ಬೆಂಗಳೂರು ನಗರದ ನಾಲ್ಕು ದಿಕ್ಕುಗಳಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ: ಡಿಸಿಎಂ ಪರಮೇಶ್ವರ್

Update: 2019-06-28 14:23 GMT

ಬೆಂಗಳೂರು, ಜೂ.28: ಸಾರ್ವಜನಿಕರಿಗೆ ಅನುಕೂಲವಾಗಲಿ ಎಂಬ ಉದ್ದೇಶದಿಂದ ಬೆಂಗಳೂರು ನಗರದ 4 ದಿಕ್ಕುಗಳಲ್ಲೂ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದೆ ಎಂದು ಉಪ ಮುಖ್ಯಮಂತ್ರಿ ಹಾಗೂ ಬೆಂಗಳೂರು ನಗರಾಭಿವೃದ್ಧಿ ಸಚಿವ ಡಾ.ಜಿ.ಪರಮೇಶ್ವರ್ ತಿಳಿಸಿದ್ದಾರೆ.

ದಿನ್ನೂರು ಮುಖ್ಯರಸ್ತೆ ಅಗಲೀಕರಣ ಸಂಬಂಧ ಸ್ಥಳೀಯರೊಂದಿಗೆ ಅಭಿಪ್ರಾಯ ಸಂಗ್ರಹಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಗರದ ಅಭಿವೃದ್ಧಿಯೇ ನಮ್ಮ ಮುಖ್ಯ ಗುರಿಯಾಗಿದೆ. ಈ ಹಿನ್ನೆಲೆಯಲ್ಲಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳನ್ನು ನಿರ್ಮಿಸಲು ಚಿಂತನೆ ನಡೆಸಿದ್ದೇವೆ ಎಂದರು.

ಅದರ ಜತೆಗೆ ಲಾಲ್‌ಬಾಗ್, ಕಬ್ಬನ್ ಪಾರ್ಕ್ ಮಾದರಿಯಲ್ಲಿ ಉದ್ಯಾನವನ ಹಾಗೂ ಕಂಠೀರವ ಸ್ಟೇಡಿಯಂ ಮಾದರಿಯಲ್ಲಿ ನಾಲ್ಕು ಸ್ಟೇಡಿಯಂಗಳನ್ನು ನಿರ್ಮಿಸಲು ಉದ್ದೇಶಿಸಲಾಗಿದ್ದು, ಸ್ಥಳ ಗುರುತಿಸಲು ಸೂಚನೆ ನೀಡಲಾಗಿದೆ ಎಂದ ಅವರು, ಹೆಬ್ಬಾಳ ಕ್ಷೇತ್ರದಲ್ಲಿ ಸುಸಜ್ಜಿತ ಆಸ್ಪತ್ರೆ ಹಾಗೂ ಗ್ರಂಥಾಲಯ ಮರು ನಿರ್ಮಾಣಕ್ಕೆ ಪ್ರಸ್ತಾವನೆ ಸಲ್ಲಿಸುವಂತೆ ಶಾಸಕರಲ್ಲಿ ಮನವಿ ಮಾಡಿದರು.

