ರಾಜ್ಯದಲ್ಲಿ ಶೀಘ್ರವೇ ಕೈಗಾರಿಕಾ ನೀತಿ: ಡಾ.ಜಿ.ಪರಮೇಶ್ವರ್

Update: 2019-06-28 13:39 GMT

ಬೆಂಗಳೂರು, ಜೂ.28: ರಾಜ್ಯದಲ್ಲಿ ಮುಂದಿನ 2019-2024 ಸಾಲಿನಲ್ಲಿ ಕೈಗಾರಿಕಾ ನೀತಿ ತರಲಾಗುತ್ತಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್ ಹೇಳಿದ್ದಾರೆ.

ಶುಕ್ರವಾರ ನಗರದ ಕರ್ನಾಟಕ ವಾಣಿಜ್ಯ ಮತ್ತು ಕೈಗಾರಿಕಾ ಮಹಾ ಸಂಸ್ಥೆ (ಎಫ್‌ಕೆಸಿಸಿಐ) 102 ನೇ ಸಾಮಾನ್ಯ ಸಭೆಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕರ್ನಾಟಕ ಕೈಗಾರಿಕೆ, ಶಿಕ್ಷಣ ಸೇರಿದಂತೆ ಇತರೆ ಕ್ಷೇತ್ರದಲ್ಲಿ 4 ನೆ ಸ್ಥಾನದಲ್ಲಿ ಇದೆ. ಅದರಲ್ಲೂ ಕೈಗಾರಿಕಾ ಕ್ಷೇತ್ರ ಅತಿ ವೇಗವಾಗಿ ಬೆಳೆಯುತ್ತಿದೆ. ಇದಕ್ಕಾಗಿ ಕೈಗಾರಿಕಾ ನೀತಿಯನ್ನು ತರಲಾಗುತ್ತಿದೆ ಎಂದು ತಿಳಿಸಿದರು.

ತುಮಕೂರು ಜಿಲ್ಲೆಯು ಏಷ್ಯಾದ ಅತಿದೊಡ್ಡ ಕೈಗಾರಿಕಾ ಹಬ್ ಆಗಿ ಹೊರಹೊಮ್ಮಲಿದೆ. ತುಮಕೂರು ನಗರ ಏಷ್ಯಾದಲ್ಲಿಯೇ ಅತಿದೊಡ್ಡ ಕೈಗಾರಿಕಾ ನಗರವಾಗಿ ರೂಪಗೊಳ್ಳುತ್ತಿದ್ದು, ಈ ನಗರಕ್ಕೆ ಅಗತ್ಯವಾದ ರೈಲು ಸೇವೆ ಹಾಗೂ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಲು ಸರಕಾರ ಸಂಪೂರ್ಣ ಬದ್ಧವಾಗಿದೆ ಎಂದು ನುಡಿದರು.

ತುಮಕೂರಿನಲ್ಲಿ ಈಗಾಗಲೇ 18 ಸಾವಿರ ಎಕರೆ ಪ್ರದೇಶ ವಶಪಡಿಸಿಕೊಂಡಿದ್ದು, 105 ಕಂಪನಿಗಳು ಹೂಡಿಕೆಗೆ ಮುಂದಾಗಿವೆ. ಬೆಂಗಳೂರಿನಿಂದ ತುಮಕೂರಿಗೆ ಸಬ್ ಅರ್ಬನ್ ರೈಲು ತರಲು ಚಿಂತಿಸಲಾಗಿದೆ. ಅಂತೆಯೇ ಮೆಟ್ರೋ ರೈಲು ತುಮಕೂರು ಸಮೀಪಕ್ಕೆ ವಿಸ್ತರಿಸಲು ಚಿಂತನೆ ನಡೆಸಲಾಗುತ್ತಿದೆ. ಸ್ಥಳೀಯವಾಗಿ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ಕಡೆಗೂ ಗಮನ ನೀಡಲಾಗಿದೆ ಎಂದರು.

