ಲಿ ಸಾಲಿನಲ್ಲಿ ನಿಂತು ಟೋಕನ್ ಪಡೆದು ಪ್ರಯಾಣ ಮಾಡುವವರಿಗಿಂತ ಸ್ಮಾರ್ಟ್ ಕಾರ್ಡ್‌ಗಳನ್ನು ಬಳಸಿ ಪ್ರಯಾಣಿಸುವವರ ಸಂಖ್ಯೆ ಅಧಿಕವಿದೆ. ಅದರಂತೆ ಶೇ.50 ರಷ್ಟು ಜನರು ಸ್ಮಾರ್ಟ್ ಕಾರ್ಡ್ ಬಳಕೆ ಮಾಡುತ್ತಿದ್ದರು. ಇದೀಗ ಅದರ ಸಂಖ್ಯೆ ಶೇ.60ಕ್ಕೆ ಏರಿಕೆಯಾಗಿದೆ. ಕಾರ್ಡ್ ಬಳಸುವ ಎಲ್ಲರಿಗೂ ಶೇ.15 ರಷ್ಟು ರಿಯಾಯತಿ ನೀಡುತ್ತಿರುವುದರಿಂದ ಸ್ಮಾರ್ಟ್‌ಕಾರ್ಡ್ ಪಡೆಯುವವರ ಸಂಖ್ಯೆ ಅಧಿಕವಿದೆ.

ಎರಡನೆ ಹಂತದಲ್ಲಿ ಯಲಚೇನಹಳ್ಳಿ-ಅಂಜನಾಪುರ ಹಾಗೂ ಮೈಸೂರು ರಸ್ತೆ-ಕೆಂಗೇರಿ ಮಾರ್ಗಗಳ ಮೂಲಕ ವಾಣಿಜ್ಯ ಸಂಚಾರ 2020 ರಿಂದ ಅರಂಭವಾಗುವ ಸಾಧ್ಯತೆಯಿದೆ. ಹೀಗಾಗಿ, ಪ್ರಯಾಣಿಕರ ಸಂಖ್ಯೆಯೂ ಅಧಿಕವಾಗಲಿದೆ. ಆದುದರಿಂದಾಗಿ ಈಗ ಖರೀದಿ ಮಾಡುತ್ತಿರುವ ಕಾರ್ಡ್‌ಗಳು ಈ ಮಾರ್ಗದ ಪ್ರಯಾಣಿಕರಿಗೆ ಅನುಕೂಲವಾಗಲಿದೆ.

2019 ಫೆಬ್ರವರಿಯಲ್ಲಿ 1.06 ಕೋಟಿ, ಮಾರ್ಚ್‌ನಲ್ಲಿ 1.13 ಕೋಟಿ, ಎಪ್ರಿಲ್‌ನಲ್ಲಿ 1.10 ಕೋಟಿ, ಮೇನಲ್ಲಿ 1.18 ಕೋಟಿ ಜನ ಪ್ರಯಾಣಿಕರು ಮೆಟ್ರೋನಲ್ಲಿ ಪ್ರಯಾಣಿಸಿದ್ದಾರೆ. ಅಲ್ಲದೆ, ಟಿಕೆಟ್‌ನಿಂದ ಬಂದ ಆದಾಯವೂ ಹೆಚ್ಚಳವಾಗಿದ್ದು, ಮೇನಲ್ಲಿಯೇ ಸುಮಾರು 32 ಕೋಟಿ ರೂ.ಗಳಷ್ಟು ಆದಾಯ ಸಂಗ್ರಹವಾಗಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News