ದಿನ್ನೂರು ಮುಖ್ಯರಸ್ತೆ ಅಗಲೀಕರಣಕ್ಕೆ ಈಗಾಗಲೇ ನೀಲನಕ್ಷೆ ಸಿದ್ಧಪಡಿಸಲಾಗಿದೆ. ಆದಷ್ಟು ಈ ಭಾಗದ ಸಾರ್ವಜನಿಕರ ಅಹವಾಲನ್ನು ಪರಿಗಣಿಸಿ ಕಾಮಗಾರಿ ಚಾಲನೆ ನೀಡಲಾಗುವುದು. ಈ ರಸ್ತೆಯ ಎರಡು ಭಾಗದಲ್ಲಿ 80 ಅಡಿ ಸ್ಥಳ ಒಡೆಯಲು ಮೊದಲು ಅಂದಾಜಿಸಲಾಗಿತ್ತು. ಆದರೆ ಅಂಗಡಿ ಮನೆಗಳನ್ನು ಒಡೆಯದಂತೆ ಸ್ಥಳೀಯರು ಮನವಿ ಮಾಡಿದ್ದಾರೆ. ಇದನ್ನು ಪರಿಗಣಿಸಿ 40 ಅಡಿಗಳಷ್ಟು ರಸ್ತೆಯನ್ನು ಅಗಲೀಕರಣ ಮಾಡುವ ಬಗ್ಗೆ ಚಿಂತನೆ ನಡೆಸಲಾಗುವುದು ಎಂದು ತಿಳಿಸಿದರು.

ಸ್ಥಳೀಯರು 10 ಅಡಿಗಳಷ್ಟೇ ಅಗಲೀಕರಣ ಮಾಡಿ ಎಂದು ಮನವಿ ಮಾಡಿದ್ದಾರೆ. ಇದನ್ನು ಕೂಡ ಪರಿಶೀಲಿಸಲಾಗುವುದು ಎಂದ ಅವರು, ದಿನ್ನೂರು ಮುಖ್ಯರಸ್ತೆಯಲ್ಲಿ ವಾಹನ ಸಂಚಾರ ದಟ್ಟಣೆ ಅಧಿಕವಾಗಿದೆ. ಹಾಗಾಗಿ ಇಲ್ಲಿ ರಸ್ತೆ ಅಗಲೀಕರಣ ಮಾಡಲು ಯೋಜಿಸಲಾಗುವುದು ಎಂದು ಹೇಳಿದರು. ದಿನ್ನೂರು ಮುಖ್ಯ ರಸ್ತೆಯಲ್ಲಿ ನಿರ್ಮಾಣ ಮಾಡಿರುವ ಅಪಾರ್ಟ್‌ಮೆಂಟ್ ರಾಜಕಾಲುವೆಯನ್ನು ಒತ್ತುವರಿ ಮಾಡಿಕೊಂಡಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ನ್ಯಾಯಾಲಯದಲ್ಲಿ ತಡೆಯಾಜ್ಞೆ ಪಡೆದುಕೊಂಡಿದ್ದಾರೆ. ಈ ತಡೆಯಾಜ್ಞೆಯನ್ನು ತೆರವುಗೊಳಿಸಿ ಒತ್ತುವರಿ ತೆರವು ಕಾರ್ಯಾಚರಣೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಉಪಮುಖ್ಯಮಂತ್ರಿ ಪರಮೇಶ್ವರ್ ದಿನ್ನೂರು ಮುಖ್ಯರಸ್ತೆ ಅಗಲೀಕರಣ ತಪಾಸಣೆ ವೇಳೆ ಸ್ಥಳೀಯ ನಾಗರಿಕರು, ಸಂಸ್ಥೆಗಳ ಸಂಘಟಕರು ಅಹವಾಲುಗಳನ್ನು ಸಲ್ಲಿಸಿದರು. ರಸ್ತೆ ಅಗಲೀಕರಣದ ಅವಶ್ಯಕತೆಯಿಲ್ಲ. ಸುಸಜ್ಜಿತ ರಸ್ತೆ ಮಾಡಿಕೊಟ್ಟರೆ ಸಾಕು. ರಸ್ತೆಗಳಲ್ಲಿ ವಿದ್ಯುತ್ ಟ್ರಾನ್ಸ್‌ಫಾರ್ಮರ್‌ಗಳು ಹೆಚ್ಚಾಗಿವೆ. ರಸ್ತೆಗಳೇ ಕಸದ ತೊಟ್ಟಿಗಳಾಗಿವೆ. ರಸ್ತೆಗಳು ಗುಂಡಿಬಿದ್ದಿವೆ, ಸರಿ ಮಾಡಿಸಿ ಎಂದು ಸಾರ್ವಜನಿಕರು ಮನವಿ ಮಾಡಿದರು. ಈ ವೇಳೆ ಡಿಸಿಎಂ ಈ ಸಂಬಂಧ ಯೋಚಿಸಲಾಗುವುದು ಎಂದು ಭರವಸೆ ನೀಡಿದರು.