ರಾಜ್ಯವು ಇಡೀ ದೇಶದಲ್ಲಿ ಆರ್ಥಿಕ ಶಿಸ್ತಿನ ರಾಜ್ಯ, ಇತರೆ ರಾಜ್ಯಗಳು ನಮ್ಮನ್ನು ನೋಡಿ ಅನುಸರಿಸಬೇಕೆಂದು 15 ನೆ ನೀತಿ ಆಯೋಗದ ಅಧ್ಯಕ್ಷರೇ ಹೇಳಿದ್ದಾರೆ. ವಿತ್ತೀಯ ಶಿಸ್ತಿನಿಂದ ಕರ್ನಾಟಕ ಕೈಗಾರಿಕಾ ಕ್ಷೇತ್ರದಲ್ಲಿ ಮಹತ್ತರವಾದ ಸಾಧನೆ ಮಾಡಿದೆ. ಇಡೀ ದೇಶದಲ್ಲಿ ಕರ್ನಾಟಕವು ಕೈಗಾರಿಕೆ, ಆರೋಗ್ಯ, ಶಿಕ್ಷಣ ಸೇವೆ ಸೇರಿದಂತೆ ಹಲವು ರಂಗಗಳಲ್ಲಿ ಮುಂದಿದೆ ಎಂದು ತಿಳಿಸಿದರು.

ರಾಜ್ಯ ಸರಕಾರ ಕರ್ನಾಟಕ ವಾಣಿಜ್ಯ ಮಹಾ ಮಂಡಳಿಗೆ ಮೊದಲಿನಿಂದಲೂ ಸಾಕಷ್ಟು ಬೆಂಬಲ ನೀಡಲಾಗುತ್ತಿದೆ. ಕೈಗಾರಿಕೆ ಮತ್ತು ಬಂಡವಾಳ ಹೂಡಿಕೆ ವಿಷಯದಲ್ಲಿ ಸಂಸ್ಥೆ ಜತೆಗೂಡಿ ಕೆಲಸ ಮಾಡಲಾಗುತ್ತಿದೆ. ಕಳೆದ ಒಂದು ವರ್ಷದಲ್ಲಿ ಅಂದಾಜು ಎರಡು ಲಕ್ಷ ಕೋಟಿ ಬಂಡವಾಳ ರಾಜ್ಯಕ್ಕೆ ಹರಿದುಬಂದಿದೆ ಎಂದು ನೆನಪಿಸಿದರು.

ಸಮ್ಮಿಶ್ರ ಸರಕಾರದಲ್ಲಿ ಒಬ್ಬರ ಮೇಲೊಬ್ಬರು ವಾದ-ಅಪವಾದ ಮಾಡುತ್ತಿರುತ್ತಾರೆ ಎಂದುಕೊಳ್ಳಬಹುದು. ಅದೊಂದು ರಾಜಕೀಯದಾಟವಷ್ಟೇ. ಆದರೆ, ನಮ್ಮ ಗಮನ ಎಂದಿಗೂ ಅಭಿವೃದ್ಧಿಯ ಕಡೆಗೆ ಇರುತ್ತದೆ. ಒಂದು ವರ್ಷದಲ್ಲಿ ಗಣನೀಯ ಸಾಧನೆ ಮಾಡಲಿದ್ದೇವೆ. ರಾಜಕೀಯ ಏನೇ ಇದ್ದರೂ ರಾಜ್ಯದ ಅಭಿವೃದ್ಧಿಗೆ ಗಮನ ನೀಡುತ್ತೇವೆ ಎಂದು ಪ್ರತಿಪಾದಿಸಿದರು.

ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಸುಧಾಕರ್ ಶೆಟ್ಟಿ, ಹದಿನಾಲ್ಕನೇ ಹಣಕಾಸು ಆಯೋಗದ ಸದಸ್ಯ ಡಾ.ಎನ್.ಗೋವಿಂದರಾವ್, ಏಷ್ಯನ್ ಇಂಡಿಯಾ ಬ್ಯುಸಿನೆಟ್ ಕೌನ್ಸಿಲ್ ಅಧ್ಯಕ್ಷ ದತ್ತು ರಮೇಶ್, ಎಫ್‌ಕೆಸಿಸಿಐನ ನೂತನ ಅಧ್ಯಕ್ಷ ಜನಾರ್ದನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News