ಜಾರಿ ನಿರ್ದೇಶನಾಲಯದ ಸಮನ್ಸ್‌ ಬಗ್ಗೆ ಪ್ರತಿಕ್ರಿಯಿಸಿದ ಸಚಿವ ಝಮೀರ್

Update: 2019-06-28 13:56 GMT

ಬೆಂಗಳೂರು, ಜೂ. 28: ಐ ಮಾನಿಟರಿ ಅಡ್ವೈಸರಿ(ಐಎಂಎ) ಕಂಪೆನಿ ವಂಚನೆ ಪ್ರಕರಣದ ಹಿನ್ನೆಲೆಯಲ್ಲಿ ಕಂಪೆನಿಯೊಂದಿಗೆ ವ್ಯವಹಾರ ನಡೆಸಿದ ಸಂಬಂಧ ವಿವರಣೆ ಕೋರಿ ಜಾರಿ ನಿರ್ದೇಶನಾಲಯ(ಈ.ಡಿ) ನೋಟಿಸ್ ನೀಡಿದ್ದು ಉತ್ತರ ನೀಡುತ್ತೇನೆ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಖಾತೆ ಸಚಿವ ಬಿ.ಝಡ್.ಝಮೀರ್ ಅಹ್ಮದ್‌ ಖಾನ್ ಸ್ಪಷ್ಟಪಡಿಸಿದ್ದಾರೆ.

ಶುಕ್ರವಾರ ವಿಕಾಸಸೌಧದಲ್ಲಿನ ತನ್ನ ಕಚೇರಿಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, 2017ರಲ್ಲಿ ಐಎಂಎಗೆ ಆಸ್ತಿಯೊಂದನ್ನು ಮಾರಾಟ ಮಾಡಿದ್ದೆ. ಆಸ್ತಿ ಮಾರಾಟ ಮಾಡಿದ್ದು ಬಿಟ್ಟರೆ ಆ ಕಂಪೆನಿ ಜತೆ ಬೇರೆ ವ್ಯವಹಾರದಲ್ಲಿ ನನಗೂ ಮನ್ಸೂರ್ ಖಾನ್‌ಗೂ ಯಾವುದೇ ಸಂಬಂಧ ಇಲ್ಲ ಎಂದು ಸ್ಪಷ್ಟನೆ ನೀಡಿದರು.

ಆಸ್ತಿ ಮಾರಾಟ ಸಂಬಂಧ ಜುಲೈ 5ರೊಳಗೆ ಸಂಪೂರ್ಣ ವಿವರ ನೀಡುವಂತೆ ಜಾರಿ ನಿರ್ದೇಶನಾಲಯ (ಈ.ಡಿ) ಅಧಿಕಾರಿಗಳು ಸಮನ್ಸ್ ನೀಡಿದ್ದು, ನಾನು ನಡೆಸಿದ ವ್ಯವಹಾರದ ಬಗ್ಗೆ ಎಲ್ಲ ಮಾಹಿತಿಯನ್ನು ನೀಡಲು ನಾನು ಸಿದ್ಧನಿದ್ದೇನೆ ಎಂದು ಅವರು ಹೇಳಿದರು.

‘ಐಎಂಎ ಕಂಪೆನಿ ವಂಚನೆ ಪ್ರಕರಣದಲ್ಲಿ ‘ಉಪ್ಪು ತಿಂದವರು ನೀರು ಕುಡಿಯಲೇಬೇಕು’ ಎಂಬ ಮಾತಿನಂತೆ ಯಾರೇ ಉಪ್ಪು ತಿಂದಿದ್ದರೂ ನೀರು ಕುಡಿಯಬೇಕು. ಸಿಬಿಐ ಸೇರಿದಂತೆ ಯಾವುದೇ ತನಿಖೆ ನಡೆದರೂ ನನಗೇನೂ ಭಯವಿಲ್ಲ’

-ಝಮೀರ್ ಅಹ್ಮದ್‌ ಖಾನ್, ಆಹಾರ ಸಚಿವ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News