ಉಪ ಮುಖ್ಯಮಂತ್ರಿ ಜತೆಯಲ್ಲಿ ಮೇಯರ್ ಗಂಗಾಂಬಿಕೆ ಮಲ್ಲಿಕಾರ್ಜುನ, ಉಪಮೇಯರ್ ಭದ್ರೇಗೌಡ, ಶಾಸಕ ಅಖಂಡ ಶ್ರೀನಿವಾಸಮೂರ್ತಿ, ಆಡಳಿತ ಪಕ್ಷದ ಅಬ್ದುಲ್ ವಾಜಿದ್, ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಸೇರಿದಂತೆ ಮತ್ತಿತರು ಉಪಸ್ಥಿತರಿದ್ದರು.

ಪರಮೇಶ್ವರ್ ಕ್ಷಮೆಯಾಚನೆ

ರಸ್ತೆ ಅಗಲೀಕರಣ ಕಾಮಗಾರಿ ಪರಿಶೀಲನೆಗೆ ತೆರಳಿದ್ದ ಪರಮೇಶ್ವರ್‌ಗೆ ಸಂಚಾರಿ ಪೊಲೀಸರು ಝೀರೋ ಟ್ರಾಫಿಕ್ ವ್ಯವಸ್ಥೆ ಕಲ್ಪಿಸಿದ್ದರು. ಇದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳ ಸಮಯವಾಗಿದ್ದರಿಂದ ತೊಂದರೆಗೆ ಸಿಕ್ಕಿಕೊಂಡಿದ್ದರು. ಇದನ್ನು ಮನಗಂಡ ಅವರು, ವಿದ್ಯಾರ್ಥಿಗಳಿಗೆ ತೊಂದರೆಯಾಗಿದ್ದರೆ ಕ್ಷಮೆಯಿರಲಿ ಎಂದು ಹೇಳಿದ್ದಾರೆ.

ಪರಮೇಶ್ವರ್ ಅಸಮಾಧಾನ

ಕಳೆದ ಲೋಕಸಭಾ ಚುನಾವಣೆಯ ಫಲಿತಾಂಶದ ಬಗ್ಗೆ ಪರೋಕ್ಷವಾಗಿ ಅಸಮಾಧಾನ ಹೊರ ಹಾಕಿದ ಪರಮೇಶ್ವರ್, ಇಲ್ಲಿ ಮೈತ್ರಿ ಸರಕಾರದ ಅಭ್ಯರ್ಥಿಗಳಿಗೆ ಮತ ಹಾಕಿದ್ದಾರೋ ಇಲ್ಲವೋ ಗೊತ್ತಿಲ್ಲ ಅಥವಾ ಕೆಲವರು ಬಿಜೆಪಿಗೆ ಮತ ಹಾಕಿರಲೂಬಹುದು. ಲೋಕಸಭೆ ಚುನಾವಣೆ ಎದುರಾಗಿದ್ದರಿಂದ ಈ ಭಾಗದ ಕಾಮಗಾರಿಯನ್ನು ವೀಕ್ಷಿಸಲು ಸಾಧ್ಯವಾಗಲಿಲ್ಲ. ಈಗ ಚುನಾವಣೆ ಮುಗಿದಿದೆ. ಹಾಗಾಗಿ ಕಾಮಗಾರಿಗಳನ್ನು ವೀಕ್ಷಿಸುತ್ತಿದ್ದೇನೆ ಎಂದು ಮಾಹಿತಿ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News