ಐಎಂಎ ವಂಚನೆ ಪ್ರಕರಣ: ಮನ್ಸೂರ್ ಮಾಲಕತ್ವದ 209 ಕೋಟಿ ಮೌಲ್ಯದ ಆಸ್ತಿ ಜಪ್ತಿ

Update: 2019-06-28 14:00 GMT

ಬೆಂಗಳೂರು, ಜೂ.28: ಐಎಂಎ ಬಹುಕೋಟಿ ವಂಚನೆ ಪ್ರಕರಣ ಸಂಬಂಧ ಪ್ರಮುಖ ಆರೋಪಿ ಮನ್ಸೂರ್ ಖಾನ್ ಮಾಲಕತ್ವದ 209 ಕೋಟಿ ರೂ. ಮೌಲ್ಯದ ಆಸ್ತಿಯನ್ನು ಜಾರಿ ನಿರ್ದೇಶನಾಲಯ(ಇಡಿ) ಮುಟ್ಟುಗೋಲು ಹಾಕಿಕೊಂಡಿದೆ.

ಅಕ್ರಮ ಹಣ ರವಾನೆ ಕಾಯ್ದೆಯಡಿ ಬೆಂಗಳೂರು ವಲಯ ಕಚೇರಿ ಐಎಂಎಗೆ ಸೇರಿದ ಆಸ್ತಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ತಾತ್ಕಾಲಿಕ ಆದೇಶ ಹೊರಡಿಸಿದೆ. ಸಂಸ್ಥೆಯ 197 ಕೋಟಿ ರೂ. ಮೌಲ್ಯದ ಚರಾಸ್ಥಿ ಮತ್ತು ಬ್ಯಾಂಕ್ ಖಾತೆಗಳಲ್ಲಿರುವ 12 ಕೋಟಿ ಠೇವಣಿ ಸೇರಿ 209 ಕೋಟಿ ರೂ.ಗಳನ್ನು ವಶಕ್ಕೆ ಪಡೆಯಲಾಗಿದೆ.

ಅಕ್ರಮ ಹಣ ರವಾನೆ ಸಂಬಂಧ ಐಎಂಎ ಸಮೂಹ ಕಂಪೆನಿ ಹಾಗೂ ವ್ಯವಸ್ಥಾಪಕ ನಿರ್ದೇಶಕ ಮುಹಮ್ಮದ್ ಮನ್ಸೂರ್ ಖಾನ್ ವಿರುದ್ಧ ಜಾರಿ ನಿರ್ದೇಶನಾಲಯ ಇತ್ತೀಚೆಗೆ ಕ್ರಿಮಿನಲ್ ಪ್ರಕರಣ ದಾಖಲಿಸಿತ್ತು. ಹೂಡಿಕೆದಾರರಿಗೆ 2.5 ರಿಂದ ಶೇ. 3ರ ರಷ್ಟು ತಿಂಗಳಿಗೆ ಹಣ ನೀಡುವುದಾಗಿ ಮನ್ಸೂರ್ ಖಾನ್ ಭರವಸೆ ನೀಡಿದ್ದ. ಈ ಸಂಸ್ಥೆಯಲ್ಲಿ ಹಣ ಹೂಡಿಕೆ ಮಾಡಿರುವವರು ಅಲ್ಪಸಂಖ್ಯಾತ ಸಮುದಾಯಕ್ಕೆ ಸೇರಿದವರಾಗಿದ್ದಾರೆ ಎಂದು ಜಾರಿ ನಿರ್ದೇಶನಾಲಯ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ ತಿಳಿಸಿದೆ.

ಸಾವಿರಾರು ಕೋಟಿ ರೂ. ಅಮಾಯಕರಿಗೆ ಪಂಗನಾಮ ಹಾಕಿ ವಿದೇಶಕ್ಕೆ ಪರಾರಿಯಾದ ಮನ್ಸೂರ್ ಖಾನ್ ಆಡಿಯೊ ಬಿಡುಗಡೆ ಮಾಡಿ, ತನ್ನ ಒಡೆತನದ ಕಂಪೆನಿ ಭಾರಿ ನಷ್ಟ ಅನುಭವಿಸಿದೆ ಎಂದು ಮಾಹಿತಿ ನೀಡಿದ್ದ. ಈ ಸಂಬಂಧ ಜಾರಿ ನಿರ್ದೇಶನಾಲಯ ಮನ್ಸೂರ್ ಖಾನ್‌ಗೆ ಹಲವು ಬಾರಿ ಸಮನ್ಸ್ ಜಾರಿಗೊಳಿಸಿತ್ತಾದರೂ ಯಾವುದೇ ಪ್ರತಿಕ್ರಿಯೆ ನೀಡಿರಲಿಲ್ಲ. ಆಗ ಮನ್ಸೂರ್‌ಖಾನ್ ದೇಶ ತೊರೆದಿರುವ ಬಗ್ಗೆ ಶಂಕೆ ವ್ಯಕ್ತವಾಯಿತು ಎಂದು ಹೇಳಿಕೆಯಲ್ಲಿ ತಿಳಿಸಿದೆ.

ಸಾವಿರಾರು ಕೋಟಿ ರೂ. ವಂಚಿಸಿರುವ ಮನ್ಸೂರ್ ಖಾನ್ ಬಂಧನಕ್ಕೆ ಇಂಟರ್ ಪೋಲ್ ನೆರವು ಕೋರಲಾಗಿದೆ. ಈತನ ಬಂಧನಕ್ಕಾಗಿ ಕರ್ನಾಟಕ ಸರಕಾರವು ವಿಶೇಷ ತನಿಖಾ ತಂಡ ರಚಿಸಿದ್ದು ತನಿಖೆ ತೀವ್ರಗೊಳಿಸಲಾಗಿದೆ ಎಂದು ಈ.ಡಿ ಹೇಳಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News